ಮಹಿಳೆಯರು ಸಮಾಜದ ಬೆನ್ನೆಲುಬು. ಹಾಗಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜತೆಗೆ ರಚನಾತ್ಮಕ ಚಟುವಟಿಕೆಯಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ಪಟ್ಟಣದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಗುಬ್ಬಿ ತಾಲೂಕಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ಅನಿಕೇತನ ವಿದ್ಯಾ ಮಂದಿರ, ಅನಿಕೇತನ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಮಹಿಳೆಯರು ಸಹ ಮೊದಲು ಕುಟುಂಬದ ಏಳಿಗೆಗೆ ಆದ್ಯತೆ ನೀಡಬೇಕು. ಯಾವುದೇ ಕೆಲಸ ಕಾರ್ಯಗಳು ಮಾಡುವಲ್ಲಿ ಆತ್ಮಸ್ಥೈರ್ಯದಿಂದ ಮುನ್ನುಗ್ಗಬೇಕು.ಹೆಣ್ಣು ಮಕ್ಕಳು ಉತ್ತಮ ಕಾರ್ಯಗಳನ್ನು ಮಾಡುವಲ್ಲಿ ದೃಢ ವಿಶ್ವಾಸದಿಂದ ಸ್ವಂತ ಕಾಯಕ ಮಾಡಿದಾಗ ತಾವು ಮೇಲೆ ಬರಲು ಮತ್ತು ಉನ್ನತ ಸ್ಥಾನಮಾನ ಗಳಿಸಲು ಸಾಧ್ಯವಾಗುತ್ತದೆ ಎಂದರು.

ಮನುಷ್ಯ ಇರುವವರೆಗೂ ಮುಂದೆ ಸ್ಮರಿಸುವ ಕೆಲಸವನ್ನು ಮಾಡಬೇಕು. ಹೊರಗಿನ ಪ್ರಪಂಚಕ್ಕೆ ಏನು ಅವಶ್ಯಕತೆ ಇದೆ ಎಂದು ತಿಳಿದು ಸಿದ್ದ ವಸ್ತುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡಿ ತಮ್ಮ ಆರ್ಥಿಕ ಮಟ್ಟವನ್ನು ಅಭಿವೃದ್ಧಿಪಡಿಸಿ ಕೊಳ್ಳಬೇಕು. ಆರೋಗ್ಯದ ವಿಚಾರದಲ್ಲಿ ಮನೆಯ ಅಕ್ಕಪಕ್ಕ ಇರುವ ಸ್ಥಳದಲ್ಲಿ ಕೈತೋಟಗಳನ್ನು ನಿರ್ಮಿಸಿ ಕೊಂಡು ತಾಜ ತರಕಾರಿಗಳನ್ನು ಬೆಳೆದುಕೊಂಡು ಸೇವಿಸಬೇಕು. ಪ್ರತಿಯೊಬ್ಬರೂ ಹಸುಗಳನ್ನು ಸಾಕಿ ಡೈರಿಗೆ ಹಾಲನ್ನು ಹಾಕುವ ಮೂಲಕ ಆದಾಯ ಮಟ್ಟವನ್ನು ಹೆಚ್ಚಿಸಿಕೊಳ್ಳಿ ಎಂದರು.
ತಹಶೀಲ್ದಾರ್ ಬಿ ಆರತಿ ಮಾತನಾಡಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದು, ಕುಟುಂಬವು ಪ್ರೋತ್ಸಾಹಿಸಿದರೆ ವಿಶ್ವದಲ್ಲಿ ಅತ್ಯುನ್ನತವಾದ ಹುದ್ದೆಗಳನ್ನು ಅಲಂಕರಿಸುತ್ತಾರೆ ಎಂದರು.

