ಸರ್ಕಾರಿ ಬಸ್ ದರ ಏರಿಕೆ ಬಗ್ಗೆ ಸಾರ್ವಜನಿಕರಲ್ಲಿ ಎಲ್ಲಿಯೂ ವಿರೋಧ ಕೇಳಿಲ್ಲ. ಆದರೆ ಯಾವ ವಿಚಾರ ಸಿಗದೇ ಕಾಯುತ್ತಿದ್ದ ವಿರೋಧ ಪಕ್ಷ ಮಾತ್ರ ದರ ಏರಿಕೆ ಬಗ್ಗೆ ಮಾತನಾಡುತ್ತಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಗುಬ್ಬಿ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಬಳಿ ಒಟ್ಟು 3.47 ಕೋಟಿ ರೂಗಳ ಸಿಸಿ ರಸ್ತೆ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಹಿಂದೆ ಬಿಜೆಪಿ ಸರ್ಕಾರ ರಸ್ತೆ ಸಾರಿಗೆ ಸಂಸ್ಥೆಯನ್ನು 6 ಸಾವಿರ ಕೋಟಿ ರೂಗಳ ಸಾಲಕ್ಕೆ ಸಿಲುಕಿಸಿದ್ದರು. ಅಂದಿನ ಸಚಿವ ಅಶೋಕ್ ಅವರು ನಿಗಮದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಟೈರ್, ಡೀಸೆಲ್, ಸಿಬ್ಬಂದಿ ವೇತನ ಸೇರಿದಂತೆ ಪ್ರತಿಯೊಂದು ಬೆಲೆ ಹೆಚ್ಚಿರುವ ಈ ಸಮಯದಲ್ಲಿ ದರ ಏರಿಕೆ ಸರಿ ಇದೆ ಎಂದು ಸಮರ್ಥಿಸಿಕೊಂಡರು.
ನಿಗಮದ ಸಿಬ್ಬಂದಿಗಳ ಸಲಹುವ ನಮ್ಮ ಕೆಲಸಕ್ಕೆ ಸರ್ಕಾರ ಕೈಜೋಡಿಸಿದೆ. ರಾಜ್ಯದಲ್ಲಿ 1700 ಹೊಸ ಮಾರ್ಗವನ್ನು ಆರಂಭಿಸಿ 6 ಸಾವಿರ ಹೊಸ ಬಸ್ಸುಗಳ ಸಂಚಾರ ನಡೆಸಿದ್ದೇವೆ. ಪ್ರತಿ ವರ್ಷ 500 ಬಸ್ಸುಗಳು ಬಳಕೆಗೆ ಯೋಗ್ಯವಲ್ಲದ ರೀತಿಯಾಗುತ್ತದೆ. ಈ ಅನಿವಾರ್ಯ ಅರಿತು 9 ಸಾವಿರ ಬಸ್ಸುಗಳ ಖರೀದಿಗೆ ಚಿಂತನೆ ನಡೆದಿದೆ. ಕಳೆದ 14 ವರ್ಷದಿಂದ ವಿದ್ಯಾರ್ಥಿಗಳ ಪಾಸ್ ಹೆಚ್ಚಳ ಮಾಡಿಲ್ಲ. ಮುಷ್ಕರಕ್ಕೆ ಸಿದ್ದವಿದ್ದ ಸಿಬ್ಬಂದಿಗಳ ಅನುಕೂಲ ಆಲಿಸಿ ಬೇಡಿಕೆ ಈಡೇರಿಸಲಿದ್ದೇವೆ. ನಿಗಮ ಎಲ್ಲಾ ರೀತಿಯಲ್ಲಿ ಸುಸ್ಥಿತಿಯಲ್ಲಿ ಸಾಗಿದೆ ಎಂದು ವಿವರಿಸಿದ ಅವರು ಸಾರಿಗೆ ನಿಗಮದ ನೌಕರರಿಗೆ ಆರೋಗ್ಯ ವಿಮೆಯನ್ನು ಅವರ ಕುಟುಂಬ ಸಮೇತ ನೀಡಲಿದ್ದೇವೆ. ಇದಕ್ಕೆ ರಾಜ್ಯದ 275 ಆಸ್ಪತ್ರೆಯನ್ನು ಗುರುತಿಸಿದ್ದೇವೆ. ನೌಕರ ಮರಣ ಹೊಂದಿದ್ದಲ್ಲಿ ಒಂದು ಕೋಟಿ ಪರಿಹಾರ ನೀಡಲಿದ್ದೇವೆ. ಈ ಜೊತೆಗೆ ಪ್ರಯಾಣಿಕರ ಸಾವಿಗೂ 25 ಲಕ್ಷ ಪರಿಹಾರ ನಿಗಮ ನೀಡಲಿದೆ. ಎಲ್ಲವೂ ಅನುಕೂಲ ಮಾಡಿದಾಗ ಹಣ ಕ್ರೋಢೀಕರಣ ಮಾಡಬೇಕಿದೆ ಎಂದರು.

