ಇತಿಹಾಸ ಪ್ರಸಿದ್ಧ ಶ್ರೀ ಬೇಟೆರಾಯಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ನಡೆದ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಐದು ದಿನಗಳ ಕಾಲ ವಿವಿಧ ಕೈಂಕರ್ಯಗಳಿಂದ ನಡೆಯುವ ಜಾತ್ರೆಯಲ್ಲಿ ಸ್ವಸ್ತಿ ವಾಚನ, ಮೃತಿಕಾ ಸಂಗ್ರಹಣ, ಅಂಕುರಾರ್ಪಣ ಹಾಗೂ ಧ್ವಜಾರೋಹಣದೊಂದಿಗೆ ಜಾತ್ರೆಯಲ್ಲಿ ಕಳೆದ ಶನಿವಾರ ಸಂಜೆ ಗರುಡೋತ್ಸವ ನಡೆದಿತ್ತು. ಶ್ರೀರಾಮನವಮಿ ಪ್ರಯುಕ್ತ ಮಂಟಪ ಪಡಿ ಪೂಜೆ ಕಾರ್ಯ ನಡೆದು ನಂತರ ಗಜೇಂದ್ರ ಮೋಕ್ಷ ಹಾಗೂ ಸೀತಾ ಕಲ್ಯಾಣೋತ್ಸವ ವಿಧಿವತ್ತಾಗಿ ಜರುಗಿತ್ತು.
ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಲ್ಲುವ ಅಭಿಜಿನ್ ಮೂಹೂರ್ತದಲ್ಲಿ ಬೇಟೆರಾಯಸ್ವಾಮಿಯ ಬ್ರಹ್ಮ ರಥೋತ್ಸವ ನಂತರ ಅನ್ನ ಸಂತರ್ಪಣೆ ಭಕ್ತಾದಿಗಳ ನೆರವಿನಿಂದ ಸಮಿತಿ ಆಯೋಜಿಸಿತ್ತು. ಸಂಜೆ ಉಯ್ಯಾಲೋತ್ಸವ ಕಾರ್ಯಕ್ರಮ ನಡೆಯಲಿದೆ. ಮಂಗಳವಾರ ಸಂಜೆ ಸೀತಾಲಕ್ಷ್ಮಿ ದೇವಿಗೆ ವಿಶೇಷ ಅಲಂಕಾರ ಹಾಗೂ ಶಯನೋತ್ಸವ, ಏಪ್ರಿಲ್ 9 ಬುಧವಾರ ಬೆಳಿಗ್ಗೆ ಸುಪ್ರಭಾತ ಸೇವೆ, ಅವಭೃತ ಸ್ನಾನ, ವಸಂತ ಮಾಧವ ಪೂಜೆ ನಡೆದು ಸಂಜೆ ಹನುಮಂತೋತ್ಸವ ಧ್ವಜಾವರೋಹಣ ಮೂಲಕ ಜಾತ್ರೆ ಸಂಪನ್ನ ಗೊಳ್ಳಲಿದೆ.
ರಥೋತ್ಸವ ಸಮಯದಲ್ಲಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಜೆಡಿಎಸ್ ಮುಖಂಡರಾದ ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಪಪಂ ಸದಸ್ಯರಾದ ಮಹಮ್ಮದ್ ಸಾದಿಕ್, ಜಿ.ಆರ್.ಶಿವಕುಮಾರ್, ಕೃಷ್ಣಮೂರ್ತಿ, ಸವಿತಾ.ಎಸ್.ಗೌಡ, ಕಂದಾಯ ನಿರೀಕ್ಷಕ ಕುಮಾರ್, ದೇವಾಲಯ ಜಾತ್ರಾ ಸಮಿತಿ ಅಧ್ಯಕ್ಷ ಸಿ.ಎಸ್.ಅರುಣ್, ಎಚ್.ಕೆ.ಸತ್ಯನಾರಾಯಣ, ಜಿ.ಸತೀಶ್, ಜಿ.ಆರ್.ಶ್ರೀನಿವಾಸಪ್ರಸಾದ್ ಸೇರಿದಂತೆ ಇತರರು ಇದ್ದರು.