ಗ್ರಾಮೀಣ ಭಾಗದಲ್ಲಿನ ಕನ್ನಡ ಶಾಲೆಗಳನ್ನು ಮುಚ್ಚುವ ಹಂತ ತಲುಪಿದೆ. ಇಂಗ್ಲೀಷ್ ವ್ಯಾಮೋಹದಿಂದ ಕಾಂನ್ವೆಂಟ್ ಶಾಲೆಗೆ ಮಕ್ಕಳನ್ನು ಸೇರಿಸಿ ಪ್ರತಿಷ್ಠೆಯತ್ತ ಸಾಗುತ್ತಾರೆ. ಈ ವ್ಯಾಮೋಹದಿಂದ ಕನ್ನಡಕ್ಕೆ ದಕ್ಕೆ ಬರುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ಆಯೋಜಿಸಿದ್ದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಕನ್ನಡ ಭಾಷೆಗೆ ಎರಡು ಸಾವಿರ ವರ್ಷದ ಇತಿಹಾಸವಿದೆ. ಇಂತಹ ನಮ್ಮ ಭಾಷೆಯ ಪರಂಪರೆಯ ಮಹಿಮೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು.
ಅನ್ಯ ಭಾಷೆ ವ್ಯಾಮೋಹ ತೊರೆದು ಮಾತೃಭಾಷೆ ಕನ್ನಡ ಎತ್ತಿ ಹಿಡಿಯುವ ಕೆಲಸ ನಮ್ಮ ಯುವಕರು ಮಾಡಬೇಕಿದೆ. ಕನ್ನಡ ಉಳಿದಿರುವುದು ಗ್ರಾಮಗಳಲ್ಲಿ ಮಾತ್ರ. ಈ ಹಿನ್ನಲೆ ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಬೆಳೆಸಿಕೊಂಡು ಅನ್ಯ ಭಾಷಿಕರಿಗೂ ನಮ್ಮ ಭಾಷೆ ಕಲಿಸಿ ಮುನ್ನಡೆಯಬೇಕಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕ ನಮ್ಮ ಕನ್ನಡ ಸಾಹಿತ್ಯ ಮೇರು ಸ್ಥಾನದಲ್ಲಿದೆ. ಇದೇ ಸಂದರ್ಭದಲ್ಲಿ ಕನ್ನಡ ಶಾಲೆ ಉಳಿಸುವ ಕೆಲಸಕ್ಕೆ ಎಲ್ಲರೂ ಪಣ ತೊಡಬೇಕು ಎಂದು ಕರೆ ನೀಡಿದರು.
ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ತಹಶೀಲ್ದಾರ್ ಬಿ.ಆರತಿ, ಕನ್ನಡ ಇತಿಹಾಸದಲ್ಲಿ ಮಾತೃಭಾಷೆಗೆ ಮಹತ್ವ ಸಾಕಷ್ಟಿದೆ. ಆಡಳಿತಾತ್ಮಕವಾಗಿ ಕನ್ನಡ ಜಾರಿಯಾಗಿದೆ. ಇದೇ ಮಾದರಿ ಉದ್ಯೋಗದಲ್ಲಿ ಕನ್ನಡಕ್ಕೆ ಅವಕಾಶ ಸಿಗಬೇಕಿದೆ. ಖಾಸಗಿ ರಂಗದಲ್ಲಿ ಸಹ ತಾಯಿಭಾಷೆಗೆ ಮನ್ನಣೆ ಸಿಗಬೇಕಿದೆ. ಕನ್ನಡ ಏಕೀಕರಣ ಸಾಧಿಸಿ ಕರ್ನಾಟಕ ಎಂದು ನಾಮಕರಣಗೊಂಡ ಬಳಿಕ ಭಾಷೆಗೆ ತನ್ನದೇ ವರ್ಚಸ್ಸು ಬಂದಿತ್ತು. ಈ ನಿಟ್ಟಿನಲ್ಲಿ 69 ನೇ ರಾಜ್ಯೋತ್ಸವ ನಿತ್ಯ ಉತ್ಸವ ಆಗಬೇಕು ಎಂದು ಕರೆ ನೀಡಿದರು.
ಉಪನ್ಯಾಸಕ ಡಾ.ಮೂರ್ತಿ ತಿಮ್ಮನಹಳ್ಳಿ ಮಾತನಾಡಿ ಎರಡು ಸಾವಿರ ವರ್ಷದ ಇತಿಹಾಸವಿರುವ ನಮ್ಮ ಭಾಷೆಯು ಸಾಹಿತ್ಯ ಜಗತ್ತಿನಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದೆ. ವಿಭಿನ್ನ ಜನರನ್ನು ಪಡೆದ ಕನ್ನಡಾಂಬೆ ಎಲ್ಲಾ ಭಾಷಿಕರನ್ನು ಸಾಕುತ್ತಿದೆ. ವ್ಯಾವಹಾರಿಕ ಭಾಷೆ ಕನ್ನಡ ಆದಂತೆ ಉದ್ಯೋಗದಲ್ಲಿ ಮಾತೃ ಭಾಷೆ ಮೆರೆದು ಅನ್ನದ ಭಾಷೆಯಾಗಬೇಕು ಎಂದ ಅವರು ಕನ್ನಡದ ಸಂಪೂರ್ಣ ಇತಿಹಾಸ ತಿಳಿಸಿದರು.
ಇದೇ ಸಂದರ್ಭದಲ್ಲಿ ಒಂಬತ್ತು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಾಯಿತು.
ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ಮಮತಾ, ತಾಪಂ ಇಓ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಸೇರಿದಂತೆ ಎಲ್ಲಾ ಪಪಂ ಸದಸ್ಯರು, ಎಲ್ಲಾ ಇಲಾಖಾಧಿಕಾರಿಗಳು ಭಾಗವಹಿಸಿದ್ದರು