ಬೀದರ್‌ | ಔರಾದ ತಾಲೂಕಿನ ಅರ್ಧದಷ್ಟು ಸರ್ಕಾರಿ ಪ್ರೌಢ ಶಾಲೆಗಳಿಗೆ ಕನ್ನಡ ಭಾಷಾ ಶಿಕ್ಷಕರಿಲ್ಲ

Date:

Advertisements

ಸರ್ಕಾರಿ ಶಾಲೆಗಳ ಸುಧಾರಣೆಗೆ ಸರ್ಕಾರ ವರ್ಷಕ್ಕೊಂದು ವಿಭಿನ್ನ ಯೋಜನೆಗಳನ್ನು ಜಾರಿಗೊಳಿಸುವುದು ಮಾಮೂಲಿ. ಆದರೆ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಬೋಧಿಸಲು ವಿಷಯ ಶಿಕ್ಷಕರೇ ಇಲ್ಲ ಅಂದ್ಮೇಲೆ ಅದೆಷ್ಟೇ ಯೋಜನೆಗಳು ಜಾರಿಯಾದರೂ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿಲ್ಲ.

ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಯೊಂದಿಗೆ ತನ್ನ ವ್ಯಾಪ್ತಿ ಹಂಚಿಕೊಂಡಿರುವ ಕರ್ನಾಟಕದ ಬೀದರ್ ಜಿಲ್ಲೆ ರಾಜ್ಯದ ನಕಾಶೆಯಲ್ಲಿ ಉತ್ತರದ ತುತ್ತ ತುದಿಯಲ್ಲಿ ಕಾಣಸಿಗುತ್ತದೆ. ಆದರೆ, ಎಸ್‌ಎಲ್‌ಎಲ್‌ಸಿ, ಪಿಯುಸಿ ಫಲಿತಾಂಶ ಪ್ರಕಟವಾದ ದಿನ ಜಿಲ್ಲೆಯ ಹೆಸರು ಕೊನೆಯ ಸಾಲಿನಲ್ಲಿ ಇಣುಕಿ ನೋಡುವಂಥ ಸ್ಥಿತಿ, ಅದರಲ್ಲೂ ಜಿಲ್ಲೆಯ ʼಹಿಂದುಳಿದ ತಾಲೂಕುʼಗಳ ಪರಿಸ್ಥಿತಿಯಂತೂ ಹೇಳತೀರದು. ಇದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಯೂ ಹೌದು ಎನ್ನುವುದು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪ್ರಜ್ಞಾವಂತ ನಾಗರೀಕರು ಯೋಚಿಸಲೇಬೇಕಾಗಿದೆ.

ಈ ಸಲದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಬೀದರ್‌ ಜಿಲ್ಲೆ 33ನೇ ಸ್ಥಾನದಲ್ಲಿದೆ. ಅದರಲ್ಲಿ ಗಡಿ ತಾಲೂಕು ಔರಾದ್ ಕೊನೆಯ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಕಳೆದ ಬಾರಿಗಿಂತ ಒಂದು ಸ್ಥಾನ ಮೇಲೆ ಜಿಗಿದಿದೆ, ಹೊರತು ಶಿಕ್ಷಣದ ಗುಣಮಟ್ಟ ಸುಧಾರಿಸಿಲ್ಲ ಎಂಬುದಕ್ಕೆ ಫಲಿತಾಂಶ ಕನ್ನಡಿ ಹಿಡಿದಿದೆ.

