ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ʼಒನ್ ಟ್ರಸ್ʼ ಸಂಸ್ಥೆ ಡಯಾಲಿಸಿಸ್ ಉಪಕರಣವನ್ನು ಕೊಡುಗೆಯಾಗಿ ನೀಡಿದೆ. ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಡಯಾಲಿಸಿಸ್ ಉಪಕರಣವನ್ನು ಉದ್ಘಾಟನೆ ಮಾಡಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದು ಶಾಸಕ, “ಆಸ್ಪತ್ರೆಯಲ್ಲಿ ಈಗಾಗಾಲೇ ಎರಡು ಡಯಾಲಿಸಿಸ್ ಉಪಕರಣಗಳಿವೆ. ಈಗ ಒನ್ ಟ್ರಸ್ಟ್ ಸಂಸ್ಥೆ ಒಂದು ಡಯಾಲಿಸಿಸ್ ಉಪಕರಣವನ್ನು ನೀಡಿದ್ದು, ಇದು ಸೇರಿ ಒಟ್ಟಾರೆ ಮೂರು ಉಪಕರಣಗಳು ಕಾರ್ಯ ನಿರ್ವಹಿಸಲಿವೆ” ಎಂದು ಹೇಳಿದ್ದಾರೆ.
ತಾಲ್ಲೂಕಿನಲ್ಲಿ ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲರಿಗೂ ನಿಗದಿತ ಸಮಯದಲ್ಲಿ ಡಯಾಲಿಸಿಸ್ ಮಾಡಲು ತೊಂದರೆ ಉಂಟಾಗುತಿತ್ತು. ಇದನ್ನು ಅರಣ್ಯ ಸಚಿವರ ಗಮನಕ್ಕೆ ತಂದಾಗ ಸಮಸ್ಯಗೆ ಸ್ಪಂದಿಸಿದ ಸಚಿವರು ತಮ್ಮ ಎನ್ ಜಿಒ ಮೂಲಕ ಡಯಾಲಿಸಿಸ್ ಉಪಕರಣವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಮೂರು ಡಯಾಲಿಸಿಸ್ ಉಪಕರಣಗಳು ಇರುವುದರಿಂದ ರೋಗಿಗಳು ಕಾಯದೇ, ಸರಿಯಾದ ಸಮಯಕ್ಕೆ ಡಯಾಲಿಸಿಸ್ ಮಾಡಿಸಿಕೊಳ್ಳಲು ಅನುಕೂಲವಾಗಲಿದೆ. ಸುಮಾರು 10-12 ಲಕ್ಷ ಮೌಲ್ಯದ ಮಷಿನ್ ಇದಾಗಿದ್ದು, ಇಬ್ಬರೂ ಸ್ಟಾಫ್ ನರ್ಸ್ ಮತ್ತು ಒಬ್ಬರು ಡಿ ಗ್ರೂಪ್ ನೌಕರ ಸೇರಿದಂತೆ ಮೂರು ಸಿಬ್ಬಂದಿಗಳು ಕರ್ತವ್ಯ ನಿರ್ವಹಸಲಿದ್ದಾರೆ.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಈ ಕೇಂದ್ರ ಹೆಚ್ಚು ಅನುಕೂಲವಾಗಲಿದೆ. ರಾಜ್ಯ ಸರ್ಕಾರ ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಬಡವರಿಗೆ ಡಯಾಲಿಸಿಸ್ ಸೌಲಭ್ಯ ದೊರಕಿಸಿಕೊಡುವ ಸಲುವಾಗಿ ಈ ಸೇವೆಯನ್ನು ಆರಂಭಿಸಿದೆ. ಕೇಂದ್ರಕ್ಕೆ ಅಗತ್ಯವಿರುವ ಸೌಲಭ್ಯ ಹಾಗೂ ಸಿಬ್ಬಂದಿಯನ್ನು ಒದಗಿಸಲಾಗಿದ್ದು, ಅಗತ್ಯ ವಿರುವವರು ಇದರ ಸದುಪಯೋಗ ಮಾಡಿಕೊಂಡು ಆರೋಗ್ಯ ಸುಧಾರಿಸಿಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಕಾಡ ಅಧ್ಯಕ್ಷ ಹಂಗಳ ನಂಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೊಮ್ಮಯ್ಯ, ಚೆನ್ನಪ್ಪ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಅಲೀಂ ಪಾಷಾ, ಹಿರಿಯ ಮಕ್ಕಳ ತಜ್ಞ ಮಹೇಶ್, ಕಿವಿ, ಮೂಗು ಮತ್ತು ಗಂಟಲು ತಜ್ಞ ಹರ್ಷದ್ ಅಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.