- ಕಾರು ಅಪಘಾತದಿಂದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು
- ಚುನಾವಣೆ ಪ್ರಚಾರ ಮುಗಿಸಿ ಹಿಂತಿರುಗುವ ವೇಳೆ ಅಪಘಾತವಾಗಿತ್ತು
ಕಾರು ಅಪಘಾತದಿಂದ ಗಾಯಗೊಂಡಿದ್ದ ಯಾದಗಿರಿ ಜಿಲ್ಲೆ ಗುರಮಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ ಚಿಂಚನಸೂರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
ಬಾಬುರಾವ ಚಿಂಚನಸೂರ ಅವರಿಗೆ ಚಿಕಿತ್ಸೆ ನೀಡಿದ ಕಲಬುರಗಿ ಯುನೈಟೆಡ್ ಆಸ್ಪತ್ರೆಯ ವೈದ್ಯ ಡಾ. ರಾಜು ಕುಲಕರ್ಣಿ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. “ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಬಾಬುರಾವ ಚಿಂಚನಸೂರ ಅವರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ನೂರಕ್ಕೆ ತೊಂಬತ್ತು ಪ್ರತಿಶತ ಗುಣಮುಖರಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ” ಎಂದು ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಾಬುರಾವ ಚಿಂನನಸೂರ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳಲು ಯಾವುದೇ ತೊಂದರೆ ಇಲ್ಲ ಪೂರ್ತಿ ಗುಣಮುಖರಾಗುತ್ತಾರೆ ಎಂದು ಡಾ. ರಾಜು ಕುಲಕರ್ಣಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಾಸಕರನ್ನು ಕಳ್ಳತನ ಮಾಡುವ ಸಂಸ್ಕೃತಿ ಬಿಜೆಪಿಯಲ್ಲಿ ಬೇರೂರಿದೆ; ಸುಭದ್ರ ಸರ್ಕಾರಕ್ಕೆ ಅವಕಾಶ ಕೊಡಿ: ಖರ್ಗೆ ಮನವಿ
ಏಪ್ರಿಲ್ 14ರಂದು ಯಾದಗಿರಿ ನಗರದ ಆಕಾಶವಾಣಿ ಬಳಿ ಬಾಬುರಾವ ಚಿಂಚನಸೂರ ಅವರ ಕಾರು ಅಪಘಾತವಾಗಿತ್ತು. ಈ ವೇಳೆ ಅವರಿಗೆ ಕಾಲು, ಮುಖ, ತಲೆಗೆ ಗಾಯಗಳಾಗಿದ್ದವು. ಬಳಿಕ ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚುನಾವಣಾ ಪ್ರಚಾರ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿತ್ತು.