ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿಯೊಬ್ಬಳು ತಾನೂ ಕೂಡ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯ ಆದಲಗೆರೆ ಗ್ರಾಮದಲ್ಲಿ ವಾಸವಾಗಿದ್ದ ಮಹದೇವಯ್ಯ ಎಂಬುವರ ಹೆಂಡತಿಯಾದ ವಿಜಯಲಕ್ಷ್ಮಿ(45) ತನ್ನ ಮಗಳು ಚೂಡಾಮಣಿ(18),
ಹಾಗೂ ನರಸಿಂಹಮೂರ್ತಿ(14) ಎಂಬ ಮಗನೊಂದಿಗೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ 6 ಗಂಟೆ ಸಮಯದಲ್ಲಿ ಅವರ ಸ್ವಗೃಹದಲ್ಲಿ ನಡೆದಿದೆ.
ಅಂಗ ವೈಪಲ್ಯತೆಯಿಂದ ಬಳಲುತ್ತಿದ್ದ ತನ್ನ ಇಬ್ಬರು ಮಕ್ಕಳ ಜೊತೆಗೆ ಇತ್ತೀಚೆಗೆ ತಾಯಿಯ ಆರೋಗ್ಯದಲ್ಲಿ ಏರು ಪೇರು ಆಗುತ್ತಿದ್ದು, ತನ್ನ ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ಅನಾರೋಗ್ಯದ ಕಾರಣದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ಪೊಲೀಸ್. ಮೂಲಗಳು ತಿಳಿಸಿವೆ.
ಚಿಲ್ಲರೆ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಮೃತ ಮಹಿಳೆಯ ಪತಿ ಮಹದೇವಯ್ಯ ಅಂಗಡಿಗೆ ಬೇಕಾದ ದಿನಸಿ ಸಾಮಗ್ರಿ ತರಲು ತುಮಕೂರಿಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಗಂಡ ಮನೆಗೆ ಬಂದು ನೋಡಲಾಗಿ ವಿಚಾರ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಈಗಾಗಲೇ ಚೇಳೂರು ಪೊಲೀಸರು ಮೊಕಂ ಹೂಡಿದ್ದು ನಡೆದಿರುವ ತಾಯಿ ಮಕ್ಕಳ ಸಾವಿಗೆ ನಿಖರ ಕಾರಣದ ಪತ್ತೆಗೆ ಮುಂದಾಗಿ ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ಸ್ಥಳಕ್ಕೆ ಸಿಪಿಐ ರಾಘವೇಂದ್ರ ಭೇಟಿ ನೋಡಿ ಸೂಕ್ಷ್ಮ ವಿಚಾರ ಆಲಿಸಿ ತನಿಖೆಗೆ ತಂಡ ರಚಿಸಿದ್ದಾರೆ.