ಸಮಾಜದಲ್ಲಿ ವ್ಯಕ್ತಿಗಳು ಸ್ವಾರ್ಥ, ದುರಾಸೆಯಂತಹ ಮನೋಭಾವನೆ ಬಿಟ್ಟು ನಿಸ್ವಾರ್ಥ ಸೇವಾ ಮನೋಭಾವನೆ ಬೆಳೆಸಿಕೊಂಡಾಗ ಸಮಾಜದ ಜನ ಸಾಮರಸ್ಯದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ತಿಪಟೂರು ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿ ಶ್ರೀ ತುಳಸಿ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹೆಸರಳ್ಳಿಯ ಪೌಳಿ ನಂಜುಂಡಪ್ಪ ಮತ್ತು ಚೆನ್ನಮ್ಮನವರ ಸುಪುತ್ರರೂ, ಸಮಾಜ ಸೇವಕರಾದ ಪೌಳಿ ಶಂಕರಾನಂದಪ್ಪ ಅವರು ತಮ್ಮ ತಾಯಿಯ ತವರೂರಾದ ಲಕ್ಕೇನಹಳ್ಳಿಯ ಗ್ರಾಮದಲ್ಲಿ ತಾಯಿಯ ನೆನಪಿನಲ್ಲಿ ಕೃತಜ್ಞತಾಪೂರ್ವಕವಾಗಿ ಕಟ್ಟಿಸಿರುವ ಅತಿಥಿ ಕೊಠಡಿ ಲೋಕಾರ್ಪಣೆ ಮತ್ತು ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಂಗ್ರಹ ಪ್ರವೃತ್ತಿ ಮತ್ತು ವಂಚಿಸುವ ಪ್ರವೃತ್ತಿ ಹೆಚ್ಚಾಗುತ್ತಿದ್ದು ಹಂಚಿ ತಿನ್ನುವ ಮೂಲಕ ಸರ್ವರೂ ಸುಖಮಯ ಬದುಕನ್ನು ನಡೆಸಿದಾಗ ಕೌಟುಂಬಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ವಿದೇಶದಲ್ಲಿರುವ ಪೌಳಿ ಶಂಕರನಂದಪ್ಪ ಅವರ ಮಗ ಮತ್ತು ಅವರ ಇಡೀ ಕುಟುಂಬ ಸಮಾಜಸೇವೆಗಾಗಿ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಗುಬ್ಬಿ ಹೊಸಳ್ಳಿ ಸಂಸ್ಥಾನದ ನೊಳಂಬ ರಾಜ ಪರಂಪರೆಯ ಹುಚ್ಚೀರಪ್ಪಾಜಿ ಅರಸ್ ಮಾತನಾಡಿ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವ, ಪ್ರೀತಿಸುವ ದಿನಮಾನಗಳು ಬಂದಾಗ ಅನ್ಯೋನ್ಯತೆಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೊನ್ನಗಾನಹಳ್ಳಿ ಕರಿಯಣ್ಣ ಮಾತನಾಡಿ ಪೌಳಿ ಶಂಕರಾ ನಂದಪ್ಪನವರ ಸಾಮಾಜಿಕ ಸೇವೆ ಮತ್ತು ಸಾಮಾಜಿಕ ಕಳಕಳಿ ನಿಜಕ್ಕೂ ಮೆಚ್ಚುವಂಥದ್ದು. ಇವರ ಸೇವಾ ತತ್ಪರತೆ ಇತರರಿಗೆ ಆದರ್ಶ ಎಂದು ಬಣ್ಣಿಸಿದರು.
ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಂ ಗೋವಿಂದರಾಯ ಮಾತನಾಡಿ ವ್ಯಕ್ತಿ ಮೌಲ್ಯ ಕೌಟುಂಬಿಕ ಮೌಲ್ಯ ಮತ್ತು ಸಾಮಾಜಿಕ ಮೌಲ್ಯಗಳಿಂದ ವ್ಯಕ್ತಿಯ ವ್ಯಕ್ತಿತ್ವ ಉನ್ನತೀಕರಣಗೊಳ್ಳುತ್ತದೆ. ಅದಕ್ಕೆ ಉದಾಹರಣೆಯಾಗಿ ಶ್ರೀ ಪೌಳಿ ಶಂಕರಾ ನಂದಪ್ಪನವರ ಸೇವೆ ಅನನ್ಯವಾದದ್ದು ಎಂದು ಬಣ್ಣಿಸಿದರು. ಇವರ ಸೇವೆ, ತ್ಯಾಗ ಮತ್ತು ಸಮಾಜ ಮೆಚ್ಚುವ ಕಾರ್ಯಗಳ ಮೂಲಕ ಸಮಾಜದ ಋಣವನ್ನು ತೀರಿಸುವ ಅದಮ್ಯ ಚೇತನ ಎಂದು ಬಣ್ಣಿಸಿದರು.
ಉಪನ್ಯಾಸ ನೀಡಿದ ತಿಪಟೂರಿನ ನಿವೃತ್ತ ಪ್ರಾಧ್ಯಾಪಕ ಶ್ರೀ ದಿಬ್ಬದಹಳ್ಳಿ ಶ್ಯಾಮಸಂದರ್, ಶರಣ ಪರಂಪರೆ ಅನುಭಾವದ ನೆಲೆಯನ್ನು ಕಲಿಸಿಕೊಟ್ಟಿದ್ದು, ಬದುಕನ್ನು ಸುಂದರ ಮಾಡಿಕೊಳ್ಳಲು ಪೌಳಿ ಶಂಕರಾನಂದಪ್ಪನವರಂತಹ ವ್ಯಕ್ತಿತ್ವಗಳು ರೂಪುಗೊಳ್ಳಬೇಕಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳು, ಗಾಂಧಿ ಅನುಯಾಯಿಗಳು ಆದ ಎಂ ಬಸವಯ್ಯನವರು ಶರಣರ ಚಿಂತನೆಗಳ ಮತ್ತು ಗಾಂಧಿ ಚಿಂತನೆಗಳ ಪ್ರಸ್ತುತತೆಯನ್ನು ಪರಿಚಯಿಸಿದರು.
ಮತ್ತೋರ್ವ ಅತಿಥಿಯಾದ ತುಮಕೂರು ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ನಾಗರತ್ನ ಚಂದ್ರಪ್ಪ ಅವರು ಅಕ್ಕಮಹಾದೇವಿ ಮತ್ತು ಶರಣರ ವಚನಗಳಲ್ಲಿನ ಸೇವೆ ಮತ್ತು ಕಾಯಕದ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ತುಳಸಿ ರಂಗನಾಥ ಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಎಲ್ ಎಸ್ ಶಿವರಾಮಯ್ಯ, ನಿವೃತ್ತ ಶಿಕ್ಷಕರಾದ ಗಾಣದವರ ಶ್ರೀ ಶಾಂತಪ್ಪ, ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಶ್ರೀ ಮೃತ್ಯುಂಜಯಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ತುಳಸಿ ರಂಗನಾಥ ಸ್ವಾಮಿ ದೇವಸ್ಥಾನ ಸಮಿತಿಯ ಧರ್ಮದರ್ಶಿಗಳು, ಹೆಸರಹಳ್ಳಿಯ ಪೌಳಿ ವಂಶಸ್ಥರು ಹಾಗೂ ಪೌಳಿ ಶಂಕರಾನಂದಪ್ಪನವರ ಸ್ನೇಹಿತರು ಹಾಗೂ ಬಂಧುಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಜಿಷ್ಣುಸಾಯಿ ಜಿ ತಬಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ತುಮಕೂರು ಜಾಗತಿಕ ಲಿಂಗಾಯತ ಸಭಾದ ಅಧ್ಯಕ್ಷರಾದ ಜಿ ಬಿ ನಾಗಭೂಷಣ್ ಸ್ವಾಗತಿಸಿದರು, ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಎಚ್ ಎಲ್ ವೆಂಕಟೇಶ್ ನಿರೂಪಿಸಿದರು. ಶೈಲಾಲಿಂಗರಾಜ್ ವಂದನಾರ್ಪಣೆ ಸಲ್ಲಿಸಿದರು.