ಸರ್ಕಾರಿ ನೌಕರ ಸಂಘದ ನಾಮ ನಿರ್ದೇಶಿತ ನಿರ್ದೇಶಕರಾದ ಮಂಜಮ್ಮ .ಆರ್. ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಹೆಚ್ಚು ಮಹಿಳಾ ನಾಯಕತ್ವವು ಅವಶ್ಯಕವಾಗಿದೆ. ಸಂಘರ್ಷವಿರುವ ಕಡೆಗಳಲ್ಲಿ ಶಾಂತಿಯನ್ನು ತರಲು, ವಿಭಜನೆಯಿರುವ ಕಡೆಗಳಲ್ಲಿ ಪ್ರೇಮವನ್ನು ತರಲು, ಗೊಂದಲ ಇರುವ ಕಡೆಯಲ್ಲಿ ಜ್ಞಾನವನ್ನು ತರಲು ಮಹಿಳಾ ನಾಯಕತ್ವ ಬೇಕು. ಹೆಚ್ಚು ಮಹಿಳೆಯರು ಈ ಜಗತ್ತಿನ ನಾಯಕತ್ವವನ್ನು ವಹಿಸಿದರೆ ದೀರ್ಘಕಾಲದ ಹಿಂಸೆಯೆಲ್ಲವೂ ನಿಂತು ಹೋಗುತ್ತವೆ. ಒಂದು ಸಮಾಜವು ಬಲಿಷ್ಠವಾಗಿದೆಯೇ ಇಲ್ಲವೇ, ಸಾಮರಸ್ಯದಿಂದಿದೆಯೇ ಇಲ್ಲವೇ ಎನ್ನುವುದು, ಆ ಸಮಾಜದಲ್ಲಿ ಮಹಿಳೆಯು ವಹಿಸುವ ಪಾತ್ರದ ಮೇಲೆ ಅವಲಂಬಿಸಿರುತ್ತದೆ. ಭ್ರಷ್ಟ-ಮುಕ್ತ ಸಮಾಜವನ್ನು ನಾವು ಬಯಸಿದ್ದಲ್ಲಿ, ಮಹಿಳೆಯರಿಗೆ ಗೌರವವನ್ನು, ಪ್ರಾಮುಖ್ಯತೆಯನ್ನು ನೀಡುವಂತಹ ವಾತಾವರಣವನ್ನು ಸೃಷ್ಟಿಸಿದಾಗ ಅದು ಸಾಧ್ಯವಾಗುತ್ತದೆ ಎಂದರು.

ಅಧ್ಯಾತ್ಮಿಕ ಚಿಂತಕಿ ಅನಿತಾ ಮಾತನಾಡಿ, ಹೆತ್ತು ಹೊತ್ತು ಸಾಕಿ ಸಲಹುವವಳು ಮಹಿಳೆ. ಅಕ್ಕ, ತಂಗಿ, ಪುತ್ರಿ, ಪತ್ನಿಯಾಗಿ ಜೀವನ ತುಂಬುವವಳು ಅವಳೇ, ಇಂತಹ ಮಹಿಳೆಗೆ ಜಗತ್ತಿನಲ್ಲಿ, ಅಪೂರ್ವ ಸ್ಥಾನವಿದೆ. ಅವರ ಕೊಡುಗೆಯನ್ನು ಸ್ಮರಿಸುವಂತೆ, ಗೌರವಿಸುವಂತೆ, ಶ್ಲಾಘಿಸುವಂತೆ ನೆನೆಸಿಕೊಡುವಂತ ದಿನ ವಿಶ್ವ ಮಹಿಳಾ ದಿನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಂಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ಮಮತಾ, ಡಾ.ರಶ್ಮಿ, ಡಾ.ಮಹಾಲಕ್ಷ್ಮಿ, ತುಮಲ್ ಸಿಬ್ಬಂದಿ ಶಿಲ್ಪ, ನವ್ಯಶ್ರೀ, ಪಪಂ ಸದಸ್ಯರು ಶ್ವೇತ ಜಗದೀಶ್, ಉಮಾ, ಡಾ.ಸವಿತ, ಮುಖ್ಯಾಅಧಿಕಾರಿ ಮಂಜುಳದೇವಿ, ಸಾವಿತ್ರಬಾಯಿಪುಲೆ ಸಂಘದ ಅನುಸೂಯದೇವಿ, ಅಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಮಂಜುಳ, ಭಾಗ್ಯಲಕ್ಷ್ಮೀ, ಅಧ್ಯಾತ್ಮಿಕ ಚಿಂತಕರು, ಅನಿತ, ಚಂದ್ರಕಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಮೇಘನ, ವೀಣಾ, ಪವಿತ್ರ, ಮಂಜಮ್ಮ, ಮೇಲ್ವಿಚಾರಕಿ ಸ್ವರ್ಣ, ನೌಕರ ಸಂಘದ ನಿರ್ದೇಶಕಿ ಪದ್ಮಾವತಿ, ಸ್ತ್ರೀಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಸಾವಿತ್ರಿಬಾಯಿ ಪುಲೆ ಶಿಕ್ಷಕರು ಸಂಘದ ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು, ಕಾರ್ಯದರ್ಶಿಗಳು, ಅಧ್ಯಕ್ಷರು,ವಿದ್ಯಾ ಸಂಸ್ಥೆಯ ಶಿಕ್ಷಕರು ಹಾಗೂ ಮಹಿಳಾ ಕಾರ್ಯಕರ್ತರು ಮತ್ತಿತರರು ಇದ್ದರು.