ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಇರಬೇಕು. ಜನಪರ ಕಾಳಜಿ ಹೊಂದಿರಬೇಕು. ಅಭಿವೃದ್ದಿ ವಿಚಾರದಲ್ಲಿ ಸಲ್ಲದ ರಾಜಕೀಯ ಮಾಡದೇ ಪಕ್ಷ ಬೇದ ಮರೆತು, ಕೆಲಸಗಳಲ್ಲಿ ಕೇಂದ್ರ, ರಾಜ್ಯ ಎಂಬ ತಾರತಮ್ಯ ಇಲ್ಲದೆ ಅಬಿವೃದ್ದಿ ಮಾಡಬೇಕು ಎಂದು ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಪುರ ಗ್ರಾಮದಲ್ಲಿ ರೈಲ್ವೆ ಇಲಾಖೆ ಆಯೋಜಿಸಿದ್ದ ಎಲ್ ಸಿ 58 ಬಳಿ ಸುಮಾರು 50.57 ಕೋಟಿ ರೂಗಳ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಬಹುದಿನದ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆ ಹಾಗೂ ಅಂಡರ್ ಪಾಸ್ ಸೇತುವೆಗಳಿಗೆ ಚಾಲನೆ ಸಿಕ್ಕಿದೆ. ನನ್ನ ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿನಂತೆ ತಾಲ್ಲೂಕಿನಲ್ಲಿ 15 ಸೇತುವೆ ನಿರ್ಮಿಸಿ ದೇಶದಲ್ಲೇ ದಾಖಲೆ ಸೃಷ್ಟಿಸಿದ್ದೇನೆ ಎಂದು ತಮ್ಮ ಕೆಲಸದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ರಾಜಕಾರಣಿಗಳ ಕೆಲಸವನ್ನು ಮತದಾರರು ಸರಿ ಎಂದರೆ ಮಾತ್ರ ನಮ್ಮ ಕೆಲಸಕ್ಕೆ ಗೌರವ ಸಿಗಲಿದೆ. ನಿಟ್ಟೂರು ರೈಲ್ವೆ ಸ್ಟೇಶನ್ ನಲ್ಲಿ ಚಿಕ್ಕಮಗಳೂರು ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿದ ಹಿನ್ನಲೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಒಂದು ನಿಲ್ದಾಣದಲ್ಲಿ ರೈಲು ನಿಂತರೆ 16 ಸಾವಿರ ಹಣ ವ್ಯಯ ಆಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯರು ರೈಲ್ವೆ ಪ್ರಯಾಣ ಹೆಚ್ಚು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು ಅಬಿವೃದ್ದಿ ಕೆಲಸಕ್ಕೆ ತೊಂದರೆ ನೀಡದಿದ್ದರೆ ಒಂದೂವರೆ ವರ್ಷದಲ್ಲಿ ಉತ್ತಮ ಸೇತುವೆ ಜನರ ಬಳಕೆಗೆ ಸಿಗಲಿದೆ ಎಂದರು.
ಚತುಷ್ಪಥ ರಸ್ತೆಗೆ 120 ಕೋಟಿ ನೀಡಿದ ಕೇಂದ್ರದ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮನವಿ ಮಾಡಿ ಗುಬ್ಬಿ ಪಟ್ಟಣ ಸೇರಿದಂತೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ 28 ಕೋಟಿ ಹಾಗೂ ಮಲ್ಲಸಂದ್ರದಿಂದ ತುಮಕೂರು ಮುಖ್ಯರಸ್ತೆ ಸೇರಿಸಲು 85 ಕೋಟಿ ಮಂಜೂರು ಮಾಡಲಿದ್ದಾರೆ. ಶೀಘ್ರದಲ್ಲಿ ಈ ಚತುಷ್ಪಥ ರಸ್ತೆ ಗುಬ್ಬಿ ಪಟ್ಟಣಕ್ಕೆ ಮೆರಗು ನೀಡಲಿದೆ ಎಂದ ಅವರು 27 ಸಾವಿರ ಲೀಡ್ ಕೊಟ್ಟ ತಾಲ್ಲೂಕಿನ ಜನರ ಋಣ ತೀರಿಸಲು ಬದ್ಧನಾಗಿದ್ದೇನೆ. ಪ್ರಧಾನಿ ಮೋದಿ ಅವರ ಆದೇಶದಂತೆ ಕುಡಿಯುವ ನೀರು, ಶೌಚಾಲಯ, ಅಸಹಾಯಕರಿಗೆ ನೆರವು ಈ ಕಾರ್ಯಗಳನ್ನು ಪಕ್ಷ ಬೇದವಿಲ್ಲದೆ ನಡೆಸುತ್ತೇನೆ. ಚೆಕ್ ಡ್ಯಾಂ ನಿರ್ಮಾಣ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಿ ಜಿಲ್ಲಾ ಪಂಚಾಯಿತಿಗೆ ಕೆಲಸ ಮಾಡಲು ಸೂಚಿಸಿದ್ದೇನೆ ಎಂದರು.

