ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ ಸಮಾಜಕ್ಕೆ ಕೊಡುಗೆಯಾಗಿ ಕೊಡುವುದು ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಶಿಕ್ಷಣ ಸಂಯೋಜಕ ಲೋಕೇಶ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಹಿಂಡಿಸಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಅವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸ ಮಾತನಾಡಿ, ಮಕ್ಕಳ ಪ್ರಗತಿಯನ್ನು ಪೋಷಕರು ಶಾಲೆಗೆ ಭೆಟಿ ನೀಡಿ ಪ್ರಗತಿಯನ್ನು ವಿಚಾರಿಸಿ ಕೊಳ್ಳಬೇಕು, ಇಂದು ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ಅಚಾರಗಳನ್ನು ವಿಚಾರಗಳನ್ನು ಪಾಲಿಸಬೇಕು. ಪೋಷಕರು ಮನೆಯಲ್ಲಿ ಅಭ್ಯಾಸ ಮಾಡುವ ವಾತಾವರಣ ರೂಪಿಸಬೇಕು ಎಂದು ತಿಳಿಸಿದರು.
ಹಿಂಡಿಸಿಗೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಮಂಗಳಗೌರಮ್ಮ ಮಾತನಾಡಿ,ಪೋಷಕರು ತಮ್ಮ ಮನೆಗಳನ್ನು ಗ್ರಂಥಾಲಯಗಳನ್ನಾಗಿಸಿದಾಗ ಮಾತ್ರ ಮಕ್ಕಳು ಸಮಾಜದಲ್ಲಿ ಉನ್ನತವಾದ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಗುತ್ತದೆ. ಆದರೆ, ಟಿವಿ ಧಾರಾವಾಹಿ ಹಾಗೂ ಮೊಬೈಲ್‌ಗಳ ಗೀಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕೀವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ವೇಕಟೇಶ್ ಮಾತನಾಡಿ, ಶಾಲೆಗಳ ಅಲಿವು ಉಳಿವಿಗೆ ಪೋಷಕರು ಸಹಕರಿಸಬೇಕು. ಗ್ರಾಮ ಮಟ್ಟದಲ್ಲಿ ಪೋಷಕರು ಶಾಲೆಯೊಂದಿಗೆ ಒಡನಾಟ ಇಟ್ಟುಕೊಂಡಾಗ ಮಾತ್ರ ಕನ್ನಡ ಶಾಲೆಗಳು ಅಭಿವೃದ್ಧಿಯಾಗುತ್ತವೆ ಎಂದು ತಿಳಿಸಿದರು.
ಗುಬ್ಬಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಹಾಗೂ ಮುಖ್ಯ ಶಿಕ್ಷಕಿ ಪದ್ಮಾವತಿ.ಜಿ ಮಾತನಾಡಿ, ಮಕ್ಕಳಿಗೆ ಪೋಷಕರು ಗುರಿ ನೀಡಿ, ಅದನ್ನು ತಲುಪು ವವರೆಗೂ ಪ್ರೋತ್ಸಾಹ ನೀಡಬೇಕು. ಶಿಕ್ಷಕರಿಂದ ಗುಣಮಟ್ಟದ ಬೋಧನೆ, ವಿದ್ಯಾರ್ಥಿಗಳಿಂದ ಓದು, ಪಾಲಕರಿಂದ ಪರಿಶೀಲನೆ ಸರಿಯಾದ ರೀತಿಯಲ್ಲಿ ನಡೆದಲ್ಲಿ ಮಾತ್ರ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ, ನಿಜನಂದಮೂರ್ತಿ, ಸಿ ಆರ್ ಸಿ ಧರಣೇಶ್ ಟಿ ಎಂ , ಸಾವಿತ್ರಿಬಾಯಿಪುಲೆ ಸಂಘದ ಕಾರ್ಯದರ್ಶಿ ಮಂಜುಳ, ಎಸ್ ಡಿ ಎಂ ಸಿ ಅಧ್ಯಕ್ಷ ಪಾತಯ್ಯ, ವಿಎಸ್ ಎಸ್ ಎನ್ ನಿರ್ದೇಶಕಿ ಪಾರ್ವತಮ್ಮ, ಸಹಶಿಕ್ಷಕರಾದ ಮಂಜುಳ ,ಮಮತಾ, ಪ್ರಶಾಂತ್, ಅನುಪಮ, ವೀಣಾ, ಅಶಾ, ಜಯಮ್ಮ ಹಾಗೂ ಪೋಷಕರು ಗ್ರಾಮಸ್ಥರು ಇದ್ದರು.