ಸರ್ಕಾರದ ಕೆಲಸಗಳಲ್ಲಿ ನ್ಯೂನ್ಯತೆ ಹುಡುಕಿದ ವಿರೋಧ ಪಕ್ಷ ಗುತ್ತಿಗೆ ವಿಚಾರವನ್ನು ಹಾಸ್ಯಾಸ್ಪದವಾಗಿ ಹೇಳುತ್ತಿವೆ. ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ನೂರರಷ್ಟು ಕಮಿಷನ್ ಎನ್ನುತ್ತಾರೆ. ಅರ್ಥವೇ ಇಲ್ಲದ ಹೇಳಿಕೆಗೆ ಏನೂ ಉತ್ತರ ನೀಡುವುದು. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಹ ಶೇಕಡಾ 60 ಅನ್ನುತ್ತಾರೆ. ಜಿಎಸ್ ಟಿ ಸೇರಿದರೆ ಇನ್ನೇನು ಕೆಲಸ ಮಾಡುತ್ತಾರೆ. ಆಲೋಚಿಸಿ ಆರೋಪ ಮಾಡುವುದು ಒಳಿತು. ಬಾಯಿ ಬಿಟ್ಟರೆ ಬರೀ ಸುಳ್ಳು ಹೇಳುವುದು ಅವರಿಗೆ ಸಲ್ಲದು. ಇದನ್ನೇ ಬಿಜೆಪಿ ಮುಂದುರೆಸಿದೆ. ಸುಳ್ಳು ಆರೋಪ ಮಾಡುವುದು ರೂಢಿಯಾಗಿದೆ. ಯಾರೋ ಸತ್ತರೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಾರೆ ಇದೇ ಅವರ ಕೆಲಸ ಎಂದು ಟೀಕಿಸಿದ ಅವರು ಗ್ಯಾರಂಟಿ ಯೋಜನೆಯಲ್ಲಿ ಯಾವುದೇ ಅಪಸ್ವರವಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿರೋಧಪಕ್ಷ ಹಾಗೂ ಕೆಲ ಮಾಧ್ಯಮಗಳ ಸೃಷ್ಟಿ ಎಂದರು.
ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಮಂದಿ ಎಲ್ಲಾ ರಂಗದಲ್ಲೂ ಇದ್ದಾರೆ. ಪತ್ರಿಕಾ ಕ್ಷೇತ್ರದಲ್ಲಿ ಸಹ ಕೆಲ ಪತ್ರಕರ್ತ ಹೆಸರಿನಲ್ಲಿ ಅಧಿಕಾರಿಗಳನ್ನು ಬೆದರಿಸುವುದು. ರೋಲ್ ಕಾಲ್ ವಸೂಲಿ ಮಾಡುವುದು ಮಾಡುತ್ತಿದ್ದಾರೆ. ಮೀನು ಹಿಡಿಯುವವರ ಬಳಿ 25 ಕೆಜಿ ಮೀನು ವಸೂಲಿ ಮಾಡಿ ಅಡುಗೆ ಮಾಡಲು ದುಡ್ಡು ಕೇಳಿದ ಬಗ್ಗೆ ದೂರು ಬಂದಿದೆ. ಅಧಿಕಾರಿಗಳನ್ನು ಬೆದರಿಸಿ ಹಣ ಪೀಕುವುದು, ಗ್ರಾಮ ಪಂಚಾಯಿತಿಗಳಿಗೆ ಬಿಲ್ ನೀಡಿ ಹಣ ಕೇಳುವುದು, ಹಣ ನೀಡದ ಇಲಾಖೆ ಮುಂದೆ ಪ್ರತಿಭಟನೆ ಮಾಡುವುದು ಇವೆಲ್ಲಾ ಕೇಳಿ ಬಂದ ದೂರು. ಇನ್ಮುಂದೆ ಒಬ್ಬ ಅಧಿಕಾರಿಯನ್ನು ಬೆದರಿಸಿದ ದೂರು ಬಂದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ದಲಿತರ ಮೇಲೆ ದೌರ್ಜನ್ಯ, ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಗ್ಯಾರಂಟಿ. ನನ್ನ 25 ವರ್ಷಗಳ ರಾಜಕೀಯ ಜೀವನದಲ್ಲಿ ದಲಿತರೊಂದಿಗೆ ಬೆಳೆದಿದ್ದೇನೆ. ಎಂದಿಗೂ ದಲಿತರ ದೌರ್ಜನ್ಯ ಆಗಲು ಬಿಡುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷೆ ಮಮತಾ ಶಿವಪ್ಪ, ಸದಸ್ಯರಾದ ಕುಮಾರ್, ಮಹಮದ್ ಸಾದಿಕ್, ರೇಣುಕಾ ಪ್ರಸಾದ್, ಸಿ.ಮೋಹನ್, ಶೌಕತ್ ಆಲಿ, ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಜಿಪಂ ಮಾಜಿ ಸದಸ್ಯ ಜಗನ್ನಾಥ್, ಉಂಡೆ ರಾಮಣ್ಣ, ಮುಖ್ಯಾಧಿಕಾರಿ ಮಂಜುಳಾದೇವಿ, ಇಂಜಿನಿಯರ್ ಬಿಂದುಸಾರ, ಗುತ್ತಿಗೆದಾರ ಜಗದೀಶ್, ಮಂಜುನಾಥ್ ಇತರರು ಇದ್ದರು.