ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಲು ಬುಧವಾರ ನಡೆದ ಅವಿಶ್ವಾಸ ನಿರ್ಣಯ ಸಭೆಗೆ ಮುನ್ನ ನಡೆದ ಹೈಡ್ರಾಮಾದಿಂದ ಸಭೆಗೆ ಸದಸ್ಯರ ಗೈರು ಕಾಣಿಸಿತು. ಅವಿಶ್ವಾಸ ಬದಲು ಅಧ್ಯಕ್ಷರ ಪರ ವಿಶ್ವಾಸ ಕಾಣಿಸಿದ್ದು ಅಚ್ಚರಿ ಎನಿಸಿತು. ಕೆಲ ಸದಸ್ಯರ ನಿರೀಕ್ಷೆ ಹುಸಿಯಾಗಿ ಮುಖಭಂಗ ಅನುಭವಿಸುವಂತಾಯಿತು.
ಬೆಳಿಗ್ಗೆ 11 ಗಂಟೆಗೆ ಅವಿಶ್ವಾಸ ನಿರ್ಣಯ ಸಭೆ ಕರೆದ ಉಪವಿಭಾಗಾಧಿಕಾರಿ ನಹೀದ್ ಜಂಜಂ ನಿಗದಿತ ಸಮಯದವರೆಗೆ ಕಾದು ಸದಸ್ಯರ ಗೈರು ಹಾಜರಾತಿ ಮೂಲಕ ತಮ್ಮ ಪ್ರಕ್ರಿಯೆ ಮುಗಿಸಿದರು.
ನಂತರ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದ ಅಧ್ಯಕ್ಷೆ ಭಾಗ್ಯಮ್ಮ ನರಸಿಂಹರಾಜು ಸೇರಿದಂತೆ ಒಟ್ಟು 13 ಮಂದಿ ಸದಸ್ಯರು ಒಗ್ಗೂಡಿ ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯ ವಿರೋಧವಾಗಿ ಪರ ನಿಂತು ಅಧ್ಯಕ್ಷರಿಗೆ ವಿಶ್ವಾಸ ವ್ಯಕ್ತ ಪಡಿಸಿದ ಹಿನ್ನಲೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ನರಸಿಂಹರಾಜು ಕಳೆದೆರೆಡು ವರ್ಷದಿಂದ ಪಂಚಾಯಿತಿಯಲ್ಲಿ ಎಲ್ಲಾ ಸದಸ್ಯರ ವಿಶ್ವಾಸದಲ್ಲಿ ಅಭಿವೃದ್ದಿ ಕೆಲಸ ಮಾಡಲಾಗಿದೆ. ನಾನು ಕೂಡ ನನ್ನ ಅವಧಿಯಲ್ಲಿ ಸದಸ್ಯರ ಎಲ್ಲಾ ಕೆಲಸವನ್ನು ಮಾಡಿದ್ದೇನೆ. ನಮ್ಮ ಕಾರ್ಯ ವೈಖರಿ ಸಹಿಸದ ಕೆಲ ಸದಸ್ಯರ ಚಿತಾವಣೆ ಇಂದು ವಿಫಲವಾಗಿದೆ. 13 ಸದಸ್ಯರ ಜೊತೆ ಚರ್ಚಿಸಿ ಮುಂದಿನ ನಾಲ್ಕು ತಿಂಗಳು ಅಧಿಕಾರ ಅಚ್ಚುಕಟ್ಟಾಗಿ ನಿರ್ವಹಿಸುತ್ತೇವೆ ಎಂದರು.
ಗ್ರಾಪಂ ಸದಸ್ಯ ರೇಣುಕಾ ಪ್ರಸಾದ್ ಮಾತನಾಡಿ ಕಳೆದೆರಡು ವರ್ಷದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಕೆಲಸಗಳು ನಡೆದಿವೆ. ಇತ್ತೀಚಿಗೆ ಕೆಲ ಸದಸ್ಯರ ಅಸಮಾಧಾನ ಈ ಅವಿಶ್ವಾಸ ಸಭೆಗೆ ಬಂದು ನಿಂತಿದೆ. ಆದರೆ ಅಧ್ಯಕ್ಷರ ಜೊತೆ 13 ಸದಸ್ಯರು ಇದ್ದ ಕಾರಣ ಸಭೆ ವಿಫಲವಾಗಿದೆ. ನನಗೂ ವೈಯಕ್ತಿಕವಾಗಿ ಸಾಕಷ್ಟು ನೋವುಗಳು ಆಗಿವೆ. ಅಧ್ಯಕ್ಷ ಸ್ಥಾನ ಸಿಗದಂತೆ ನನ್ನ ವಿರುದ್ಧ ಕುತಂತ್ರಗಳು ನಡೆದಿವೆ. ಈಗ ಅವುಗಳು ಅವರಿಗೆ ತಿರುಮಂತ್ರ ಆಗಿದೆ. ಉಳಿದ ನಾಲ್ಕು ತಿಂಗಳ ಅಧಿಕಾರಕ್ಕೆ ಎಲ್ಲಾ ಸದಸ್ಯರ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದರು.
ನಂತರ ಸದಸ್ಯರು ಸಭೆ ನಡೆಸಿ ಅಧ್ಯಕ್ಷರ ರಾಜೀನಾಮೆ ಪ್ರಹಸನ ಕೂಡಾ ಕೆಲ ಕಾಲ ನಡೆಯಿತು. ನಂತರ ಪಿಡಿಓ ಅವರ ಬಳಿ ರಾಜೀನಾಮೆ ಸಲ್ಲಿಸಿದ್ದಾರೆ. ಉಪ ವಿಭಾಗಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಲು ತುಮಕೂರು ಕಡೆ ಈ ಸದಸ್ಯರ ತಂಡ ತೆರಳಿದೆ. ರಾಜೀನಾಮೆ ಮುಂದಿನ ಆಡಳಿತ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು 13 ಸದಸ್ಯರು ಸಮ್ಮತಿ ವ್ಯಕ್ತಪಡಿಸಿದರು. ಸದಸ್ಯರ ಮುಂದಿನ ನಡೆ ಕೌತುಕವಾಗಿ ಕಾಣುತ್ತಿದೆ. ಉಳಿದ ನಾಲ್ಕು ತಿಂಗಳ ಅಧಿಕಾರ ಹಂಚಿಕೆ ಹೇಗೆ ಎಂಬ ಪ್ರಶ್ನೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರಲ್ಲಿ ಮೂಡಿದೆ.