ಮನುಷ್ಯನ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯ. ಬಹು ಒತ್ತಡದ ಬದುಕು ನಡೆಸುವ ಪತ್ರಕರ್ತರ ಆರೋಗ್ಯಕ್ಕೆ ಕ್ರೀಡೆ ಆಯೋಜನೆ ಸ್ವಾಗತಾರ್ಹ. ಸೋಲು ಗೆಲುವು ಎಂಬುದು ಬದಿಗೊತ್ತಿ ಭಾಗವಹಿಸುವಿಕೆಯಿಂದ ಕ್ರೀಡಾಕೂಟ ಮೆರೆಗು ತುಂಬಲಿ ಎಂದು ಗೊಲ್ಲಹಳ್ಳಿ ಮಠ ಶ್ರೀ ವಿದ್ಯಾ ವಿಭವ ಶಂಕರ ಸ್ವಾಮೀಜಿ ಆಶಿಸಿದರು.
ಗುಬ್ಬಿ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಬಳಿ ಆಗಮಿಸಿದ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟದ ಕ್ರೀಡಾ ಜ್ಯೋತಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು ಆಧುನಿಕತೆಗೆ ತಕ್ಕಂತೆ ಬದುಕಿನ ಶೈಲಿ ಬದಲಾಗಿದೆ. ದೈಹಿಕ ಕಸರತ್ತಿನ ಕೆಲಸಗಳು ಕಡಿಮೆಯಾಗಿ ಮಾನಸಿಕ ಒತ್ತಡದ ಕೆಲಸ ಹೆಚ್ಚಾಗಿದೆ. ತಂತ್ರಜ್ಞಾನ ಬೆಳೆದಂತೆ ಕ್ರೀಡೆಯತ್ತ ಯುವಶಕ್ತಿ ಹೋಗುತ್ತಿಲ್ಲ. ಆರೋಗ್ಯ ಜೀವನಕ್ಕೆ ಮೊದಲು ವ್ಯಾಯಾಮ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕ್ರೀಡೆಯಲ್ಲಿ ಗುಬ್ಬಿ ತಾಲ್ಲೂಕು ಸಹ ಉತ್ತಮ ಆಟಗಾರರನ್ನು ಹೊಂದಿದೆ. ಗ್ರಾಮೀಣ ಕೃಷಿ ಚಟುವಟಿಕೆ ಮಧ್ಯೆ ಬೆಳಕಿಗೆ ಬಂದ ಕ್ರೀಡಾಪಟುಗಳು ನಮ್ಮಲ್ಲಿ ಹೆಚ್ಚು. ಸೂಕ್ತ ತರಬೇತಿ ಸಿಕ್ಕಲ್ಲಿ ಈ ಮಕ್ಕಳು ದೇಶದ ಆಸ್ತಿಯಾಗಿ ಮಾರ್ಪಾಡು ಆಗುತ್ತಾರೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರ ಕ್ರೀಡಾಕೂಟ ಹೆಮ್ಮೆಯ ವಿಚಾರ. ಪ್ರಸ್ತುತ ವಿದ್ಯಮಾನದ ವಿಶ್ಲೇಷಣೆ ನೀಡುತ್ತಾ ಆರೋಗ್ಯದತ್ತ ಗಮನ ಹರಿಸಲು ಸಾಧ್ಯವಾಗದ ಸ್ಥಿತಿ ಅರಿತು ಕಾರ್ಯ ನಿರತ ಪತ್ರಕರ್ತರ ಸಂಘ ಕ್ರೀಡಾಕೂಟ ರಾಜ್ಯಮಟ್ಟದಲ್ಲಿ ಆಯೋಜಿಸಿ, ತುಮಕೂರು ನಗರದಲ್ಲಿ ನಡೆದಿರುವುದು ಸಂತಸದ ವಿಚಾರ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ಕ್ರೀಡೆ ಶಾಲಾ ಮಟ್ಟದಲ್ಲಿ ಮಾತ್ರ ಆಯೋಜನೆ ನಡೆದಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ದೈಹಿಕ ಆರೋಗ್ಯಕ್ಕೆ ಎಲ್ಲಾ ವಯೋಮಾನದವರು ಪಾಲ್ಗೊಳ್ಳಬೇಕು ಎಂಬ ಸಂದೇಶ ಪತ್ರಕರ್ತರ ಸಂಘ ಸಾರುತ್ತಿದೆ. ಕ್ರೀಡೆಯಲ್ಲಿ ಆಯಾ ವಯಸ್ಸಿಗೆ ತಕ್ಕಂತೆ ದೇಹ ದಂಡಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಎಚ್.