ತನ್ನ ಮಗುವಿಗೆ ವಿಷ ಉಣಿಸಿ ತಾನು ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಾಥಮಿಕ ವರದಿಯ ಘಟನೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತಿರಾಯನೇ ಮೊದಲ ಪತ್ನಿಯ ಒತ್ತಾಯಕ್ಕೆ ಎರಡನೇ ಪತ್ನಿ ಹಾಗೂ ಆಕೆಯ ಪುಟ್ಟ ಮಗುವಿಗೆ ವಿಷವುಣಿಸಿ ಕೊಲೆ ನಡೆಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತ್ಯಾಗಟೂರು ಗೇಟ್ ಬಳಿಯಲ್ಲಿ ವಾಸವಾಗಿದ್ದ ಇಂದ್ರಮ್ಮ ಎಂಬ ಮಹಿಳೆಯ ಎರಡನೇ ಸಂಸಾರದ ಕತೆಗೆ ಆಕೆಯ 6 ವರ್ಷದ ಹೆಣ್ಣು ಮಗು ದೀಕ್ಷಿತ ಏನೂ ಅರಿಯದೆ ವಿಷ ತಿಂದು ಪ್ರಾಣ ಚೆಲ್ಲಿದೆ. ಈ ಜೊತೆಗೆ ಎರಡನೇ ಪತಿರಾಯ ಯತೀಶ್ ನನ್ನು ನಂಬಿ ಬಂದ ಮಹಿಳೆ ಇಂದ್ರಮ್ಮನಿಗೂ ವಿಷ ಪ್ರಾಷಣ ಮಾಡಿ ಜೀವನ್ಮರಣ ಹೋರಾಟ ನಡೆಸುವಂತೆ ಮಾಡಿದ ಹೃದಯ ವಿದ್ರಾವಕ ಘಟನೆ ಕಳೆದೆರೆಡು ದಿನದಿಂದ ರೋಚಕ ತಿರುವು ಪಡೆದುಕೊಂಡಿದೆ.
ಎರಡನೇ ಪತ್ನಿ ಇಂದ್ರಮ್ಮನ ಜೊತೆ ನಿಟ್ಟೂರು ಹೋಬಳಿಯ ಬೊಮ್ಮರಸನಹಳ್ಳಿ ಗ್ರಾಮದ ಯತೀಶ್ ಎಂಬಾತ ಎರಡನೇ ಸಂಬಂಧದ ಬಗ್ಗೆ ಧರ್ಮಪತ್ನಿ ವಿಜಯ ಅವರಿಗೂ ಗೊತ್ತಿದ್ದು, ಕಾಲಕ್ರಮೇಣ ಎರಡನೇ ಸಂಬಂಧವನ್ನು ಕಡಿತ ಮಾಡಿಕೊಳ್ಳಲು ಒತ್ತಾಯ ಬಂದಿತ್ತು. ಮೊದಲ ಪತ್ನಿ ವಿಜಯ ಚಿತಾವಣೆಗೆ ಯತೀಶ್ ಎರಡನೇ ಪತ್ನಿ ಹಾಗೂ ಮಗುವಿಗೆ ವಿಷ ಹಾಕಿ ತಾನು ವಿಷ ಸೇವಿಸಿದ ಹೈಡ್ರಾಮಾ ಸಂಚು ನಡೆದಿತ್ತು. ಆದರೆ ಗುಬ್ಬಿ ಪೊಲೀಸರ ತನಿಖೆಯಿಂದ ಇಡೀ ಸಂಚು ಬಯಲಿಗೆ ಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಅತ್ತೆ ನರಸಮ್ಮ ತನ್ನ ಸೊಸೆ ಇಂದ್ರಮ್ಮ ಮೇಲೆ ನೀಡಿದ ದೂರಿನ ಮೇರೆಗೆ ಗುಬ್ಬಿ ಠಾಣೆಯಲ್ಲಿ ಕೊಲೆ ಆರೋಪದ ಪ್ರಕರಣ ದಾಖಲಾಗಿತ್ತು. ಪ್ರಕರಣ ಭೇದಿಸಿದ ಪೊಲೀಸರಿಗೆ ಬೇರೆಯೇ ಮಾಹಿತಿ ಸಿಕ್ಕಿ ಯತೀಶ ಮತ್ತು ಆತನ ಹೆಂಡತಿ ವಿಜಯ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ತಾಯಿ ಮಗು ಇಬ್ಬರನ್ನೂ ವ್ಯವಸ್ಥಿತವಾಗಿ ಕೊಲೆ ಮಾಡಿರುವ ಸತ್ಯಾಂಶ ಹೊರಗೆ ಬಂದಿದೆ.
ಆರೋಪಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