Advertisements

ಕಾಲ ಕಾಲಕ್ಕೆ ಸರ್ಕಾರಗಳು ನೇರ ನೇಮಕಾತಿ ಮೂಲಕ ಶಿಕ್ಷಕರ ಹುದ್ದೆ ಭರ್ತಿ ಮಾಡಿಕೊಳ್ಳಬೇಕು. ಆದರೆ, ಸಕಾಲಕ್ಕೆ ಶಿಕ್ಷಕರ ನೇಮಕಾತಿ ಆಗದಿರುವ ಪರಿಣಾಮ ಮಕ್ಕಳ ಶೈಕ್ಷಣಿಕ ಭವಿಷ್ಯ ಅಧೋಗತಿಗೆ ತಳ್ಳುವುದು ದುರಂತವೇ ಸರಿ. ಇದಕ್ಕೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಮತ್ತು ನಿರ್ಲಕ್ಷ್ಯ ಧೋರಣೆ ಕಾರಣವೆಂದರೂ ತಪ್ಪಾಗಲಾರದು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಔರಾದ-ಕಮಲನಗರ ಅವಳಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಖಾಲಿಯಿರುವ ಹುದ್ದೆಗಳಿಗೆ ಅನುಕ್ರಮವಾಗಿ 107:65 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಶಿಕ್ಷಣ ಇಲಾಖೆ ಆದೇಶಿಸಿದೆ. ತಾಲೂಕಿನಲ್ಲಿ 200ಕ್ಕೂ ಅಧಿಕ ಶಿಕ್ಷಕರ ಕೊರತೆಯಿದೆ. ಆದರೆ, ಅರ್ಧದಷ್ಟು ಶಾಲೆಗಳು ಅತಿಥಿ ಶಿಕ್ಷಕರಿಂದ ಚಾಲ್ತಿಯಲ್ಲಿಡುವ ಅನಿವಾರ್ಯತೆ ಎದುರಾಗಿದೆ. ವಿಷಯವಾರು ಶಿಕ್ಷಕರು ಸೇರಿದಂತೆ, ಹೆಚ್ಚಿನ ಶಾಲೆಗಳು ಅತಿಥಿ ಶಿಕ್ಷಕರಿಂದಲೇ ಮುನ್ನಡೆಸಿದರೆ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡಲು, ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯವೇ ಎಂಬುದು ಪೋಷಕರ ಪ್ರಶ್ನೆಯಾಗಿದೆ.

107 ಪ್ರಾಥಮಿಕ, 27 ಪ್ರೌಢ ಶಾಲೆಗಳಿಗೆ ʼಅತಿಥಿʼ ಶಿಕಕ್ಷಕರೇ ಆಧಾರ:

ಔರಾದ ತಾಲೂಕಿನ ಒಟ್ಟು ಸರ್ಕಾರಿ ಪ್ರಾಥಮಿಕ ಶಾಲೆಗಳ ಪೈಕಿ 147 ಶಿಕ್ಷಕರ ಹುದ್ದೆ ಖಾಲಿಯಿದೆ,  ಹಾಗೂ 31 ಪ್ರೌಢ ಶಾಲೆಗಳಲ್ಲಿ 65 ಶಿಕ್ಷಕರ ಹುದ್ದೆ ಖಾಲಿಯಿದೆ. 147 ಖಾಲಿ ಹುದ್ದೆಗಳಿಗೆದುರಾಗಿ 107 ಪ್ರಾಥಮಿಕ ಅತಿಥಿ ಶಿಕ್ಷಕರನ್ನು, 65 ಪ್ರೌಢ ಶಾಲಾ ಖಾಲಿ ಹುದ್ದೆಗಳಲ್ಲಿ 65 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆಯ ಈಗಾಗಲೇ ಆದೇಶಿಸಿದೆ. ವರ್ಗಾವಣೆ, ನಿವೃತ್ತಿ, ಮುಂಬಡ್ತಿ ಸೇರಿದಂತೆ ಇತರೆ ಕಾರಣಗಳಿಂದ ಖಾಲಿಯಾದ ಈ ಶಾಲೆಗಳಿಗೆ ʼಅತಿಥಿʼಗಳೇ ಅನಿವಾರ್ಯ ಎಂಬಂತಾಗಿದೆ.

