ಕಳೆದ ಹದಿನೈದು ವರ್ಷದಿಂದ ನಡೆದಿರುವ ರಾಷ್ಟ್ರೀಯ ಹೆದ್ದಾರಿ 206 ರ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಪತ್ರೆ ಮತ್ತಿಘಟ್ಟ ಗ್ರಾಮದ ಬಳಿ ನೂರಾರು ವರ್ಷದ ರಾಜಕಾಲುವೆ ಮುಚ್ಚಿ ಸರಾಗವಾಗಿ ಹರಿಯುತ್ತಿದ್ದ ಮಳೆ ನೀರು ನೇರ ರೈತರ ತೋಟಕ್ಕೆ ಹರಿಬಿಟ್ಟಿರುವುದು ಪ್ರಾಧಿಕಾರದ ಅವೈಜ್ಞಾನಿಕ ಕೆಲಸಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪತ್ರೆ ಮತ್ತಿಘಟ್ಟ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಸದಸ್ಯ ಪತ್ರೆ ದಿನೇಶ್ ಮಾತನಾಡಿ ನೀರು ಕುಡಿದ ತೆಂಗು ಅಡಿಕೆ ಮರಗಳು ಫಲ ನೀಡದೆ ತನ್ನ ಬಣ್ಣ ಬದಲಿಸುತ್ತಿದೆ. ಕೊಳೆತು ಬೀಳುವ ಮರಗಳು ಸಾಕಿ ಸಲಹಿದ ರೈತರ ನೋವು ಅಧಿಕಾರಿಗಳಿಗೆ ಅರ್ಥ ಆಗುವುದಿಲ್ಲ. ಲಕ್ಷಾಂತರ ರೂ ಬೆಲೆಯ ಗೊಬ್ಬರ ಚೆಲ್ಲಿದ ರೈತ ಕೈಚೆಲ್ಲಿ ಕೂರುವ ದುಸ್ಥಿತಿ ತಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ, ತಾಲ್ಲೂಕು ಆಡಳಿತಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಈ ಬಗ್ಗೆ ಹಲವು ಬಾರಿ ದೂರು ನೀಡಿದರು ಪ್ರಯೋಜವಾಗಿಲ್ಲ. ಶಾಸಕರು, ಜಿಲ್ಲಾ ಸಚಿವರು, ಕೇಂದ್ರ ಸಚಿವರು ಇತ್ತ ಗಮನ ಹರಿಸಿ ರೈತರ ಬೆಳೆ ಉಳಿಸಿ ಎಂದು ಒತ್ತಾಯಿಸಿದರು.
ಹೊದಲೂರು ಕೆರೆಗೆ ಮಳೆ ನೀರು ಹರಿಯುವ ರಾಜಕಾಲುವೆ ಮುಚ್ಚಿದ ಪರಿಣಾಮ ಸುಮಾರು ನಾಲ್ಕು ಗ್ರಾಮದಿಂದ ಹರಿಯುವ ಮಳೆ ನೀರು ನೇರ ಪತ್ರೆ ಮತ್ತಿಘಟ್ಟ ಗ್ರಾಮದ ರೈತರ ಜಮೀನಿಗೆ ನುಗ್ಗಿದೆ. ಹೆದ್ದಾರಿ ಪಕ್ಕ ಗ್ರಾಮಕ್ಕೆ ಸಿದ್ಧಪಡಿಸಿದ ಸಿಸಿ ರಸ್ತೆ ಕೂಡಾ ಕಳಪೆ ಕಾಮಗಾರಿಯಾಗಿದೆ. ರಸ್ತೆ ಕೆಳಭಾಗದಲ್ಲಿ ಮಣ್ಣು ಕಸಿದು ಕಾಂಕ್ರೀಟ್ ಮಾತ್ರ ಉಳಿದಿದೆ. ರಸ್ತೆ ಪಕ್ಕದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಅರ್ಧಕ್ಕೆ ನಿಲ್ಲಿಸಿದ ಪರಿಣಾಮ ಮಳೆ ನೀರು ನೇರ ಪಕ್ಕದ ತೋಟಕ್ಕೆ ನುಗ್ಗಿದೆ. ಸಾವಿರಾರು ತೆಂಗು, ಅಡಿಕೆ ಮರಗಳ ಸುತ್ತ ನಾಲ್ಕು ಅಡಿಗಳಷ್ಟು ನೀರು ಆವೃತವಾಗಿದೆ ಎಂದು ಸ್ಥಳೀಯ ರೈತ ನಂಜುಂಡಪ್ಪ ಕಿಡಿಕಾರಿದರು.

ಹೆದ್ದಾರಿ ಪೂರ್ಣಗೊಳ್ಳುವ ಮುನ್ನ ಸಿಸಿ ರಸ್ತೆಯನ್ನು ಬಳಸುವ ಬೃಹತ್ ವಾಹನಗಳು ಈಗಾಗಲೇ ಇಲ್ಲಿ ಸಂಚರಿಸುತ್ತಿವೆ. ಮಣ್ಣು ಕಸಿದು ಕಾಂಕ್ರೀಟ್ ರಸ್ತೆ ಟೊಳ್ಳು ರೀತಿ ಕಾಣುತ್ತಿದೆ. ಬಾರಿ ವಾಹನ ಬಂದಲ್ಲಿ ಯಾವ ಕ್ಷಣದಲ್ಲಾದರೂ ರಸ್ತೆ ಕಸಿಯುವ ಭೀತಿ ಇಲ್ಲಿದೆ. ಗುಬ್ಬಿ ಹೊರ ವಲಯದ ಈ ಹೆದ್ದಾರಿ ರಸ್ತೆ ಜನರ ಬಳಕೆಗೆ ಬಂದಿದೆ. ಆದರೆ ಕೆಲಸ ಮಾತ್ರ ಪೂರ್ತಿಯಾಗಿಲ್ಲ. ಫ್ಲೈ ಓವರ್ ಸೇತುವೆ ಮೇಲಿನ ರಸ್ತೆಯ ನೀರು ಪೈಪ್ ಲೈನ್ ಮೂಲಕ ತೋಟಕ್ಕೆ ಹರಿ ಬಿಡಲಾಗಿದೆ. ಮಳೆ ಬಂದರೆ ಈ ಗ್ರಾಮದ ಸುತ್ತಲಿನ ಎಲ್ಲಾ ನೀರು ರಸ್ತೆ ಬದಿಯ ಸುಮಾರು ಅರವತ್ತು ಎಕರೆ ಪ್ರದೇಶಕ್ಕೆ ಹರಿದು ಸಾವಿರಾರು ತೆಂಗು ಅಡಿಕೆ ಮರವನ್ನು ಆವರಿಸಿದೆ. ಈ ಹೆದ್ದಾರಿಗೆ ಜಮೀನು ನೀಡಿದ ರೈತರಿಗೆ ಅನ್ಯಾಯ ಮಾಡುವ ಪ್ರಾಧಿಕಾರ ಕೂಡಲೇ ರಾಜಕಾಲುವೆ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಜೊತೆಗೆ ಅರ್ಧಕ್ಕೆ ನಿಂತ ಬಾಕ್ಸ್ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯ ರೈತರು ತಮ್ಮ ಬೇಡಿಕೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ರೈತರಾದ ವಿನಯ್, ದಯಾನಂದ್, ರಮೇಶ್ ಇತರರು ಇದ್ದರು.
