ತನ್ನ ಜಮೀನಿಗೆ ಹೋಗಲು ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಉಂಟಾದ ವೈಷಮ್ಯ ವಿಕೋಪಕ್ಕೆ ತಿರುಗಿ ಜೀವನಕ್ಕೆ ಆಧಾರವಾಗಿದ್ದ ನೂರಾರು ಅಡಿಕೆ ಮರಗಳನ್ನು ಅಮಾನುಷವಾಗಿ ಕಡಿದು ವಿಕೃತಿ ಮೆರೆದಿರುವ ಘಟನೆ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಜನಕದೇವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಡಬ ಹೋಬಳಿಯ ಜನಕ ದೇವನಹಳ್ಳಿ ಗ್ರಾಮದ ರವೀಶ್ ಎಂಬುವರಿಗೆ ಸೇರಿದ ಸರ್ವೇ ನಂಬರ್ 14 ರ ವಿಸ್ತೀರ್ಣ 2 ಎಕರೆ 16 ಗುಂಟೆ ಜಮೀನಿನಲ್ಲಿ ಸೊಗಸಾಗಿ ಬೆಳೆದು ನಿಂತಿದ್ದ 60 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ತಡರಾತ್ರಿ ದಾರುಣವಾಗಿ ಕಡಿದು ಹಾಕಿರುವ ಘಟನೆ ನಡೆದಿದೆ.
ಕಳೆದ 3 ತಿಂಗಳ ಹಿಂದೆ ಪಕ್ಕದ ಜಮೀನಿನ ಮಾಲೀಕರೊಬ್ಬರು ತಮ್ಮ ಜಮೀನಿಗೆ ಹೋಗಲು ರಸ್ತೆ ಇಲ್ಲ ಎಂದು ಗುಬ್ಬಿ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ್ದು, ಈ ಪೈಕಿ ವಿಚಾರಣೆ ನಡೆಸಿದ ಪೊಲೀಸರು ದೂರು ನೀಡಿದ್ದ ವ್ಯಕ್ತಿಗೆ ತಿಳುವಳಿಕೆ ನೀಡಿ ಕಳುಹಿಸಿದ್ದರು. ಅಂದಿನಿಂದ ಸುಮ್ಮನಿದ್ದ ಕೆಲವರು ನಮ್ಮಗಳ ಮೇಲಿನ ದ್ವೇಷಕ್ಕೆ ಮಕ್ಕಳಂತೆ ಬೆಳೆಸಿದ್ದ ಅಡಿಕೆ ಮರಗಳನ್ನು ತಡರಾತ್ರಿ ಕಡಿದು ಹಾಕಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಜಮೀನು ಮಾಲೀಕ ರವೀಶ್ ಹೆಂಡತಿ ಮಹಾದೇವಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಹಾದೇವಮ್ಮ ರವರ ತಾಯಿ ಚಿಕ್ಕಮ್ಮ ಮಾತನಾಡಿ ಜೀವನಕ್ಕೆ ಆಧಾರವಾಗಿದ್ದ ಅಡಿಕೆ ಮರಗಳನ್ನು ಕಡಿದು ಹಾಕಿದ್ದಾರೆ. ಇಂಥಹ ಕೆಲಸ ಮಾಡಿರುವ ಇವರನ್ನು ದೇವರು ಎಂದಿಗೂ ಶಿಕ್ಷೆ ನೀಡದೆ ಬಿಡುವುದಿಲ್ಲ ಎಂದು ಭಾವುಕರಾದರು.
ಮಗ ಸಂಜಯ್ ಮಾತನಾಡಿ ಹಲವು ವರ್ಷಗಳಿಂದ ಕಷ್ಟ ಪಟ್ಟು ಹೊಟ್ಟೆ ಬಟ್ಟೆ ಕಟ್ಟಿ ಅಡಿಕೆ ಮರಗಳನ್ನು ಹಾಕಿದ್ದೋ ಆದರೆ ರಸ್ತೆ ಬಿಡಲಿಲ್ಲ ಎಂಬ ಮಾತ್ರಕ್ಕೆ ಪಕ್ಕದ ಜಮೀನಿನ ಗಂಗಾಧರಯ್ಯ ನ ಮಗ ಬಸವರಾಜು ಈ ಕೃತ್ಯ ಮಾಡಿದ್ದು ಮರಗಳನ್ನೇ ಈ ರೀತಿ ಮಾಡಿರುವ ಇವರು ನಮ್ಮ ಮೇಲೆ ಏನೆಲ್ಲಾ ಮಾಡುತ್ತಾರೆ ಎಂಬುದನ್ನ ಅರಿತು ನಮಗೆ ನ್ಯಾಯ ಕೊಡಿಸುವಂತೆ ಅಂಗಲಾಚಿದರು.