ಸಿ.ಯತೀಶ್ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಆರೋಗ್ಯವೇ ಭಾಗ್ಯ ಎಂಬಾತಾಗಿದೆ. ಯಂತ್ರದ ರೀತಿ ದುಡಿಯುವ ಬದುಕಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಮಯದ ಅಭಾವ. ಕ್ರೀಡೆಯ ಮಹತ್ವ ಕುರಿತು ರಾಜ್ಯದಲ್ಲಿ ಪತ್ರಕರ್ತರ ವ್ಯಾಖ್ಯಾನ ನಿರಂತರ ನಡೆದಿದೆ. ಆದರೆ ತಾವೇ ಖುದ್ದು ಕ್ರೀಡಾಕೂಟ ನಡೆಸಿ ಭಾಗವಹಿಸಿ ಮಾದರಿ ಎನಿಸಿರುವುದು ಸ್ವಾಗತಾರ್ಹ. ಜಿಲ್ಲಾ ಕೇಂದ್ರದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಮೆಚ್ಚುಗೆ ಗಳಿಸಲು ಎಲ್ಲಾ ತಾಲ್ಲೂಕಿನಲ್ಲಿ ಕ್ರೀಡಾಜ್ಯೋತಿ ಸಂಚರಿಸಿರುವುದು ಜಾಗೃತಿ ಕಾರ್ಯಕ್ರಮ ಎನಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರೀಡಾಜ್ಯೋತಿ ಮೆರವಣಿಗೆಯು ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ಎನ್ ಸಿಸಿ, ನಾಸಿಕ ವಾದ್ಯ ತಂಡ, ಸೌಂಡ್ ಸಿಸ್ಟಂ ಕನ್ನಡ ಹಾಡುಗಳೊಂದಿಗೆ ಸಾಗಿ ಪಟ್ಟಣದ ಬಸ್ ಸ್ಟ್ಯಾಂಡ್, ಸರ್ಕಲ್ ಮೂಲಕ ಶ್ರೀ ಗುರು ನಾಗಲಿಂಗೇಶ್ವರ ದೇವಾಲಯದ ಬಳಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಬೀಳ್ಕೊಡಲಾಯಿತು. ಮೆರವಣಿಗೆಯು ಮುನ್ನ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಏಳು ಮಂದಿ ತಾಲ್ಲೂಕಿನ ಕ್ರೀಡಾಪಟುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ಮಮತಾ, ಬಿಇಓ ನಟರಾಜು, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ, ಶ್ರೀ ಚನ್ನಬಸವೇಶ್ವರ ಯುವಕ ಸಂಘ ಪ್ರಧಾನ ಕಾರ್ಯದರ್ಶಿ ಸಿ.ಆರ್.ಶಂಕರಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪವಿತ್ರಾ, ರೈತಸಂಘದ ಸಿ.ಜಿ.ಲೋಕೇಶ್ ಹಾಗೂ ಸದಸ್ಯರು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ್, ಕ್ರೀಡಾಜ್ಯೋತಿ ಸಮಿತಿಯ ರಂಗರಾಜು, ಸುರೇಶ್, ರೇಣುಕಾ ಪ್ರಸಾದ್, ದಾದಪೀರ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಪತ್ರಕರ್ತರು ಭಾಗವಹಿಸಿದ್ದರು.