ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವಿಷಯಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಇದೇ ತಿಂಗಳ 18 ರಂದು ಪಟ್ಟಣದ ಎಸ್ ಸಿ ಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ತಾಪಂ ಇಓ ಶಿವಪ್ರಕಾಶ್ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ತಾಲ್ಲೂಕಿನ ಒಟ್ಟು 34 ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ತರಬೇತಿ ನೀಡಲು ಈ ಕಾರ್ಯಾಗಾರ ಆಯೋಜಿಸಲಾಗಿದೆ. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಚುನಾಯಿತ ಪಂಚಾಯಿತಿ ಜನಪ್ರತಿನಿಧಿಗಳು ಭಾಗವಹಿಸಲು ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಮೂಲಕ ಗ್ರಾಮ ಪಂಚಾಯಿತಿ ತನ್ನೆಲ್ಲಾ ಸಂಪನ್ಮೂಲ ಕ್ರೋಢೀಕರಣ ಹಾಗೂ ಸದ್ಭಳಕೆ ಬಗ್ಗೆ ಚರ್ಚಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆ, ಮೂಲಭೂತ ಸವಲತ್ತುಗಳು, ಹಣಕಾಸು ಯೋಜನೆ ಹೀಗೆ ಅನೇಕ ವಿಚಾರ ಪ್ರಸ್ತಾಪದ ಜೊತೆ ಪಂಚಾಯತ್ ಕಾನೂನು ಬಗ್ಗೆ ಸಹ ಅರಿವು ಮೂಡಿಸಲಾಗುವುದು. ಈ ಕಾರ್ಯಕ್ರಮಕ್ಕೆ ಶಾಸಕರಾದ ಎಸ್.ಆರ್.ಶ್ರೀನಿವಾಸ್, ಎಂ.ಟಿ.ಕೃಷ್ಣಪ್ಪ, ಜಿಪಂ ಸಿಇಓ ಜಿ.ಪ್ರಭು ಉಪಸ್ಥಿತರಿರುತ್ತಾರೆ ಎಂದರು.