ನಾಲ್ಕು ದಶಕಗಳ ಹಿಂದಿನ ನೆನಪುಗಳ ಮೆರವಣಿಗೆ ಅಲ್ಲಿ ಸಾಂಗವಾಗಿ ಸಾಗಿತ್ತು. ಪ್ರತಿಯೊಬ್ಬರೂ ತಮ್ಮ ವಿದ್ಯಾರ್ಥಿ ಜೀವನದ ಸುಮಧುರ ಕ್ಷಣ, ನೋವು-ನಲಿವಿನ ಸರಕಗಳನ್ನು ಎಳೆಎಳೆಯಾಗಿ ಹಂಚಿಕೊಂಡರು. ಪ್ರೀತಿ-ಸ್ನೇಹ ಬಾಂಧವ್ಯದ ಜೊತೆಗೆ ಬಾಲ್ಯದ ಆಟ-ತುಂಟಾಟಗಳು ನೆನಪಿಸಿಕೊಂಡರು. ಗುರು-ಶಿಷ್ಯರ ಆತ್ಮೀಯತೆ ಭಾವ-ಮನಸ್ಸಿನ ಬೆಸುಗೆಯ ನಿನಾದ ಮಾರ್ದನಿಸುತ್ತಿತ್ತು. ಹಳೆ ವಿದ್ಯಾರ್ಥಿಗಳ ಅಪೂರ್ವ ಸಮಾಗಮಕ್ಕೆ ಶಾಲೆಯ ಗುರುಗಳು ಸಂತೋಷದ ಕಡಲಿನಲ್ಲಿ ಮಿಂದೆದ್ದರು.
ಇಂಥದೊಂದು ಅಪರೂಪದ ನೋಟ ಕಂಡು ಬಂದಿದ್ದು ಔರಾದ ತಾಲೂಕಿನ ಸಂತಪೂರ ಗ್ರಾಮದ ಸುಭಾಷ ಚಂದ್ರ ಬೋಸ್ ಪ್ರೌಢ ಶಾಲೆಯಲ್ಲಿ, ಅರಿವಿನ ಜ್ಯೋತಿ ಬೆಳಗಿಸಿ ಬದುಕಿನ ಉನ್ನತಿಗೆ ಕಾರಣರಾದ ತಮ್ಮ ನೆಚ್ಚಿನ ಗುರುವೃಂದಕ್ಕೆ ಹಳೆ ವಿದ್ಯಾರ್ಥಿಗಳು ಶನಿವಾರ ಆಯೋಜಿಸಿದ ಸ್ನೇಹ ಸಮ್ಮೇಳನ ಹಾಗೂ ಗುರು ವಂದನಾ ಸಮಾರಂಭ ಅರ್ಥಪೂರ್ಣವಾಗಿ ಸಂಯೋಜಿಸಿ ಗುರುಗಳಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಧನ್ಯತಾಭಾವ ಮೆರೆದರು.
ಕಳೆದ ನಾಲ್ಕು ದಶಕದಿಂದ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಅಪೂರ್ವ ಸಂಗಮ ಶಾಲೆಯ ಆವರಣದಲ್ಲಿ ಮುಖಾಮುಖಿಯಾಗಿ, ಬಾಲ್ಯದ ಸಿಹಿ-ಕಹಿ ಕ್ಷಣಗಳನ್ನು ಮೆಲಕು ಹಾಕಿದರು, ಸದ್ಯದ ಬದುಕಿನ ಕುರಿತು ಕುಶಲೋಪರಿ ಹಂಚಿಕೊಂಡು ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು.
ಶಾಲೆಯ ನಿವೃತ್ತ ಶಿಕ್ಷಕರಾದ ಮಲ್ಲಿಕಾರ್ಜುನ ಹಿಪ್ಪಳಗಾಂವೆ, ಶಿವರಾಜ ಜುಲಾಂಡೆ, ಜಗನ್ನಾಥ ಧುಮ್ಮನಸುರೆ, ಶಾಲಿವಾನ ಪನ್ನಾಳೆ, ಚಂದ್ರಮತಿ, ಮಾರುತಿ ಉತ್ತಮ ಹಾಗೂ ಮುಖ್ಯ ಗುರು ಮನೋಹರ್ ಬಿರಾದರ್, ಶಿಕ್ಷಕರಾದ ಗುರುನಾಥ ದೇಶಮುಖ, ನಂದಾದೀಪ ಬೋರಾಳೆ, ನಿವೃತ್ತ ಬೋಧಕೇತರ ಸಿಬ್ಬಂದಿಗಳಾದ ಗುರುಲಿಂಗಯ್ಯ ಸ್ವಾಮಿ, ಸಿದ್ದಯ್ಯ ಸ್ವಾಮಿ, ಬಸಯ್ಯ ಸ್ವಾಮಿ ಹಾಗೂ ಸಂಸ್ಥೆಯ ಅಧ್ಯಕ್ಷ ಶಿವಾಜಿರಾವ ಬೋರಾಳ ಅವರಿಗೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ತೆರೆದ ಸಾರೋಟಿನಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಭರ್ಜರಿ ಡ್ಯಾನ್ಸ್ ಮೆರಗು ನೀಡಿತು.

