ಜನಪರ ಕೆಲಸ ಮಾಡಲು ಬದ್ಧರಾಗಿ ನಮ್ಮ ಜಿಲ್ಲೆಯ ರೈತರಿಗೆ ನೀರು ಉಳಿಸಿಕೊಳ್ಳಲು ಸೆಡ್ಡು ಹೊಡೆದು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಿದ್ದೇವೆ. ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಮತ್ತೊಮ್ಮೆ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಖಡಕ್ ಎಚ್ಚರಿಕೆ ನೀಡಿದರು.
ಗುಬ್ಬಿ ತಾಲ್ಲೂಕಿನ ಚಿಕ್ಕ ಕಲ್ಲೂರು ಗ್ರಾಮದಲ್ಲಿ ನಿರ್ಮಾಣವಾದ 1.50 ಕೋಟಿ ರೂಗಳ ಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಹೇಮಾವತಿ ನೀರು ಹರಿದು ಕಲ್ಲೂರು ಕೆರೆ ತುಂಬಿದ ಹಿನ್ನಲೆ ಗಂಗಾಪೂಜೆ ಸಲ್ಲಿಸಿದ್ದೇವೆ. ಈ ಜೊತೆಯಲ್ಲಿ ಸಿ.ಎಸ್.ಪುರ, ಮಾವಿನಹಳ್ಳಿ ಹಾಗೂ ಚಂಗಾವಿ ಕೆರೆ ಕೂಡಾ ಶೀಘ್ರದಲ್ಲಿ ತುಂಬಲಿದೆ ಎಂದು ತಿಳಿಸಿದರು.
ಕೆರೆಕಟ್ಟೆ ತುಂಬಿದಂತೆ ರೈತರಿಗೆ ಅವಶ್ಯ ರಸ್ತೆ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆ ಮೂಲಕ ಅನುದಾನ ಮಂಜೂರಾತಿಗೆ ಸಿದ್ಧವಿದೆ. ಈ ಹಣದಲ್ಲಿ 50 ಲಕ್ಷ ಸೇತುವೆಯ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದ ಅವರು ಸಿ.ಎಸ್.ಪುರದಲ್ಲಿ ನೆನೆಗುದಿಗೆ ಬೀಳುವ ಹಂತಕ್ಕೆ ತಲುಪಿದ್ದ ದೇವೇಗೌಡರ ಸಮುದಾಯ ಭವನ ನಿರ್ಮಾಣ ಪೂರ್ಣಗೊಳಿಸಿ ಜನರ ಬಳಕೆಗೆ ಸಿದ್ದ ಮಾಡಲಾಗುವುದು. ಈ ಹಿನ್ನಲೆ ಪೂಜಾ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ನಾಗಮಂಗಲ ಗಲಭೆಯನ್ನು ಕೋಮು ಪ್ರಚೋದನಕಾರಿ ಮಾಡುವುದು ಬೇಡ. ಎಲ್ಲರೂ ಸೌಹಾರ್ದವಾಗಿ ಬದುಕು ನಡೆಸಬೇಕು. ಕೆಲ ಕಿಡಿಗೇಡಿಗಳ ಕೃತ್ಯಕ್ಕೆ ಊರಿನ ಶಾಂತಿ ಕಡದುವುದು ಬೇಡ ಎಂದ ಅವರು ಕುಮಾರಣ್ಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎರಡೂ ಕೋಮಿನ ಜನರನ್ನು ಬಂಧಿಸಲಾಗಿದೆ ಎಂದ ಅವರು ಕೆಟ್ಟ ಈ ಸರ್ಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಜನರ ಬೇಡಿಕೆ ಈಡೇರಿಸಲು ಸಾಹಸ ಮಾಡಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಜುಲೇಖಾಭಿ ಯೂಸಫ್, ಉಪಾಧ್ಯಕ್ಷೆ ಸುಮಿತ್ರಾ ಶಿವಯ್ಯ, ಸದಸ್ಯರಾದ ಶಿವಾನಂದಯ್ಯ, ನಾಗರಾಜು, ಹಜ್ರತ್ ಅಲಿ, ಮಾಯಣ್ಣಗೌಡ, ಜಮ್ ಶಿದ್ ಬೀ, ಲಕ್ಷ್ಮೀರಾಜು, ಜಯಮಾಲಾ, ಮಂಜುಳಾ, ಮುಖಂಡರಾದ ನಂಜೇಗೌಡ, ಬೋರಪ್ಪನಹಳ್ಳಿ ಕುಮಾರ್, ಜಗದೀಶ್, ಜನ್ನೇನಹಳ್ಳಿ ಮೂರ್ತಣ್ಣ, ಶಾಸಕರ ಪುತ್ರ ವೆಂಕಟೇಶ್, ಸ್ಥಳೀಯ ಮುಖಂಡರಾದ ಪ್ರಕಾಶ್, ಭಾರತಿ ಸುರೇಶ್, ಪಟೇಲ್ ಚಂದ್ರು, ವೀರಣ್ಣ, ನಾಗೇಶ್, ಪಿಡಿಓ ಪ್ರಶಾಂತ್ ಕುಮಾರ್ ಇತರರು ಇದ್ದರು.