ಸರ್ಕಾರಿ ಶಾಲೆಗಳ ಅಳಿವು – ಉಳಿವು:

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಕಾಲಕಾಲಕ್ಕೆ ಅನುದಾನ ನೀಡುತ್ತದೆ. ಶಾಲೆಯ ಶೈಕ್ಷಣಿಕ ಪ್ರಗತಿಯ ಕುರಿತು ಗಂಭೀರವಾಗಿ ಪರಿಗಣಿಸದ ಸರ್ಕಾರ ಹಾಗೂ ಇಲಾಖೆ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಎರಡಂಕಿ ದಾಟಲ್ಲ. ಆದರೆ ವರ್ಷಕೊಮ್ಮೆ ಹೊಸ ಕೋಣೆ, ಹೊಸ ಯೋಜನೆಗಳು ಜಾರಿಯಲ್ಲಿರುತ್ತವೆ. ಕೆಲವು ಶಾಲೆಗಳಲ್ಲಿ ಗರಿಷ್ಠ ದಾಖಲಾತಿ ಹಾಗೂ ಹಾಜರಾತಿ ಇದ್ದರೂ ಶಿಕ್ಷಕರ ಕೊರತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಮುತುವರ್ಜಿ ವಹಿಸುವುದಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ “ಎಲ್ಲವೂ ಇದೆ, ಈಗ ಏನೂ ಉಳಿದಿಲ್ಲ” ಎನ್ನುವಂತೆ ಜನರು ವಿಶ್ವಾಸ ಕಳೆದುಕೊಳ್ಳುವಂತಾಗಿದೆ.

18 ಪ್ರೌಢ ಶಾಲೆಗಳಿಗೆ ಕನ್ನಡ ಭಾಷಾ ಶಿಕ್ಷಕರಿಲ್ಲ :

ಔರಾದ-ಕಮಲನಗರ ತಾಲೂಕು ಮೊದಲೇ ಗಡಿ ಪ್ರದೇಶ, ಇಲ್ಲಿನ ಜನ ಕನ್ನಡದೊಂದಿಗೆ ಮರಾಠಿ, ತೆಲುಗು ಮಿಶ್ರಿತ ಭಾಷೆ ಮಾತಾಡುವುದು ಸಾಮಾನ್ಯ. ಅನ್ಯಭಾಷಿಕರ ನೆಲದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸುವುದು ಸದ್ಯಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ. ಆದರೆ, ಗಡಿ ಭಾಗದ ಶಾಲೆಗಳು ಹಲವು ವರ್ಷಗಳಿಂದ ಕನ್ನಡ ಶಿಕ್ಷಕರ ಕೊರತೆ ಎದುರಿಸುತ್ತಿವೆ. ಬೆರಳಣಿಕೆಯಷ್ಟು ಹೊಸ ಶಿಕ್ಷಕರ ನೇಮಕವಾದರೂ ಮತ್ತೆ ʼಅತಿಥಿʼಗಳೇ ಆಧಾರವಾಗಿದ್ದಾರೆ. ಇದರಿಂದ ಕನ್ನಡ ಭಾಷಾ ಬೆಳವಣಿಗೆ ಕುಂಠಿತವಾಗುತ್ತಿದೆ. ಕನ್ನಡ ಭಾಷಾ ಬೋಧಕರಿಲ್ಲದೇ ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇರೆ ಹೇಳಬೇಕಾಗಿಲ್ಲ.

ತಾಲೂಕಿನಲ್ಲಿ ಒಟ್ಟು 31 ಪ್ರೌಢ ಶಾಲೆಗಳಿವೆ. ಇವುಗಳಲ್ಲಿ 27 ಶಾಲೆಗಳಿಗೆ 65 ವಿಷಯ ಶಿಕ್ಷಕರ ಕೊರತೆಯಿದ್ದು, ಇನ್ನು 18 ಪ್ರೌಢ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರೇ ಇಲ್ಲದ ಕಾರಣ ಅತಿಥಿ ಶಿಕ್ಷಕರ ನೇಮಿಸಿಕೊಳ್ಳುವ ಮೂಲಕ ಶಿಕ್ಷಣ ಇಲಾಖೆ ಅವರ ಮೇಲೆ ಅವಲಂಬಿತವಾಗಿದೆ.

ಔರಾದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ತುಳುಸಿರಾಮ ದೊಡ್ಡೆ ‌ʼಈದಿನ.ಕಾಮ್ʼ ಜೊತೆಗೆ ಮಾತನಾಡಿ, “ಶಿಕ್ಷಕರ ಕೊರತೆ ಇಡೀ ಕರ್ನಾಟಕ ರಾಜ್ಯದಲ್ಲೇ ಇದೆ. ಔರಾದ ತಾಲೂಕಿನಲ್ಲಿ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ತಾಲೂಕಿನ ಪ್ರೌಢ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆಯೂ ಇದೆ. ಅತಿಥಿ ಶಿಕ್ಷಕರಿಗೆ ಸರ್ಕಾರ ನೀಡುವ ಗೌರವ ಸಂಭಾವನೆ ಕಡಿಮೆ ಎನ್ನುವ ಕಾರಣಕ್ಕೆ ಕೆಲ ಕಡೆ ಅತಿಥಿ ಶಿಕ್ಷಕರ ನೇಮಿಸುವುದು ಕಷ್ಟವಿದೆ. ಸರ್ಕಾರ ನೇಮಕಾತಿ ಮೂಲಕ ಖಾಲಿ ಹುದ್ದೆಗಳು ಭರ್ತಿ ಮಾಡಿಕೊಳ್ಳುವರೆಗೂ ಅನಿವಾರ್ಯವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಸರಿದೂಗಿಸಲಾಗುತ್ತಿದೆ” ಎಂದು ಹೇಳಿದರು.

“ಔರಾದನಲ್ಲಿ ಶಿಕ್ಷಕರ ಕೊರತೆಯಿದ್ದು, ಅದರಲ್ಲೂ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಇರುವುದು ತುಂಬಾ ಗಂಭೀರವಾದ ಸಂಗತಿ. ಮಹಾರಾಷ್ಟ್ರ, ತೆಲಂಗಾಣ ಗಡಿ ಭಾಗದ ಗ್ರಾಮಗಳಲ್ಲಿ ಮರಾಠಿ ಶಾಲೆಗಳಿವೆ, ಅಲ್ಲಿಯೂ ಕನ್ನಡ ಶಿಕ್ಷಕರ ಕೊರತೆಯಿದ್ದರೆ ಕನ್ನಡ ಉಳಿಯುವುದಾದರೂ ಹೇಗೆ? ಇದರಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೇಲೆ ದೊಡ್ಡ ಪರಿಣಾಮ ಉಂಟಾಗುವುದು ಸಹಜ. ಗಡಿ ಭಾಗದ ಶಾಲೆಗಳಿಗೆ ಭಾಷಾ ಶಿಕ್ಷಕರನ್ನು ನೇಮಿಸಲು ಕಸಾಪದಿಂದ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಶ ಚನ್ನಶೆಟ್ಟಿ ‘ಈದಿನ.ಕಾಮ್‌‘ ಜೊತೆ ಮಾತನಾಡಿ ಹೇಳಿದರು.

ಗಡಿ ಗ್ರಾಮಗಳ ಶಾಲೆಗಳಲ್ಲಿಯೇ ಇಲ್ಲ ಕನ್ನಡ ಶಿಕ್ಷಕರು:

