ದಿನದ 16 ಗಂಟೆ ದುಡಿಯುವ ರೈತ ವರ್ಗಕ್ಕೆ ಈಗಲೂ ಸೂಕ್ತ ಅನುಕೂಲ ಮಾಡಲು ಯಾವ ಸರ್ಕಾರಗಳೂ ಬದ್ಧವಾಗಿಲ್ಲ. ರೈತರ ಸಂಕಷ್ಟ ನೀಗಿಸಲು ಸಂಘಟನೆ ಶಕ್ತಿ ಹೆಚ್ಚಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ರೈತರು ಒಗ್ಗೂಡಿ ಹೋರಾಟ ನಡೆಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ತಿಳಿಸಿದರು.
ತಾಲೂಕಿನ ಚೆನ್ನಯ್ಯನಪಾಳ್ಯ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ರೈತ ಸಂಘ ಉದ್ಘಾಟಿಸಿ ಮಾತನಾಡಿದ ಅವರು, “ದಿನದ ಎಂಟು ಗಂಟೆ ದುಡಿಯುವ ವರ್ಗಕ್ಕೆ ಎಲ್ಲಾ ಅನುಕೂಲ ಕೊಡುವ ಸರ್ಕಾರ ದೇಶದ ಶೇಕಡಾ 70ರಷ್ಟು ಇರುವ ರೈತರಿಗೆ ವಿದ್ಯುತ್ ಇಲ್ಲ, ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲ, ಬೀಜ ಗೊಬ್ಬರವಿಲ್ಲ. ಕೊಟ್ಟರೂ ಕೊಡದಂತೆ ರೈತ ವರ್ಗವನ್ನು ಕಡೆಗಣಿಸಿದ್ದಾರೆ” ಎಂದರು.

“ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದ ರೈತರು ಪ್ರತಿ 24 ನಿಮಿಷಕ್ಕೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಹತ್ತು ವರ್ಷದಲ್ಲಿ 3.50 ಲಕ್ಷ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಟಿಗಟ್ಟಲೆ ವ್ಯಯ ಮಾಡಿ ಡ್ಯಾಂ ಕಟ್ಟುವ ಸರ್ಕಾರ ಕೃಷಿಗೆ ಉತ್ತೇಜನ ನೀಡುವ ಮುನ್ನ ರೈತರು ತಮ್ಮ ಬಂಡವಾಳದಲ್ಲಿ ಬೋರ್ ವೆಲ್ ಕೊರೆಸಿ ದೇಶಕ್ಕೆ ಅನ್ನ ನೀಡಿದ್ದಾರೆ. ರಾಜ್ಯ ಸರ್ಕಾರ 4.05 ಲಕ್ಷ ಕೋಟಿ ಬಜೆಟ್ ಮಂಡಿಸಿದೆ. ಆದರೆ ರೈತರಿಗೆ ಕೇವಲ ಶೇಕಡಾ 16 ರಷ್ಟು ಮೀಸಲಿಟ್ಟಿದೆ. ವಾಸ್ತವದಲ್ಲಿ ರೈತರ ಸಂಖ್ಯಾನುಗುಣವಾಗಿ ಶೇಕಡಾ 60 ಮೀಸಲಿಸುವುದು ಸರಿ ಎನಿಸುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗುಬ್ಬಿ | ಕಿಡಿಗೇಡಿಗಳಿಂದ ಸುರಿಗೇನಹಳ್ಳಿ ಕಾಡಿಗೆ ಬೆಂಕಿ : ಕಂಗಾಲಾದ ಮರಗಿಡಗಳಲ್ಲಿನ ಪಕ್ಷಿ ಸಂಕುಲ
ತಾಲೂಕಿನ ಆರು ಗ್ರಾಮಗಳ ಶಾಖೆಯ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಪದಾಧಿಕಾರಿಗಳಾದ ಚನ್ನಬಸವಣ್ಣ, ಕುಮಾರಸ್ವಾಮಿ, ಸತ್ತಿಗಪ್ಪ, ನಾಗರಾಜು, ಕತ್ತಿಗಪ್ಪ, ಯತೀಶ್, ಪ್ರಕಾಶ್, ಈಶಣ್ಣ, ಮಹದೇವಣ್ಣ, ಜಗದೀಶಯ್ಯ, ಗಂಗಣ್ಣ ಇತರರು ಇದ್ದರು.