ಸಾಗುವಳಿ ಭೂಮಿಗಾಗಿ ಅರ್ಜಿ ಸಲ್ಲಿಸಿ, ಭೂಮಿ ಪಡೆದವರು ತಮ್ಮ ಜಮೀನನ್ನು ಯಾವುದೇ ಕಾರಣಕ್ಕೆ ಬೇರೆಯವರಿಗೆ ಮಾರಾಟ ಮಾಡಬಾರದು. ತಮ್ಮ ಜೀವನ ನಿರ್ವಹಣೆಗಾಗಿ ಭೂಮಿಯಲ್ಲಿ ಸಾಗುವಳಿ ಮಾಡಬೇಕು ಎಂದು ಶಾಸಕ ಎಚ್.ಎಂ ಗಣೇಶ್ ಪ್ರಸಾದ್ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಸಾಗುವಳಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಶೇ.80ರಷ್ಟು ಸಾಗುಳಿ ಪತ್ರವನ್ನು ತಲುಪಿಸಲು ಶ್ರಮವಹಿಸಲಾಗಿದೆ. ಕಂದಾಯ ಇಲಾಖೆ ಸಚಿವರ ಆದೇಶದಂತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂದಿನ ದಿನಗಳಲ್ಲಿ ಕೆಲಸ ನಿರ್ವಹಿಸಲು ಜಿಲ್ಲೆಯಲ್ಲಿ ಮತ್ತು ನಮ್ಮ ತಾಲೂಕಿನಲ್ಲಿ ಪ್ರಥಮ ಬಾರಿಗೆ ಇ-ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಟಿ ರಮೇಶ್ ಬಾಬು, “ಅರ್ಜಿ ಸಲ್ಲಿಸುವ ಕೆಲವು ಮಂದಿಗೆ ಸಾಗುವಳಿ ಪತ್ರ ನೀಡಲು ಕಾನೂನಾತ್ಮಕ ಸಮಸ್ಯೆಗಳಿದ್ದು, ಅದನ್ನು ಮುಂದಿನ ದಿನಗಳಲ್ಲಿ ಸರಿಮಾಡಿ ಸಾಗುವಳಿ ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು” ಎಂದರು.
ಕಾರ್ಯಕ್ರಮದಲ್ಲಿ ಕಾಡ ಮಾಜಿ ಅಧ್ಯಕ್ಷ ಹಂಗಳ ನಂಜಪ್ಪ, ಕಬ್ಬಳ್ಳಿ ಮಹೇಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬೊಮ್ಮಯ, ಪುರಸಭೆ ಸದಸ್ಯ ಅಣ್ಣಯ್ಯ ಸ್ವಾಮಿ, ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಸದಸ್ಯ ಚೆನ್ನಪ್ಪ, ಪ್ರೊಬೇಷನರಿ ತಹಸೀಲ್ದಾರ್ ರಂಜಿತ್ ಇನ್ನಿತರರು ಉಪಸ್ಥಿತರಿದ್ದರು.