ಗ್ಯಾರಂಟಿ ಯೋಜನೆಗೆ ಹಣ ಹೊಂಚಲಾಗದೆ ಅಭಿವೃದ್ದಿ ಕೆಲಸಗಳನ್ನೇ ಪಕ್ಕಕ್ಕೆ ತಳ್ಳಿ ಎಲ್ಲದಕ್ಕೂ ತೆರಿಗೆ ವಿಧಿಸಿ ಸರ್ಕಾರ ನಡೆಸಲಾಗುತ್ತಿದೆ. ಪೆಟ್ರೋಲ್, ಡೀಸೆಲ್, ಹಾಲು, ನೀರು ಎಲ್ಲದಕ್ಕೂ ತೆರಿಗೆ ಹಾಕಿ ಉಳಿದ ಗಾಳಿ ಬೆಳಕಿಗೆ ತೆರಿಗೆ ಬಾಕಿ ಇದೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಕುಟುಕಿದರು.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ನೀಲೇಗೌಡನಪಾಳ್ಯ ಗ್ರಾಮದಲ್ಲಿ ಆಯೋಜಿಸಿದ್ದ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಹರಿಸುವ 22 ಲಕ್ಷ ರೂಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕೇಂದ್ರದ ಅನುದಾನದ ಕೆಲಸಗಳು ಮಾತ್ರ ಎಲ್ಲಡೆ ನಡೆದಿದೆ. ರಾಜ್ಯ ಸರ್ಕಾರ ಒಂದು ರೂಪಾಯಿ ಅನುದಾನ ನೀಡುತ್ತಿಲ್ಲ. ಜನರ ಅಭಿವೃದ್ದಿ ಪ್ರಶ್ನೆಗೆ ಉತ್ತರ ನೀಡಲಾಗುತ್ತಿಲ್ಲ. ಹೀಗೆ ಜನರಿಗೆ ಬೇಸರ ತಂದ ಕಾಂಗ್ರೆಸ್ ಸರ್ಕಾರ ದಿವಾಳಿಯತ್ತ ಆಗಿದೆ ಎಂದು ಕಿಡಿಕಾರಿದರು.
ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎನ್ನುವ ಕಾಂಗ್ರೆಸ್ ಈಗ ಅವರು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದ ಅವರು 2006 ರ ಪ್ರಕರಣ, ಕೋವಿಡ್ ಲೆಕ್ಕಾಚಾರ ಹೀಗೆ ದ್ವೇಷ ರಾಜಕಾರಣ ಆರಂಭಿಸಿ ಮೂಡಾ ಹಗರಣ ಮುಚ್ಚುವ ಅಥವಾ ವಿಷಯಾಂತರ ಮಾಡುವ ಕೆಲಸ ಮಾಡುತ್ತಿದೆ. ಈ ಹಿಂದೆ ಹೊಂದಾಣಿಕೆ ರಾಜಕೀಯ ಮಾಡಿದ್ದ ಕಾಂಗ್ರೆಸ್ ಈಗ ದ್ವೇಷ ಆರಂಭಿಸಿದೆ. ಇವೆಲ್ಲವನ್ನೂ ಜನರೇ ಹತ್ತಿರದಿಂದ ಗಮನಿಸುತ್ತಿದ್ದಾರೆ ಎಂದರು.
ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಹೇಳಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಅಂಥಹ ಭ್ರಷ್ಟಚಾರ ಕಂಡಿಲ್ಲ. ಯಾವುದೇ ಅಕ್ರಮ ಕಂಡಲ್ಲಿ ತನಿಖೆಗೆ ನಾನೇ ಶಿಫಾರಸ್ಸು ಮಾಡುತ್ತೇನೆ ಎಂದ ಅವರು ನ್ಯಾಯಾಲಯದಲ್ಲಿ ನಡೆದಿರುವ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ವಕೀಲರು ಈಗಾಗಲೇ ವಾದ ಮಂಡಿಸಿದ್ದಾರೆ. ಮುಂದಿನ ನ್ಯಾಯಾಲಯ ಆದೇಶಕ್ಕೆ ಎಲ್ಲರೂ ತಲೆ ಬಾಗಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬೋರಪ್ಪನಹಳ್ಳಿ ಕುಮಾರ್, ಹೋಬಳಿ ಅಧ್ಯಕ್ಷ ಜಗದೀಶ್, ಹೋಬಳಿ ಯುವ ಘಟಕ ಅಧ್ಯಕ್ಷ ನವೀನ್ ಕುಮಾರ್, ಮಾಜಿ ತಾಪಂ ಸದಸ್ಯ ಸಿದ್ದರಾಮಯ್ಯ, ಗ್ರಾಪಂ ಸದಸ್ಯೆ ಲಾವಣ್ಯ, ಮುಖಂಡರಾದ ದೊಡ್ಡೇಗೌಡ, ಶಿವಗಂಗಣ್ಣ, ಶಿವರಾಜ್, ಸಿದ್ದೇಗೌಡ, ಗುತ್ತಿಗೆದಾರ ಚಿಕ್ಕರಾಜು ಇತರರು ಇದ್ದರು.
