ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡುವ ಪ್ರವೃತ್ತಿ ಕಲೆಯನ್ನು ಬಿಜೆಪಿ ಮುಖಂಡರಿಗೆ ಆರ್ ಎಸ್ಎಸ್ ಮೊದಲ ಪಾಠವಾಗಿ ಹೇಳಿ ಕೊಡುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ನೇರ ಆರೋಪ ಮಾಡಿದರು.
ತಾಲ್ಲೂಕಿನ ಕಡಬ ಹೋಬಳಿ ಇಸ್ಲಾಂಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಕಡಬ ಕೆಜಿ ಟೆಂಪಲ್ ರಸ್ತೆ ಅಭಿವೃದ್ಧಿಯ 10 ಕೋಟಿ ರೂಗಳ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಯ ಕಿಕ್ ಬ್ಯಾಕ್ ಆರೋಪ ಮಾಡಿದ ಬಿಜೆಪಿ ಮೊದಲ ಪಾಠವನ್ನು ಜನರಿಗೆ ಒಪ್ಪಿಸುತ್ತಿದೆ. ದಿಲೀಪ್ ಕುಮಾರ್ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಯಾವುದಕ್ಕೂ ಮುಖಂಡನಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.
ಹೇಮಾವತಿ ಎಕ್ಸ್ ಪ್ರೆಸ್ ಕಾಮಗಾರಿ ಬಗ್ಗೆ ನನ್ನದು ವಿರೋಧವಿದೆ. ಇವತ್ತೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುತ್ತಿದ್ದೇನೆ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾದ ನಾನು ನನ್ನ ನೋವುಗಳನ್ನು ಅಲ್ಲಿಯೇ ಹೇಳಿಕೊಳ್ಳುತ್ತೇನೆ. ಪೈಪ್ ಲೈನ್ ಮಾಡದೇ ಬುಗುಡನಹಳ್ಳಿ ಕೆರೆಗೆ ಹರಿಯುವ 800 ಕ್ಯೂಸೆಕ್ಸ್ ಹರಿವನ್ನು ಹೆಚ್ಚಿಸಿ ಅಗಲೀಕರಣ ಮಾಡಿ ಕುಣಿಗಲ್ ಮೂಲಕ ನೀರು ಪಡೆಯುವ ಬಗ್ಗೆ ಚರ್ಚೆ ಮಾಡುತ್ತೇನೆ ಎಂದ ಅವರು ಬಿಜೆಪಿ ಮುಸ್ಲಿಂರನ್ನು ದೇಶದಿಂದ ಓಡಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ 11 ವರ್ಷ ಬಿಜೆಪಿ ಸರ್ಕಾರ ಆ ಕೆಲಸ ಮಾಡಿದೆಯೇ, ಇಲ್ಲ. ದೇಶದಲ್ಲೇ ಹುಟ್ಟಿ ಬೆಳೆದ ನಾಗರೀಕರು ಅವರ ಬದುಕು ಕಟ್ಟಿಕೊಳ್ಳಬೇಕು. ರಾಜಕೀಯಕ್ಕೆ ಜಾತಿ ಹೆಸರು ಹೇಳಿಕೊಂಡು ಬಿಜೆಪಿ ನಡೆದುಬಂದಿದೆ ಎಂದು ಛೇಡಿಸಿದರು.
ಗೃಹ ಸಚಿವ ಪರಮೇಶ್ವರ್ ಅವರು 40 ವರ್ಷದ ರಾಜಕೀಯದಿಂದ ಬೆಳೆದ ದಲಿತ ನಾಯಕರು. ಅವರ ಬೆಳವಣಿಗೆ ಸಹಿಸದ ಬಿಜೆಪಿ ಇಡಿ ದಾಳಿ ಮಾಡಿಸಿದೆ. ಇದನ್ನು ತಿರುಚಿ ಡಿ.ಕೆ.ಶಿವಕುಮಾರ್ ಮಾಡಿಸಿದ್ದು ಎಂದು ಹೇಳುವ ಕುಮಾರಸ್ವಾಮಿ ಅವರು ಇಡಿಯ ಪಾಲುದಾರರು. ಬಿಜೆಪಿ ಜೊತೆ ಸೇರಿ ಪ್ಲೇಟ್ ಬದಲಿಸುತ್ತಾರೆ. ಬಿಜೆಪಿಯ ಯಾವ ನಾಯಕರ ಮನೆಗೂ ಇಡಿ ದಾಳಿ ಮಾಡಿಲ್ಲ. ಅವರೆಲ್ಲಾ ಆಶ್ರಯ ಮನೆಯಲ್ಲಿ ವಾಸವಾಗಿದ್ದಾರೆಯೇ, ಅವರದ್ದು ವಿದ್ಯಾ ಸಂಸ್ಥೆ ಇಲ್ಲವೇ, ಈ ಬಗ್ಗೆ ಸುಪ್ರೀಂ ಕೋರ್ಟ್ ಸಹ ಬಿಜೆಪಿಗೆ ಛೀಮಾರಿ ಹಾಕಿದೆ. ವಾಸ್ತವ ಹೇಳಿಕೆ ನೀಡಬೇಕು. ಅದನ್ನು ಬಿಟ್ಟು ಜನರಿಗೆ ನಂಬಿಕೆ ಬಾರದಂತೆ ಹೇಳುತ್ತಾರೆ. ಕುಮಾರಸ್ವಾಮಿ ಎಂದಿಗೂ ಸತ್ಯಕ್ಕೆ ಹತ್ತಿರ ಮಾತು ಹೇಳಿಲ್ಲ. ನಾನು ಹತ್ತಿರದಿಂದ ನೋಡಿದ್ದೇನೆ ಎಂದು ಹೇಳಿದ ಅವರು ಜಿಪಂ ತಾಪಂ ಚುನಾವಣೆಗೂ ಜಾತಿ ಮೀಸಲಾತಿಗೂ ಯಾವ ಸಂಬಂಧವಿಲ್ಲ. ಕೋರ್ಟ್ ಆದೇಶದಂತೆ ಸ್ಥಳೀಯ ಚುನಾವಣೆ ನಡೆಯಲಿದೆ. ಜಾತಿ ಗಣತಿ ವರ್ಗೀಕರಣ ಕೂಡಾ ನಡೆಯಲಿದೆ. ಜಾತಿ ಧರ್ಮ ಬಗ್ಗೆ ಮಾತನಾಡುತ್ತಲೇ ಹಿಂದೂ ಕಾರ್ಯಕರ್ತರನ್ನು ಹಿಂದೂಗಳೇ ಕೊಲೆ ಮಾಡಿ ಸಾಬ್ರು ಮಾಡಿದ್ದು ಎನ್ನುತ್ತಾರೆ ಎಂದು ಆಕ್ರೋಶದಿಂದ ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮೀನಾರಾಯಣ, ಲಿಂಗಮ್ಮನಹಳ್ಳಿ ರಾಜಣ್ಣ, ಎಸ್.ಎಲ್.ನರಸಿಂಹಯ್ಯ, ಪಟೇಲ್ ದೇವರಾಜ್, ಶಂಕರಾನಂದ, ರೆಹಮತ್ ವುಲ್ಲಾ, ಫಸ್ಲೂನ್, ಗುತ್ತಿಗೆದಾರ ಚಂದ್ರಕಾಂತ್, ಲೋಕೋಪಯೋಗಿ ಇಲಾಖೆ ಎಇಇ ಯೋಗೀಶ್ ಇತರರು ಇದ್ದರು.