ದಲಿತರ ಕುಂದು ಕೊರತೆಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕುಂದು ಕೊರತೆ ಸಭೆಯಲ್ಲಿ ಪ್ರಸ್ತಾಪವಾದ ಹಲವು ಸಮಸ್ಯೆಗೆ ಶಾಸಕ ಎಸ್.ಆರ್.ಶ್ರೀನಿವಾಸ್ ಸೂಕ್ತ ಉತ್ತರ ನೀಡಿ ಪರಿಹಾರವನ್ನು ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆಯನ್ನು ತಹಶೀಲ್ದಾರ್ ಬಿ.ಆರತಿ ವಹಿಸಿದ್ದರು. ದಲಿತ ಪರ ಸಂಘಟನೆಯ ಪದಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಇಲಾಖಾಧಿಕಾರಿಗಳು ಹಾಜರಿದ್ದ ಸಭೆಯಲ್ಲಿ ಹಿಂದಿನ ದಲಿತ ಸಭೆಯಲ್ಲಿ ಪ್ರಸ್ತಾಪವಾಗಿದ್ದ ಸಮಸ್ಯೆ ಹಾಗೂ ಅಹವಾಲು ಅರ್ಜಿಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ಉತ್ತರ ಲಿಖಿತ ರೂಪದಲ್ಲಿ ಮಂಡಿಸಲಾಯಿತು.
ಗುಬ್ಬಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಸೂಕ್ತ ಸ್ಥಳ ಒದಗಿಸಲು ಒಕ್ಕೊರಲಿನ ಮನವಿ ಬಂದ ಹಿನ್ನಲೆ ಸ್ಥಳ ಪರಿಶೀಲಿಸಲು ಶಾಸಕರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ಈ ಜೊತೆಗೆ ನಮ್ಮ ತಾಲ್ಲೂಕಿನ ಸಾಲು ಮರದ ತಿಮ್ಮಕ್ಕ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ಸರ್ಕಾರಕ್ಕೆ ಒತ್ತಾಯಿಸಿ ಈ ಸಭೆಯಲ್ಲಿ ನಿರ್ಣಯ ಕೈಗೊಂಡು ಮುಖ್ಯಮಂತ್ರಿಗಳಿಗೆ ಸಭೆಯ ನಿರ್ಣಯ ಕಳುಹಿಸಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
9 ಕೋಟಿಯು ಹೊಸ ಬಸ್ ಸ್ಟ್ಯಾಂಡ್ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಲಿದೆ. ಶೀಘ್ರದಲ್ಲಿ ಕೆಲಸ ಆರಂಭಿಸಿ ನಿಲ್ದಾಣ ನಿರ್ಮಾಣ ಆಗಲಿದೆ. ಆ ಸಮಯದಲ್ಲಿ ದಲಿತ ಪರ ಸಂಘಟನೆಗಳು ಮನವಿ ನೀಡಿದರೆ ಸರ್ಕಾರದ ಗಮನಕ್ಕೆ ಹಾಗೂ ಸಾರಿಗೆ ನಿಗಮದಲ್ಲಿ ಪ್ರಸ್ತಾಪಿಸಿ ಹೆಸರಿಡುವ ಭರವಸೆ ನೀಡಿದ ಶಾಸಕರು ಲೋಕೋಪಯೋಗಿ ಇಲಾಖೆ ರಸ್ತೆಗಳ ಬದಿಯಲ್ಲಿ ಉಳುಮೆ ಮಾಡುವುದು ಹಾಗೂ ಪೈಪ್ ಲೈನ್ ಗಾಗಿ ರಸ್ತೆ ಅಗೆಯುವುದು ದೂರುಗಳು ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪೊಲೀಸ್ ಪ್ರಕರಣ ದಾಖಲಿಸಿದರೆ ಮತ್ತೇ ಈ ಘಟನೆ ಮರುಕಳಿಸುವುದಿಲ್ಲ. ಈ ಘಟನೆ ನಡೆಯದಂತೆ ರಸ್ತೆ ನಿರ್ಮಾಣ ವೇಳೆ ಪ್ರತಿ 400 ಮೀಟರ್ ಅಂತರಕ್ಕೆ ಅಡ್ಡಲಾಗಿ ಪೈಪ್ ಅಳವಡಿಸಿ ರೈತರಿಗೆ ಅನುವು ಮಾಡಲಾಗುತ್ತದೆ. ಈ ಬಗ್ಗೆ ಜನರಿಗೆ ತಿಳಿಸುವ ಕೆಲಸ ಇಲಾಖೆ ಮಾಡಬೇಕು ಎಂದು ಸೂಚಿಸಿದರು.
ಸ್ಮಶಾನ ಭೂಮಿ, ರಸ್ತೆ ತಕರಾರು ಹೀಗೆ ಅನೇಕ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ಮಮತಾ, ತಾಪಂ ಇಓ ಶಿವಪ್ರಕಾಶ್, ಸಿಪಿಐ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುಪ್ರಸಾದ್ ಇತರರು ಇದ್ದರು.