“ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಆರ್ಥಿಕ ಸ್ಥಿತಿಗತಿ ಉತ್ತಮಗೊಳಿಸುವುದರೊಂದಿಗೆ ಅವರಿಗೆ ನೆಮ್ಮದಿಯುತ ಜೀವನ ನೀಡಿವೆ. ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದ್ದು, ದೇಶಕ್ಕೆ ಮಾದರಿಯಾಗಿವೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಕುರಿತಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ಕಿರುಹೊತ್ತಿಗೆ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಕುರಿತು ಜಿಲ್ಲೆಯಾದ್ಯಂತ ಮಾಹಿತಿ ಕಲೆಹಾಕಿ ಫಲಾನುಭವಿಗಳ ಅನಿಸಿಕೆಗಳೊಂದಿಗೆ ಕಿರುಹೊತ್ತಿಗೆ ಮೂಡಿಬಂದಿದೆ. ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನದ ಸಮಗ್ರ ಮಾಹಿತಿಯನ್ನು ಒಳಗೊಂಡಿದ್ದು, ಸಂಗ್ರಹಯೋಗ್ಯವಾಗಿದೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ದೊರಕುವಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಹಲವು ಸಣ್ಣ ಪುಟ್ಟ ನ್ಯೂನ್ಯತೆಗಳಿಂದ ವಂಚಿತರಾದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಾಗುತ್ತಿದೆ.ಜಿಲ್ಲೆಯ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅಂಕಿಅಂಶ ಗಮನಿಸಿದಾಗ ಹೆಚ್ಚಿನ ಫಲಾನುಭವಿಗಳು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ಕಟ್ಟಿ ಕೊಳ್ಳುತ್ತಿರುವುದು ಕಂಡುಬಂದಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಕೆಲವೆ ಕೆಲವು ಜನರಿಗೆ ಯೋಜನೆಗಳು ತಲುಪಿಲ್ಲ. ಈ ಬಗ್ಗೆ ವಿವರ ಪಡೆದು ಎಲ್ಲರಿಗೂ ಯೋಜನೆಗಳ ತಲುಪಿಸುವ ಕೆಲಸಕ್ಕೆ ಪ್ರಾಧಿಕಾರ ಮುಂದಾಗಿದೆ. ಪ್ರತಿಶತ ನೂರರಷ್ಟು ಅರ್ಹ ಫಲಾನುಭವಿಗಳಿಗೂ ಇವು ತಲುಪಬೇಕು. ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರ ಪಡೆದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಮನೆಮನೆಗೆ ಭೇಟಿ ನೀಡಿ ಪ್ರತಿಯೊಬ್ಬರಿಗೂ ಗ್ಯಾರಂಟಿಗಳನ್ನು ತಲುಪಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಂ. ಮಲ್ಲೇಶ್ ಬಾಬು, ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಬಿ.ಎನ್. ರವಿಕುಮಾರ್, ಕೆ.ಹೆಚ್. ಪುಟ್ಟಸ್ವಾಮಿಗೌಡ, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಜಿಲ್ಲಾ ವಾರ್ತಾಧಿಕಾರಿ ಎಂ. ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್. ಮಂಜುನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.