ವಿದ್ಯುತ್ ಕಂಬ ಬಳಿ ಗ್ರೌಂಡಿಂಗ್ ಮೂಲಕ ವಿದ್ಯುತ್ ನೆಲದಲ್ಲಿ ಹರಿದಾಡಿ ಅಲ್ಲೇ ನಡೆದು ಹೊರಟಿದ್ದ ಭದ್ರ ಹೆಸರಿನ ಬಸವ ಹಠಾತ್ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟ ದುರ್ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಮುಂಜಾನೆಯಿಂದ ಸುರಿಯುತ್ತಿದ್ದ ಮಳೆಯಿಂದ ವಿದ್ಯುತ್ ಕಂಬಗಳಲ್ಲಿ ವೈರ್ ಗಳಿಂದ ವಿದ್ಯುತ್ ನೆಲದಲ್ಲಿ ಹರಿದಾಡಿದೆ. ಎಡಬಿಡದೆ ಸುರಿದ ಮಳೆಯಿಂದ ಬಸ್ ಸ್ಟ್ಯಾಂಡ್ ಮುಂದಿನ ಅಂಗಡಿ ಸಾಲಿನ ಬಳಿ ಗ್ರೌಂಡಿಂಗ್ ಆಗಿ ಕಂಬದ ಸುತ್ತಲಿನಲ್ಲಿ ವಿದ್ಯುತ್ ಹರಿದಿದೆ. ತನ್ನಷ್ಟಕ್ಕೆ ತಾನು ನಡೆದ ಬಸವ ಕ್ಷಣಾರ್ಧದಲ್ಲಿ ಬಲಿಯಾಗಿದೆ.
ಶ್ರೀ ಅಮರಗೊಂಡ ಮಲ್ಲಿಕಾರ್ಜುನಸ್ವಾಮಿ ಅವರಿಗೆ ವಿಧಿವಿಧಾನದಲ್ಲಿ ಬಿಟ್ಟ ಭದ್ರ ಹೆಸರಿನ ಬಸವ ಊರಿನಲ್ಲಿ ದೈವ ಸ್ವರೂಪವಾಗಿ ಓಡಾಡಿಕೊಂಡಿತ್ತು. ಇಂದು ಬೆಳಿಗ್ಗೆ ನಡೆದ ಘಟನೆಗೆ ಬೇಸರ ವ್ಯಕ್ತಪಡಿಸಿದ ಭಕ್ತವೃಂದ ವಿದ್ಯುತ್ ಕಂಬ ನಿರ್ವಹಣೆ ಬಗ್ಗೆ ಬೆಸ್ಕಾಂ ಇಲಾಖೆ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಈಗಾಗಲೇ ಮೂಕ ಪ್ರಾಣಿಗಳು ಬಲಿಯಾದ ಘಟನೆ ನಡೆದಿದೆ. ಮಹಾಲಕ್ಷ್ಮಿ ಬಡಾವಣೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಳಿ ವಿದ್ಯುತ್ ಕಂಬ ಬಳಿ ವಿದ್ಯುತ್ ಹರಿದು ಹಸುವೊಂದು ಬಲಿಯಾಗಿದೆ. ಕೆಎಂಎಫ್ ಪಶು ಆಹಾರ ಘಟಕ ಬಳಿಯ ಕಂಬದ ಬಳಿ ಮೇಕೆಗಳ ಹಿಂಡು ಕೊದಲೆಳೆಯಲ್ಲಿ ಪಾರಾಗಿದ್ದವು
“ಗುಬ್ಬಿ ಪಟ್ಟಣದ ಹಲವು ಬಡಾವಣೆಯಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳು ಶಿಥಿಲಾವಸ್ಥೆಯಲ್ಲಿವೆ. ಕೆಲ ಭಾಗದಲ್ಲಿ ತಂತಿ ವೈರ್ ಗಳು ಸ್ಕಿನ್ ಓಪನ್ ಆಗಿ ಕರೆಂಟ್ ಹರಿದಾಡುತ್ತಿದೆ. ಮೂಕ ಪ್ರಾಣಿಗಳು ಈಗಾಗಲೇ ಬಲಿಯಾಗುತ್ತಿವೆ. ಮನುಷ್ಯರ ಜೀವದ ಚೆಲ್ಲಾಟ ಆಡುವ ಬೆಸ್ಕಾಂ ಅಧಿಕಾರಿಗಳು ಹಳೆಯ ತಂತಿ ಬದಲಿಸಿ ಜೀವ ಉಳಿಸುವ ಕೆಲಸ ಮಾಡಬೇಕು. ಸ್ಥಳೀಯ ಪಟ್ಟಣ ಪಂಚಾಯಿತಿ ಸಹ ವಿದ್ಯುತ್ ತಂತಿಗಳ ಬಗ್ಗೆ ನಿಗಾವಹಿಸಿ ಕೂಡಲೇ ಸರಿ ಪಡಿಸಬೇಕು ” ಎಂದು ವಕೀಲ ಜಿ.ಎಂ.ಶಿವಾನಂದ್ ಆಗ್ರಹಿಸಿದ್ದಾರೆ.
Super fast news updates