ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್.ಸಿ.ಗುರುಪ್ರಸಾದ್, ರಾಜ್ಯ ಪರಿಷತ್ ಸದಸ್ಯರಾಗಿ ಆರ್.ಸಿದ್ದೇಗೌಡ ಹಾಗೂ ಖಜಾಂಚಿಯಾಗಿ ರಮೇಶ್ ಚುನಾಯಿತರಾದರು.
ಸರ್ಕಾರಿ ನೌಕರರ ಸಂಘದ ಒಟ್ಟು 33 ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆದು ಪದಾಧಿಕಾರಿಗಳ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಮೂರು ಸ್ಥಾನಕ್ಕೆ ಏಳು ಮಂದಿ ಕಣದಲ್ಲಿದ್ದರು. ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಕಂದಾಯ ಇಲಾಖೆಯ ಎಚ್.ಸಿ.ಗುರುಪ್ರಸಾದ್ ಹಾಗೂ ಶಿಕ್ಷಣ ಇಲಾಖೆಯ ಆರ್.ಬೀರೇಂದ್ರ ನಾಮಪತ್ರ ಸಲ್ಲಿಸಿದರು. ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಆಹಾರ ಇಲಾಖೆ ಸಿದ್ದೇಗೌಡ, ಆರೋಗ್ಯ ಇಲಾಖೆಯ ಎನ್.ನಾಗರಾಜು ಹಾಗೂ ನ್ಯಾಯಾಂಗ ಇಲಾಖೆಯ ಪದ್ಮನಾಭ್ ಕಣದಲ್ಲಿದ್ದರು. ಖಜಾಂಚಿ ಸ್ಥಾನಕ್ಕೆ ಸಮಾಜ ಕಲ್ಯಾಣ ಇಲಾಖೆಯ ರಮೇಶ್ ಹಾಗೂ ಶಿಕ್ಷಣ ಇಲಾಖೆಯ ರಾಮಚಂದ್ರ ನೇರ ಪೈಪೋಟಿಯಾಗಿ ನಾಮಪತ್ರ ಸಲ್ಲಿಸಿದರು.
ನಿವೃತ್ತ ಡಿಡಿಪಿಐ ಎಚ್.ಕೆ.ನರಸಿಂಹಮೂರ್ತಿ ಚುನಾವಣಾಧಿಕಾರಿಗಳಾಗಿ ಎಲ್ಲಾ ಪ್ರಕ್ರಿಯೆ ನಡೆಸಿಕೊಟ್ಟರು. ಬೆಳಿಗ್ಗೆ 9 ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯಗೊಳಿಸಲಾಯಿತು. ನಂತರ ಮತ ಎಣಿಕೆ ಆರಂಭಿಸಲಾಯಿತು. ಒಟ್ಟು 33 ಮತಗಳ ಎಣಿಕೆಯಲ್ಲಿ 22 ಮತಗಳನ್ನು ಪಡೆದು ಎಚ್.ಸಿ.ಗುರುಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಬೀರೇಂದ್ರ 11 ಮತ ಪಡೆದು ಪರಾಭವಗೊಂಡರು. ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಇದ್ದ ಮೂವರು ಸ್ಪರ್ಧಿಗಳಲ್ಲಿ 16 ಮತ ಪಡೆದ ಸಿದ್ದೇಗೌಡ ಆಯ್ಕೆಯಾದರು. ಪ್ರತಿಸ್ಪರ್ಧಿಗಳಾಗಿದ್ದ ಪದ್ಮನಾಭ್ 11 ಹಾಗೂ ನಾಗರಾಜು 5 ಮತ ಒಡೆದು ಸೋಲು ಅನುಭವಿಸಿದರು. ಖಜಾಂಚಿ ಸ್ಥಾನದಲ್ಲಿ ರಮೇಶ್ 19 ಮತ ಪಡೆದು ಆಯ್ಕೆಯಾದರೆ, ರಾಮಚಂದ್ರ 14 ಮತ ಸೋಲುಂಡರು.
ನೂತನ ಅಧ್ಯಕ್ಷ ಎಚ್.ಸಿ.ಗುರುಪ್ರಸಾದ್ ಸುದ್ದಿಗಾರರ ಜೊತೆ ಮಾತನಾಡಿ ಸರ್ಕಾರಿ ನೌಕರರ ಸಂಘಟನೆ ಬಲಪಡಿಸಿ ನೌಕರರ ಹಿತ ಕಾಯುವ ಕೆಲಸ ಮಾಡುತ್ತೇನೆ. ನನ್ನ ಆಯ್ಕೆಗೆ ಸಹಕರಿಸಿದ ನಾಗಭೂಷಣ್ ಹಾಗೂ ಕರುಣಾಕರ ಶೆಟ್ಟಿ ಅವರಿಗೆ ಕೃತಜ್ಞನಾಗಿದ್ದು ಸಂಘದ ಮೂಲಕ ತಾಲ್ಲೂಕಿನ ಸರ್ಕಾರಿ ನೌಕರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಪ್ರಾಮಾಣಿಕವಾಗಿ ನಡೆಸುತ್ತೇವೆ. ಸರ್ಕಾರಿ ಕೆಲಸ ಮಾಡುವಲ್ಲಿ ಹತ್ತು ಹಲವು ಸಮಸ್ಯೆ ಎದುರಿಸುವ ನೌಕರರ ಪರ ಕೂಡಾ ನಿಲ್ಲುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಆರ್.ಜಿ.ನಾಗಭೂಷಣ್, ಕರುಣಾಕರ ಶೆಟ್ಟಿ, ಮಾಜಿ ಖಜಾಂಚಿ ನಾಗರಾಜು, ತಾಲ್ಲೂಕು ವೈದ್ಯಾಧಿಕಾರಿ ಡಾ. ಬಿಂದುಮಾಧವ ಇತರರು ಇದ್ದರು.