ತುಮಕೂರು ರೈಲ್ವೆ ನಿಲ್ದಾಣಕ್ಕೆ 9 ಕೋಟಿ ನೀಡಿ ಅಭಿವೃದ್ದಿ ಮಾಡಿ ಶಿವಕುಮಾರ ಸ್ವಾಮಿ ಅವರ ಹೆಸರು ನಾಮಕರಣ ಮಾಡುವ ಜೊತೆಗೆ ರಾಜ್ಯದ 61 ರೈಲ್ವೆ ಸ್ಟೇಶನ್ ಮೇಲ್ದರ್ಜೆಗೇರಿಸುವ ಕೆಲಸ ನಡೆದಿದೆ. ಈ ಜೊತೆಗೆ ತುಮಕೂರು ರಾಯದುರ್ಗ ರೈಲು ಮಾರ್ಗ 2500 ಕೋಟಿ ರೂಗಳಲ್ಲಿ ಬಾಕಿ 83 ಕಿಮೀ ಕೆಲಸ ನಡೆದ ಮೂರು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಪಾವಗಡ, ಮಿಡಿಗೇಶಿ, ಮಧುಗಿರಿ, ಕೊರಟಗೆರೆ, ಊರುಕೆರೆ ಮಾರ್ಗ ನಿರ್ಮಾಣ ಹಾಗೂ ಶಿರಾ ಹಿರಿಯೂರು, ಚಿತ್ರದುರ್ಗ, ದಾವಣಗೆರೆ 182 ಕಿಮೀ ಮಾರ್ಗ ಸಿದ್ಧವಾಗಲಿದೆ ಎಂದು ವಿವರಿಸಿದ ಅವರು ದಿಶಾ ಸಭೆಯ ಮೂಲಕ ಸಾಕಷ್ಟು ಜಿಲ್ಲೆಯ ಅಭಿವೃದ್ಧಿ ವಿಚಾರ ಚರ್ಚೆ ಮಾಡಿದ್ದೇನೆ. ಕೋಟಿಗಟ್ಟಲೆ ಹಣ ವ್ಯಯ ಮಾಡಿದ ನಾಗವಲ್ಲಿ ಗೂಳೂರು ನೀರಾವರಿ ಯೋಜನೆಗೆ ಕಾಯಕಲ್ಪ ನೀಡುವ ಆಲೋಚನೆ ನಡೆದಿದೆ ಎಂದು ತಿಳಿಸಿದರು.
ಸ್ಥಳೀಯ ಮುಖಂಡರಿಗೆ ಬುದ್ಧಿವಾದ ಹೇಳಿದ ಕೇಂದ್ರ ಸಚಿವ ಸೋಮಣ್ಣ..!
