- ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದಲ್ಲಿ ಜೋಳಿಗೆ ಹಿಡಿದು ದುಶ್ಚಟ ಭಿಕ್ಷೆ ಬೇಡಿದ ಶ್ರೀಗಳು
- ಶ್ರಾವಣ ಮಾಸದ ನಿಮಿತ್ಯ ʼದುರ್ಗುಣದ ಭಿಕ್ಷೆ ಸನ್ಮಾರ್ಗದ ದೀಕ್ಷೆʼ ಎಂಬ ವಿನೂತನ ಅಭಿಯಾನ
ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳನ್ನು ಭಿಕ್ಷೆ ಬೇಡಿದರು.
ಶ್ರಾವಣ ಮಾಸದ ಅಂಗವಾಗಿ ಕಳೆದ ನಾಲ್ಕೈದು ದಿನಗಳಿಂದ ಗ್ರಾಮದಲ್ಲಿ ಬಸವ ದರ್ಶನ ಪ್ರವಚನ ನಡೆಸಿ ಕೊಡುತ್ತಿರುವ ಶ್ರೀಗಳು ಶುಕ್ರವಾರ ಜೋಳಿಗೆ ಹಿಡಿದು ʼದುರ್ಗುಣದ ಭಿಕ್ಷೆ ಸನ್ಮಾರ್ಗದ ದೀಕ್ಷೆʼ ಅಭಿಯಾನ ಮುಂದುವರೆಸಿದರು. ಸೂರ್ಯ ಉದಯಕ್ಕೂ ಮುನ್ನವೇ ಗ್ರಾಮಕ್ಕೆ ಭೇಟಿ ನೀಡಿದ ಪೂಜ್ಯರು 200ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಯುವಕರು, ಮಹಿಳೆಯರು, ಹಿರಿಯರು, ವೃದ್ಧರಿಂದ ತಂಬಾಕು, ಗುಟ್ಕಾ, ಬೀಡಿ, ಸಿಗರೆಟ್ ಸೇರಿ ವಿವಿಧ ಚಟಗಳನ್ನು ಜೋಳಿಗೆಗೆ ಹಾಕಿಸಿಕೊಂಡು ಜೀವನುದ್ದಕ್ಕೂ ಚಟಗಳಿಗೆ ದಾಸರಗಾದಂತೆ ಇರುತ್ತೇವೆ ಎಂದು ಪ್ರತಿಜ್ಞೆ ಬೋಧಿಸಿದರು.
“ವಿಶ್ವಗುರು ಬಸವಣ್ಣನವರು ದೇಹವನ್ನು ದೇಗುಲ ಎಂದು ಕರೆದಿದ್ದಾರೆ. ಅಂತಹ ದೇಗುಲವನ್ನು ನಾವು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬಾರದು. ದೇವರು ಎಲ್ಲರಿಗೂ ಸುಂದರ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ್ದಾನೆ. ಆದರೂ ಕೂಡ ಬಹಳಷ್ಟು ಜನರು ವ್ಯಸನಗಳಿಗೆ ಬಲಿಯಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ” ಎಂದು ಪಟ್ಟದ್ದೇವರು ಕಳವಳ ವ್ಯಕ್ತಪಡಿಸಿದರು.
“ದೇಶದ ಭವಿಷ್ಯ ಆಗಿರುವ ಯುವಜನಾಂಗ ಹೆಚ್ಚಾಗಿ ಮದ್ಯ, ಗುಟ್ಕಾ, ಸಿಗರೆಟ್ ಸೇವಿಸಿ ದೇವರು ಕೊಟ್ಟ ಅದ್ಭುತ ಶರೀರವನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕ ತರಿಸಿದೆ. ದುಶ್ಚಟಗಳಿಂದ ಕುಟುಂಬದ ನೆಮ್ಮದಿ ನಾಶವಾಗುತ್ತದೆ. ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಇದನ್ನು ಎಲ್ಲರೂ ಅರಿತು ಇದನ್ನು ದುಶ್ಚಟ ತ್ಯಜಿಸಿ ಸುಂದರ ಬದುಕು ತಮ್ಮದಾಗಿಸಿಕೊಳ್ಳಬೇಕು” ಎಂದು ಪೂಜ್ಯರು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕ.ಕ. ವಿಮೋಚನೆಗೆ ಹೋರಾಡಿದ ಸೇನಾನಿಗಳ ಸ್ಮಾರಕ ನಿರ್ಮಿಸಿ: ಗುರುನಾಥ ವಡ್ಡೆ
ಈ ಸಂದರ್ಭದಲ್ಲಿ ಪ್ರಮುಖರಾದ ಗುರಯ್ಯ ಸ್ವಾಮಿ, ಸಿದ್ರಾಮಪ್ಪ ಧೂಳೆ, ಬಸವರಾಜ ಪರಸಣ್ಣೆ, ಬಸವರಾಜ ಖೂಬಾ, ಚಂದ್ರಕಾಂತ ಕುಂಬಾರ್, ಸಂಗಮೇಶ ಪರಸಣ್ಣೆ, ಧನರಾಜ ಮಾಕಾ, ಧನರಾಜ ಪರಸಣ್ಣೆ, ಭೀಮಣ್ಣ ಮಾಶೆಟ್ಟೆ, ಮಲ್ಲಿಕಾರ್ಜುನ ಧೂಳೆ, ನಾಗಶೆಟ್ಟಿ ಚೋಳಾ, ಕಲ್ಯಾಣರಾವ ಭೌರಾ, ಭದ್ರೇಶ ಹಿರೇಮಠ, ವಿಲಾಸ ಧೂಳೆ, ಮಲ್ಲಮ್ಮ ಪರಸಣ್ಣೆ, ಗಂಗಮ್ಮ ಪರಸಣ್ಣೆ, ಪುತಳಾಬಾಯಿ ಕುಂಬಾರಗೆರೆ, ರಂಗಮ್ಮ ಮಾಕಾ, ಲಕ್ಷ್ಮಿ ಕುಂಬಾರಗೆರೆ, ಭಾಗಶ್ರೀ ಪರಸಣ್ಣೆ, ಅನುಸೂಯಾ ಮಾಶೆಟ್ಟೆ, ಸಂಗಮ್ಮ ಧೂಳೆ, ಲಕ್ಷ್ಮಿ ಪರಸಣ್ಣೆ ಸೇರಿದಂತೆ ಹಲವರು ಇದ್ದರು.