ಮೈಕ್ರೋ ಫೈನಾನ್ಸ್ ಹಾವಳಿಗೆ ಸಿಲುಕಿ ಗ್ರಾಹಕರ ಆತ್ಮಹತ್ಯೆ ಪ್ರಕರಣ ಹೆಚ್ಚಾದಂತೆ ಸರ್ಕಾರ ವಿಧಿಸಿದ ನಿಯಮಾವಳಿ ಬಗ್ಗೆ ಸಾರ್ವಜನಿಕ ಸಭೆ ಆಯೋಜಿಸಿ ಸಂಬಂಧಪಟ್ಟ ಲೀಡ್ ಬ್ಯಾಂಕ್, ನಬಾರ್ಡ್ ಬ್ಯಾಂಕ್ ಹಾಗೂ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಪ್ರತಿನಿಧಿಗಳನ್ನು ಆಹ್ವಾನಿಸಿ ನೇರ ಚರ್ಚೆಗೆ ತಾಲ್ಲೂಕು ಆಡಳಿತ ಅವಕಾಶ ಕಲ್ಪಿಸಿತ್ತು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಬಿ.ಆರತಿ ನೇತೃತ್ವದ ಸಭೆಯಲ್ಲಿ ರೈತ ಸಂಘದ ಪದಾಧಿಕಾರಿಗಳು, ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಮೈಕ್ರೋ ಫೈನಾನ್ಸ್ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡುವ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಮಾತನಾಡಿ ಕೃಷಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಮೀನಾ ಮೇಷ ಎಣಿಸುತ್ತದೆ. ಸಲ್ಲದ ನೂರಾರು ದಾಖಲೆ ಕೇಳಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿ ಬೇಸರ ಮೂಡಿಸುತ್ತಾರೆ. ಈ ಸಮಯ ಅನ್ಯ ಮಾರ್ಗ ಕಾಣದೆ ಮೈಕ್ರೋ ಫೈನಾನ್ಸ್ ಸಾಲದ ಸುಳಿಗೆ ಸಿಲುಕಿ ಮೀಟರ್ ಬಡ್ಡಿ ತೆತ್ತು ಸಾಲ ತೀರಿಸಲಾಗದೇ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಈ ಮಧ್ಯೆ ರಿಸರ್ವ್ ಬ್ಯಾಂಕ್ ಮೂಲಕ ಅಧಿಕೃತ ಪರವಾನಗಿ ಪಡೆದ ಮೈಕ್ರೋ ಫೈನಾನ್ಸ್ ಎಷ್ಟು ಎಂಬುದು ಸದ್ಯದಲ್ಲಿ ಲೀಡ್ ಬ್ಯಾಂಕ್ ಗೆ ಮಾಹಿತಿ ಗೊತ್ತಿಲ್ಲ. ಈಗ ಅಧಿಕೃತ 27 ಕಂಪೆನಿ ಪಟ್ಟಿ ಸಿದ್ಧವಿದೆ. ಆದರೆ ಅನಧಿಕೃತ ಗುಬ್ಬಿ ತಾಲ್ಲೂಕಿನಲ್ಲಿ ನೂರಾರು ಇವೆ. ಇವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಎಸ್ ಸಿವೈಸಿ ಪ್ರಧಾನ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ ಮೈಕ್ರೋ ಫೈನಾನ್ಸ್ ಇರುವ ಬಗ್ಗೆ ಸರ್ವೇ ಮಾಡುವ ಕೆಲಸ ಸ್ಥಳೀಯ ಸಂಸ್ಥೆಗಳದ್ದಾಗಿದೆ. ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಮೂಲಕ ಫೈನಾನ್ಸ್ ಕಚೇರಿಗಳ ಪಟ್ಟಿ ಪಡೆದು ಅಧಿಕೃತ ಪರವಾನಗಿ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ರಿಸರ್ವ್ ಬ್ಯಾಂಕ್ ಮೂಲಕ ಅಧಿಕೃತ ಆದೇಶವಿದೆಯೇ ಪರಿಶೀಲಿಸಿ ಮಾರ್ಗಸೂಚಿ ಪ್ರಕಾರ ಸಾಲ ನೀಡಿ ನಿಯಮ ಪ್ರಕಾರ ಬಡ್ಡಿ ವಸೂಲಿ ನಡೆದಿರುವ ಬಗ್ಗೆ ಕೂಡ ತನಿಖೆ ಆಗಬೇಕು. ಸಾಲ ವಸೂಲಿಗೆ ಬರುವ ಸಿಬ್ಬಂದಿಗಳು ಗೂಂಡಾ ವರ್ತನೆ ತೋರಿದ್ದಲ್ಲಿ ಪೊಲೀಸ್ ತಕ್ಷಣ ಮಧ್ಯ ಪ್ರವೇಶಿಸಿ ಗ್ರಾಹಕರ ಪರ ನಿಲ್ಲಬೇಕು. ಮಾನವೀಯ ಗುಣ ಹಾಗೂ ಕರುಣೆ ಎಂಬ ಮಾನದಂಡ ಬಳಸಿ ಕೆಲಸ ಮಾಡಲು ಸಿಬ್ಬಂದಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಚೈತನ್ಯ ಮಾತನಾಡಿ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುವ ಕೆಲಸ ನಮ್ಮದಾಗಿದೆ. ಬ್ಯಾಂಕ್ ಗ್ರಾಹಕರಿಗೆ ತೊಂದರೆ ಅದಲ್ಲಿ ನಮ್ಮಲ್ಲಿ ಮನವಿ ಮಾಡಬಹುದಾಗಿದೆ. ರೈತರು ಮೀಟರ್ ಬಡ್ಡಿ ವಸೂಲಿ ಮಾಡುವ ಫೈನಾನ್ಸ್ ಬಗ್ಗೆ ಮಾಹಿತಿ ನೀಡಬಹುದು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದು ಬಡ್ಡಿ ಹಾವಳಿಗೆ ಕಡಿವಾಣ ಹಾಕಲು ಸಿದ್ಧವಿದೆ. ಸಭೆಯಲ್ಲಿ ಸಾರ್ವಜನಿಕರಿಂದ ಬಂದ ದೂರು, ಸಲಹೆ ಸೂಚನೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು.
ತಹಶೀಲ್ದಾರ್ ಬಿ.ಆರತಿ ಮಾತನಾಡಿ ಸರ್ಕಾರ ವಿಧಿಸಿರುವ ನಿಯಮಾವಳಿಗಳ ಬಗ್ಗೆ ತಿಳಿಸಿ ಮೈಕ್ರೋ ಫೈನಾನ್ಸ್ ಅನಧಿಕೃತ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಸಿದ್ದವಿದ್ದೇವೆ. ಗ್ರಾಹಕರಿಗೆ ಮಾನಸಿಕ ಕಿರುಕುಳ, ದೈಹಿಕ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ ಬಗ್ಗೆ ದೂರು ಬಂದಲ್ಲಿ ಡಿವೈಎಸ್ಪಿ ನೇರವಾಗಿ ಸುಮೋಟೋ ಕೇಸು ದಾಖಲಿಸಲು ಸರ್ಕಾರ ಸೂಚಿಸಿದೆ. ರಿಸರ್ವ್ ಬ್ಯಾಂಕ್ ನಿಯಮಗಳ ಜೊತೆ ಸರ್ಕಾರ ವಿಧಿಸಿದ ನಿಯಮಗಳನ್ನು ಪಾಲಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ರೊಳಗೆ ಸಾಲ ವಸೂಲಿಗೆ ತೆರಳಬೇಕು. ನಿಯಮ ಮೀರಿ ಬಡ್ಡಿ ವಸೂಲಿ, ಸಾಲದಲ್ಲೇ ಬೋಗಸ್ ದಾಖಲೆ ಸೃಷ್ಟಿ, ಸಿಬ್ಬಂದಿಗಳಿಂದಲೇ ವಂಚನೆ ಹೀಗೆ ಅನೇಕ ದೂರಿಗೆ ಐದು ಲಕ್ಷ ದಂಡ, ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ನಿಯಮಾವಳಿಯನ್ನು ತಿಳಿಸಿದರು.
ಸಭೆಯಲ್ಲಿ ನಬಾರ್ಡ್ ಬ್ಯಾಂಕ್ ಜಿಲ್ಲಾ ನಿರ್ದೇಶಕಿ ಕೀರ್ತಿಪ್ರಭಾ, ರೈತ ಸಂಘದ ವೆಂಕಟೇಗೌಡ, ಸಿ.ಜಿ.ಲೋಕೇಶ್, ದಲಿತ ಸಂಘಟನೆಯ ಕೊಡಿಯಾಲ ಮಹದೇವು, ಚೇಳೂರು ಶಿವನಂಜಪ್ಪ, ಕೀರ್ತಿ, ಕಿಟ್ಟದಕುಪ್ಪೆ ನಾಗರಾಜು, ತಿಪಟೂರು ನಂದಿನಿ, ಗುಬ್ಬಿ ಹಿತ ರಕ್ಷಣಾ ಸಮಿತಿಯ ಯಲ್ಲಪ್ಪ, ಸಲೀಂ ಪಾಶ, ಗೋಪಾಲ್ ಅರಸ್ ಸೇರಿದಂತೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಪ್ರತಿನಿಧಿಗಳು ಇದ್ದರು.
ವರದಿ – ಎಸ್. ಕೆ. ರಾಘವೇಂದ್ರ