ಬಿಜೆಪಿ ಮುಖಂಡರಲ್ಲಿ ಹೊಂದಾಣಿಕೆ ಬರಬೇಕಿದೆ. ಬುದ್ಧಿ ಹೇಳಿ ಸತ್ಯ ಮಾತಾಡಿದರೆ ರಾಮಾಯಣ, ಮಹಾಭಾರತ, ಕುರುಕ್ಷೇತ್ರ ಕಥೆ ಕಟ್ಟುವ ಮಂದಿ ಬಹಳ ಜನ ಇದ್ದಾರೆ. ಕಿವಿ ಕಚ್ಚುವ ಮಂದಿಯಿಂದ ದೂರವಿದ್ದು ಎಲ್ಲರ ಜೊತೆ ಅಡ್ಜೆಸ್ಟ್ ಆಗಿ ಕೆಲಸ ಮಾಡಿ ಎಂದು ಕೆಲವರಿಗೆ ಬುದ್ಧಿವಾದ ಹೇಳಿ ಮತ್ತೇ ಕೆಲವರಿಗೆ ಅಬಿವೃದ್ದಿ ವಿಚಾರದಲ್ಲಿ ತೊಡಕು ಮಾಡಬೇಡಿ ಎಂದು ಪರೋಕ್ಷವಾಗಿ ಸೂಚಿಸಿದರು. ವೇದಿಕೆಯಿಂದ ಕೆಳಗಿದ್ದ ನಾಯಕರಿಗೆ ಹಿಂದೆ ಹೋದರೆ ಹಾಗೆಯೇ ಹಿಂದಕ್ಕೆ ಹೋಗುತ್ತೀರಿ ಎಂದು ಮಾರ್ಮಿಕವಾಗಿ ಬುದ್ಧಿ ಹೇಳಿ ಪಕ್ಷ ರಾಜಕಾರಣ ಬಿಟ್ಟು ಅಬಿವೃದ್ದಿ ಕೆಲಸ ಮಾಡಿ. ಒಗ್ಗೂಡಿ ಜನಸೇವೆ ಮಾಡಿ, ಹೊಂದಿಕೊಂಡು ಹೋಗಿ ಎಂದು ಬುದ್ಧಿವಾದ ಹೇಳಿದ ಘಟನೆ ವೇದಿಕೆಯ ಭಾಷಣದ ಮಧ್ಯೆ ಮಧ್ಯೆ ಬರುತ್ತಿತ್ತು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಲತಾ ದಯಾನಂದ್, ತಹಶೀಲ್ದಾರ್ ಬಿ.ಆರತಿ, ದಿಶಾ ಸಮಿತಿಯ ವೈ.ಎಚ್.ಹುಚ್ಚಯ್ಯ, ಜಿಪಂ ಮಾಜಿ ಸದಸ್ಯರಾದ ಡಾ. ನವ್ಯಾ ಬಾಬು, ಯಶೋಧಮ್ಮ, ಪಿ.ಬಿ.ಚಂದ್ರಶೇಖರಬಾಬು, ಮುಖಂಡರಾದ ಹೆಬ್ಬಾಕ ರವಿ, ಎಸ್.ಡಿ.ದಿಲೀಪ್ ಕುಮಾರ್, ಎನ್.ಸಿ.ಪ್ರಕಾಶ್, ಜಿ.ಎನ್.ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಸಾಗರನಹಳ್ಳಿ ವಿಜಯ್ ಕುಮಾರ್, ಹಾರನಹಳ್ಳಿ ಪ್ರಭಣ್ಣ, ಶಂಕರಾನಂದ, ಪಪಂ ಸದಸ್ಯ ಜಿ.ಆರ್.ಶಿವಕುಮಾರ್, ಗ್ರಾಪಂ ಸದಸ್ಯ ಎನ್.ಬಿ.ರಾಜಶೇಖರ್, ರೈಲ್ವೆ ಅಧಿಕಾರಿಗಳಾದ ಅಜಯ್ ಶರ್ಮಾ, ಅಮಿತೇಶ್ ಸಿಂಗ್, ಪ್ರದೀಪ್ ಪುರಿ, ರಾಜೀವ್ ಶರ್ಮಾ, ಪರೀಕ್ಷಿತ್, ಗುತ್ತಿಗೆದಾರ ಸುಧಾಕರ್, ಇತರರು ಇದ್ದರು.