ದೇಶದ ಸರ್ವತೋಮುಖ ಅಭಿವೃದ್ಧಿಗೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಪೀಠಿಕೆ ಪ್ರತಿಯೊಬ್ಬ ಪ್ರಜೆಯ ಮನ ಮುಟ್ಟಿದ ನಾಗರೀಕ ಗ್ರಂಥ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಸಿ.ಯತೀಶ್ ತಿಳಿಸಿದರು
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರ್ವರಿಗೂ ಸಮಪಾಲು ಸಮಬಾಳು ತತ್ವ ರೂಡಿಸಿ ಜನರಿಂದ ಜನರಿಗಾಗಿ ಜನರಿಗೋಸ್ಕರ ಪ್ರಜಾಪ್ರಭುತ್ವ ಜಾರಿಗೆ ತಂದ ಸಂವಿಧಾನ ಅನುಷ್ಠಾನಗೊಳಿಸಿದ ಈ ದಿನ ಪೀಠಿಕೆ ಪ್ರತಿಯೊಬ್ಬರ ಮನ ಮನೆಯಲ್ಲಿ ಕಾಣಬೇಕು ಎಂದರು.
ತಹಶೀಲ್ದಾರ್ ಬಿ.ಆರತಿ ಮಾತನಾಡಿ ಸಂವಿಧಾನ ಸರ್ವ ಧರ್ಮ ಮತ ಪಂಥಗಳಿಗೆ ಏಕತೆ ತಂದು ಕೊಟ್ಟಿದೆ. ಡಾ.ಬಿ.ಆರ್.ಅಂಬೇಡ್ಕರ್ ಸಮಾಜದಲ್ಲಿನ ಅಸಮತೋಲನ ತೊಡೆದು ಉತ್ತಮ ಆಡಳಿತ ಒದಗಿಸುವ ಸಂವಿಧಾನವನ್ನು ರಚಿಸಿ ಇಡೀ ವಿಶ್ವದಲ್ಲೇ ಶ್ರೇಷ್ಠ ಪ್ರಜಾಪ್ರಭುತ್ವ ಸ್ಥಾಪನೆ ಮಾಡಿದರು. ಶೈಕ್ಷಣಿಕ ಪ್ರಗತಿಯಿಂದ ಆರ್ಥಿಕ, ಸಾಮಾಜಿಕ ಚೇತರಿಕೆ ಸಾಧ್ಯ ಎಂಬುದು ದೃಢಪಡಿಸಿದರು. ಈ ನಿಟ್ಟಿನಲ್ಲಿ ಆಧುನಿಕತೆಗೆ ತಕ್ಕಂತೆ ದೇಶ ಶಿಕ್ಷಣದ ಮೂಲಕ ಬೆಳೆಯುತ್ತಿದೆ. ಸಂವಿಧಾನ ಬಗ್ಗೆ ಎಲ್ಲರಲ್ಲೂ ಗೌರವ ಇರಬೇಕು. ಪೀಠಿಕೆ ಅನುಸಾರ ಸಮಾಜ ಸಾಗಿಸಬೇಕು ಎಂದು ಕರೆ ನೀಡಿದರು.
ಪಪಂ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ಸಂವಿಧಾನ ಬದ್ಧ ನಡವಳಿಕೆ ಇಡೀ ವಿಶ್ವ ಮೆಚ್ಚಿದೆ. ಉನ್ನತ ಮಟ್ಟದಲ್ಲಿ ರಾಷ್ಟ್ರ ಬೆಳೆಯಲು ಈ ಸಂವಿಧಾನ ಆವಶ್ಯವಿತ್ತು. ಅದೇ ನಿಟ್ಟಿನಲ್ಲಿ ಜಾತೀಯತೆ ನಡುವೆ ಜಾತ್ಯತೀತ ನಿಲುವು ಸಂವಿಧಾನ ಮೂಡಿಸಿಕೊಟ್ಟಿದೆ. ಈ ಬದ್ಧತೆಯನ್ನು ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ ಶೋಷಿತ ವರ್ಗಕ್ಕೆ, ದೀನ ದಲಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಇಡೀ ದೇಶದ ಅಭಿವೃದ್ಧಿಗೆ ಹಾಗೂ ಜಾತ್ಯತೀತ ಸಾಮಾಜಿಕ ನ್ಯಾಯಕ್ಕೆ ಸೀಮಿತವಾಗದೆ ಸಮಾಜದ ಕಟ್ಟ ಕಡೆಯ ದಟ್ಟದಾರಿದ್ರ್ಯ ಬದುಕಿಗೆ ಮುಕ್ತಿ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಡೆದಿದೆ. ಶಿಕ್ಷಣ ಎಂಬುದು ಮನುವಾದಿಗಳ ಸ್ವತ್ತು ಎಂಬಾತಾದ ಸಮಯದಲ್ಲಿ ಸರ್ವರಿಗೂ ಶಿಕ್ಷಣ ಒದಗಿಸುವ ಕೆಲಸ ಸಂವಿಧಾನ ಮಾಡಿದೆ. ಈ ನಿಟ್ಟಿನಲ್ಲಿ ಪೀಠಿಕೆ ಪ್ರತಿ ಮನೆಯಲ್ಲಿ ಪೂಜ್ಯ ರೀತಿಯಲ್ಲಿ ಇರಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ವೇದಿಕೆಯಲ್ಲಿ ಪಪಂ ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಜಿ.ಆರ್.ಶಿವಕುಮಾರ್, ಶಶಿಕುಮಾರ್, ಶ್ವೇತಾ, ತಾಪಂ ಇಓ ಶಿವಪ್ರಕಾಶ್, ಸಿಪಿಐ ಗೋಪಿನಾಥ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಸೇರಿದಂತೆ ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಯ ಮುಖಂಡರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.