ಗಡಿ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕನ್ನಡ ವಿಷಯ ಶಿಕ್ಷಕರ ಕೊರತೆ ಹೆಚ್ಚಾಗಿ ಎದ್ದು ಕಾಣುತ್ತಿದೆ. ಅದರಲ್ಲೂ ಜಂಬಗಿ, ನಾಗಮಾರಪಳ್ಳಿ, ಖತಗಾಂವ್‌, ಹಂದಿಕೇರಾ, ಮುರ್ಕಿ, ಹೊಕ್ರಾಣಾ, ಬಾದಲಗಾಂವ, ಹಂಗರಗಾ ಗಡಿ ಗ್ರಾಮಗಳ ಸರ್ಕಾರಿ ಪ್ರೌಢ ಶಾಲೆಗಳು ಸೇರಿದಂತೆ ಇತರ 18 ಕನ್ನಡ ಹಾಗೂ ಮರಾಠಿ, ಉರ್ದು ಮಾಧ್ಯಮ ಶಾಲೆಗಳಲ್ಲಿ ಕನ್ನಡ ವಿಷಯ ಶಿಕ್ಷಕರ ಕೊರತೆಯಿದೆ. ಅವಳಿ ತಾಲೂಕಿನ ಅರ್ಧಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ ಕನ್ನಡ ಭಾಷಾ ಬೋಧಕರೇ ಇಲ್ಲದ ಕಾರಣ ವಿದ್ಯಾರ್ಥಿಗಳ ಭವಿಷ್ಯ ಮುಸುಕಾಗುತ್ತಿದೆ.

ಕನ್ನಡ ಭಾಷೆ, ನಾಡು ನುಡಿ ಹಾಗೂ ಸರ್ಕಾರಿ ಶಾಲೆಗಳ ಗುಣಮಟ್ಟ ಶಿಕ್ಷಣದ ಬಗ್ಗೆ ಸರ್ಕಾರ ಹಾಗೂ ಶಿಕ್ಷಣ ಸಚಿವರು ದಿನಾಲೂ ಮಾತನಾಡುತ್ತಲೇ ಇರುತ್ತಾರೆ. ಆದರೆ ಶಿಕ್ಷಕರ ನೇಮಕಾತಿ ಮಾಡದೇ ಖಾಲಿ ಬಿಟ್ಟರೆ ಶಾಲೆಗಳು ಸುಧಾರಣೆ ಆಗುವುದಾದರೂ ಹೇಗೆ, ಮಕ್ಕಳ ಭವಿಷ್ಯ ಉಜ್ವಲವಾಗುವುದು ಯಾವಾಗ ಎಂಬುದು ಶಿಕ್ಷಣ ಪ್ರೇಮಿಗಳ ಪ್ರಶ್ನೆ.

ಈ ಸುದ್ದಿ ಓದಿದ್ದೀರಾ? ಮೈಸೂರು | 2022ರಲ್ಲಿ ಮೋದಿ ಯೋಗ ಕಾರ್ಯಕ್ರಮಕ್ಕೆ 21 ಕೋಟಿ ರೂ. ಖರ್ಚು; ಪ್ರತಿಫಲ ಶೂನ್ಯ

ಸರ್ಕಾರಿ ಶಾಲೆ ಅಂದರೆ ಬಹುತೇಕರು ಮೂಗು ಮುರಿಯುತ್ತಾರೆ. ಈ ಮಧ್ಯೆ ಕೆಲವು ಕನ್ನಡ ಸರ್ಕಾರಿ ಶಾಲೆಗಳು ಕಾನ್ವೆಂಟ್‌ಗಳಿಗೆ ಮೀರಿಸಿ ಸೈ ಎನಿಸಿಕೊಂಡು ಎದೆತಟ್ಟಿಕೊಳ್ಳುವ ಹೆಮ್ಮೆ ಎನಿಸಿದರೆ, ಗ್ರಾಮೀಣ ಪ್ರದೇಶದ ಹಲವು ʼನಮ್ಮೂರ ಸರ್ಕಾರಿ ಶಾಲೆʼಗಳು ಬೆರಳಣಿಕೆಯಷ್ಟು ಬಡ ಮಕ್ಕಳ ಕಲಿಯುವ ಶಾಲೆಗಳಂತೆ ಬದಲಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎನ್ನಲಾದಿತೇ?

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X