ನಿವೃತ್ತಿ ಹೊಂದಿದ ಗುರುಗಳು ತಮ್ಮ ಕೈಯಲ್ಲಿ ಕಲಿತು ದೊಡ್ಡವರಾಗಿ ಬೆಳೆದ ವಿದ್ಯಾರ್ಥಿಗಳ ಪರಿಯನ್ನು ನೋಡಿ ಅತೀವ ಖುಷಿಪಟ್ಟರು. ಬೇರೆ ಬೇರೆ ಬ್ಯಾಚ್‌ನ ವಿದ್ಯಾರ್ಥಿಗಳ ಸಾಹಸದ ಯಶೋಗಾಥೆಗೆ ಭೇಷ್ ಎಂದು ಬೆನ್ನು ತಟ್ಟಿದರು. ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಕೇಳಿದ ಶಿಕ್ಷಕರಿಗೆ ತಮ್ಮ ಜೀವನ ಸಾರ್ಥಕವಾಯಿತು ಎಂಬ ಭಾವ ಮೂಡಿ ಬಂದಿತ್ತು. ಗುರು-ಶಿಷ್ಯರ ಸಂಗಮದ ಅಮೂಲ್ಯ ಕ್ಷಣಗಳಿಗೆ ಕಣ್ಣಂಚಿನಲ್ಲಿ ಆನಂದಭಾಷ್ಪ ಜಿನುಗುತ್ತಿದ್ದು ಕಂಡು ಬಂತು.
“ಸರ್, ನಾವು ನಿಮ್ಮ ಹಳೆ ವಿದ್ಯಾರ್ಥಿ, ನಿಮ್ಮ ಕೈಯಲ್ಲಿ ಕಲಿತಿರುವೆ, ನೀವು ಶಾಲಾ ದಿನಗಳಲ್ಲಿ ಸರಿಯಾಗಿ ಅಭ್ಯಾಸ ಮಾಡದಿದ್ದರೆ ಚಾಟಿ ಏಟು ಹೊಡೆದ ನೆನಪು ಇನ್ನೂ ಮರೆತಿಲ್ಲ, ಶಾಲಾ ದಿನಗಳ ನಿಮ್ಮ ಬೊಧನೆ ವಿಧಾನ ಮತ್ತೊಮ್ಮೆ ಕಣ್ತುಂಬಿಕೊಳ್ಳಬೇಕು” ಎಂಬ ಶಿಷ್ಯಬಳಗದ ಕೋರಿಕೆಗೆ ಶಿಕ್ಷಕರು ʼಪೆಟ್ಟುʼ ಹೊಡೆದು ಸ್ಮತಿಪಟಲದಲ್ಲಿ ಉಳಿದಿರುವ ನೆನಪಿನ ಬುತ್ತಿ ಖುಷಿಯ ಅಲೆಯಲ್ಲಿ ಹಳೆಯ ಗುರು-ಶಿಷ್ಯರು ತೇಲಿದರು. ಇನ್ನು ನೆರೆದಿರುವ ಎಲ್ಲ ವಿದ್ಯಾರ್ಥಿಗಳು ಕ್ಯಾಮರಾಗೆ ಫೋಜ್ ಕೊಟ್ಟು ತಮ್ಮ ಸಹಪಾಠಿ, ಗುರುಗಳೊಂದಿಗೆ ಪೋಟೊ ಕ್ಲಿಕಿಸಿಕೊಂಡು ನಕ್ಕು ನಲಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡಿ, “ಗುರು-ಶಿಷ್ಯರ ಸಂಬಂಧ ಗಟ್ಟಿಯಾಗಿ ಉಳಿಯುವುದು ಹೇಗೆ ಎಂಬ ಪರಿಪಾಠ ಹಾಕಿದವರು ಸುಭಾಷ ಚಂದ್ರ ಬೋಸ್ ಶಾಲೆಯ ಹಳೆ ವಿದ್ಯಾರ್ಥಿಗಳು” ಎಂದು ಅಭಿನಂದಿಸಿದರು.
“ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಅಂತಹ ಮಹೋನ್ನತ ಕಾರ್ಯವನ್ನು ಈ ಶಾಲೆಯ ಎಲ್ಲ ಶಿಕ್ಷಕರು ಮಾಡಿದ್ದಾರೆ. ಅದಕ್ಕೆ ಇಂದು ಹಳೆ ವಿದ್ಯಾರ್ಥಿಗಳು ಆಯೋಜಿಸಿದ ಗುರುವಂದನಾ ಕಾರ್ಯಕ್ರಮ ಸಾಕ್ಷಿಯಾಗಿ ಜಿಲ್ಲೆಗೆ ಮಾದರಿಯಾಗಿದೆ” ಎಂದರು.
ಯಾದಗಿರಿ ವಾಣಿಜ್ಯ ತೆರೆಗೆ ಇಲಾಖೆಯ ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲಾ ಪ್ರೇರಣಾ ನುಡಿ ಮಾತನಾಡಿ, “ಶಾಲಾ ಪಠ್ಯದ ವಿಷಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮುಖ್ಯವಲ್ಲ, ಜೀವನ ಪರೀಕ್ಷೆಯಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೇ ಪಾಸಾಗಿ ಉನ್ನತ ಸ್ಥಾನ ಗಳಿಸುವುದು ಅತ್ಯಂತ ಮುಖ್ಯವಾಗಿದೆ. ಈ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸಿಕೊಟ್ಟ ಶಿಕ್ಷಕ ಬಳಗ ಇಡೀ ಸಮಾಜಕ್ಕೆ ಆದರ್ಶರಾಗಿದ್ದಾರೆ” ಎಂದರು.
ಸಂಸ್ಥೆಯ ಕಾರ್ಯದರ್ಶಿ ನಂದಾದೀಪ ಬೋರಾಳೆ ಪ್ರಾಸ್ತಾವಿಕವಾಗಿ ಮಾತನಾಡಿ, “1984 ರಿಂದ ಇಲ್ಲಿಯವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಶ್ರೇಯಸ್ಸು ಕರ್ನಾಟಕ ಪಬ್ಲಿಕ್ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ. ಸುಭಾಷ್ ಚಂದ್ರ ಬೋಸ್ ಪ್ರೌಢ ಶಾಲೆಯ ಅಸಂಖ್ಯಾತ ವಿದ್ಯಾರ್ಥಿಗಳು ಇಂದು ದೇಶ-ವಿದೇಶದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ” ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ನಾಗೇಶ ಸ್ವಾಮಿ ಮಸ್ಕಲ್ ಅವರ ಸಂಪಾದಕತ್ವದ ʼಗುರು ವಂದನಾʼ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಸಂಸ್ಥೆಗೆ ಭೂಮಿ ದಾನಗೈದ ಮಹನೀಯರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಮುಂದಿನ ವಾರ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ವರದಿ
ಹಳೆ ವಿದ್ಯಾರ್ಥಿಗಳ ಸಮನ್ವಯ ಸಮಿತಿ ಅಧ್ಯಕ್ಷ ಸಂತೋಷ ಪಾಟೀಲ್, ಶಿವಾನಂದ ಸ್ವಾಮಿ, ಧನರಾಜ ಬಿರಾದಾರ, ಡಾ.ನಾಗನಾಥ ಕೌಟಗೆ, ಜಾರ್ಜ್ ಬುಷ್, ಸಂಗಮೇಶ ನಿಟ್ಟೂರೆ, ಮಂಜು ಸ್ವಾಮಿ, ಅಶೋಕ ಶೆಂಬೆಳ್ಳಿ ನೂರಾರು ಹಳೆ ವಿದ್ಯಾರ್ಥಿಗಳು, ಗಣ್ಯರು, ಸಾರ್ವಜನಿಕರು ಭಾಗವಹಿಸಿದರು. ಹಳೆ ವಿದ್ಯಾರ್ಥಿ ರತಿಕಾಂತ ಜೋಜನಾ ಸ್ವಾಗತಿಸಿದರು. ನಾಗಯ್ಯ ಸ್ವಾಮಿ, ಗಫರ್ ಪಾಷಾಮಿಯ್ಯ ನಿರೂಪಿಸಿದರು.