ವಿಶ್ವ ವಿಖ್ಯಾತಿ ಮೈಸೂರು ದಸರಾ ವೈಭವದಷ್ಟೇ ಮಾದರಿ ತುಮಕೂರು ದಸರಾ ಉತ್ಸವ ಅದ್ದೂರಿಯಾಗಿ ಚಾಲ್ತಿ ದೊರಕಿದ್ದು ಪ್ರತಿ ನಿತ್ಯ ಧಾರ್ಮಿಕ ಉತ್ಸವಗಳು, ನವರಾತ್ರಿ ಉತ್ಸವಗಳು, ವಿಶೇಷ ಅಲಂಕಾರ, ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿಶೇಷವಾಗಿ ಇದೇ ತಿಂಗಳ 11 ಮತ್ತು 12 ರಂದು ಅತ್ಯಾಕರ್ಷಣೆಯ ಕಾರ್ಯಕ್ರಮಗಳು ಜರುಗಲಿವೆ. ಜಿಲ್ಲೆಯ ಸಾವಿರಾರು ಸಂಖ್ಯೆಯ ಮಂದಿ ಈ ತುಮಕೂರು ದಸರಾ ಉತ್ಸವಕ್ಕೆ ಭಾಗವಹಿಸಲಿದ್ದು ಗುಬ್ಬಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ತಹಶೀಲ್ದಾರ್ ಬಿ.ಆರತಿ ಮನವಿ ಮಾಡಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಹತ್ತು ದಿನಗಳ ಕಾರ್ಯಕ್ರಮದಲ್ಲಿ ಇದೇ ತಿಂಗಳ 6 ರಂದು ವಿಶೇಷ ದೀಪಾಲಂಕಾರ ಇಡೀ ತುಮಕೂರು ನಗರದಲ್ಲಿ ಕಂಗೊಳಿಸಲಿದೆ. ಪ್ರಮುಖ ರಸ್ತೆಗಳು, ವೃತ್ತಗಳು, ದೇವಾಲಯಗಳು ಸಂಜೆ ವಿದ್ಯುದ್ದೀಪಳಿಂದ ಅಲಂಕಾರಗೊಂಡು ಜನರನ್ನು ಆಕರ್ಷಿಸಲಿದೆ. ಅದೇ ದಿನ ಸ್ಟೇಡಿಯಂನಲ್ಲಿ ಬೆಳಿಗ್ಗೆ ಮಹಿಳಾ ಮತ್ತು ಮಕ್ಕಳ ದಸರಾ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಂಜೆ ಯುವ ಸಂಭ್ರಮ ಮತ್ತು ಆಹಾರ ಮೇಳ ನಡೆಯಲಿದೆ ಎಂದು ವಿವರಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮುಖ್ಯ ವೇದಿಕೆ ನಿರ್ಮಾಣವಾಗಿದ್ದು ಇದೇ ತಿಂಗಳ 11 ರ ಶನಿವಾರ ಬೆಳಿಗ್ಗೆ 7 ಕ್ಕೆ ಹತ್ತು ಸಾವಿರ ಮಂದಿಯ ಮ್ಯಾರಥಾನ್ ಓಟ ಸ್ಟೇಡಿಯಂ ಬಳಿ ನಡೆದು ನಂತರ ನಾಡ ಕುಸ್ತಿ, ಆಹಾರ ಮೇಳ, ವಸ್ತು ಪ್ರದರ್ಶನ ಮುಖ್ಯ ವೇದಿಕೆ ಬಳಿ ನಡೆಯಲಿದೆ. ಎಚ್ ಎಎಲ್ ಹೆಲಿಕಾಪ್ಟರ್ ಶೋ, ಇಸ್ರೋ ವಿಂಟೆಜ್ ಕಾರ್ ಶೋ ವಿಶೇಷವಾಗಿ ನಡೆಯಲಿದೆ. ಸಂಜೆ 6 ಕ್ಕೆ ನಟ ಶಿವರಾಜಕುಮಾರ್ ಆಗಮನ, ಗುರುಕಿರಣ್ ಹಾಗೂ ಕಂಬದ ರಂಗಯ್ಯ ಅವರಿಂದ ರಸ ಸಂಜೆ ಕಾರ್ಯಕ್ರಮ, ಆಕರ್ಷಕ ಲೇಸರ್ ಶೋ ನಡೆಯಲಿದೆ, ಅ.12 ರ ವಿಜಯದಶಮಿ ದಿನದಂದು ಬೆಳಿಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮ ನಡೆದು ಸಂಜೆ 6.30 ಕ್ಕೆ ಹಾಡುಗಾರ ವಿಜಯ್ ಪ್ರಕಾಶ್ ತಂಡದಿಂದ ಸಂಗೀತ ರಸಸಂಜೆ ಹಾಗೂ ಡ್ರೋನ್ ಮೂಲಕ ಕಾರ್ಯಕ್ರಮ ನಡೆದು ಸಮಾರೋಪ ಸಮಾರಂಭದಲ್ಲಿ ಹಸಿರು ಮದ್ದುಗಳಿಂದ ಬಾಣ ಬಿರುಸು ಪ್ರದರ್ಶನ ನಡೆಯಲಿದೆ ಎಂದರು.
ಮಧ್ಯಾಹ್ನ 1 ಕ್ಕೆ ಟೌನ್ ಹಾಲ್ ನಿಂದ ಮುಖ್ಯ ವೇದಿಕೆಯವರೆಗೆ ವಿಜಯದಶಮಿ ಮೆರವಣಿಗೆ ವೈಭವವಾಗಿ ಜರುಗಲಿದೆ. ಈ ಎಲ್ಲಾ ಅದ್ದೂರಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸಬೇಕು. ತುಮಕೂರು ನಗರಕ್ಕೆ ಸಮೀಪದ ಗುಬ್ಬಿ ತಾಲ್ಲೂಕಿಗೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮನವಿ ಮಾಡಿ ತಾಲ್ಲೂಕಿನ ಜನಪರ ಸಂಘ ಸಂಸ್ಥೆಗಳಿಗೆ ಕರಪತ್ರ ಹಂಚಿ ಭಾಗವಹಿಸಲು ಮನವಿ ಮಾಡಲಾಗುತ್ತಿದೆ. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಇಓ ಶಿವಪ್ರಕಾಶ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇದ್ದರು.
