“ಪುಂಡಾಟಿಕೆ ಕಣಪ್ಪ, ಜಾತಿಯೂ ಇಲ್ಲ, ಏನೂ ಇಲ್ಲ. ಹುಡುಗರ ಪುಂಡಾಟದಿಂದ ಜಗಳಗಳಾಗಿ ಇದೀಗ ಅದಕ್ಕೆ ಜಾತಿ ಬಣ್ಣ ಬಳಿಯುತ್ತಿದ್ದಾರೆ. ಈ ಹಿಂದೆ ಬಾಬಯ್ಯನ ಹಬ್ಬದ ಸಂದರ್ಭದಲ್ಲಿ ಪುಂಡ ಯುವಕರ ಗುಂಪುಗಳ ನಡುವೆ ಗಲಾಟೆ ಆಗಿತ್ತು. ಅಲ್ಲಿಂದ ಶುರುವಾದ ಜಗಳ ಇಲ್ಲಿವರೆಗೆ ಬಂದಿದೆ. ಇದೀಗ ಅಂಬೇಡ್ಕರ್, ವಾಲ್ಮೀಕಿ ಎಂದು ಜಾತಿ ಬಣ್ಣ ಬಳೆಯಲಾಗುತ್ತಿದೆ. ಇಲ್ಲಿ ದೊಡ್ಡವರಿಗಿಂತ ಹುಡುಗರದ್ದೇ ಜಾಸ್ತಿ ಆಗಿದೆ. ಬೆಳಗಾದರೆ ಒಬ್ಬರ ಮುಖ ಇನ್ನೊಬ್ಬರೂ ನೋಡಲೇಬೇಕು. ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಊರಿಗೆ ಒಳ್ಳೆಯದಾಯ್ತದೆ.” ಹಿಂಗಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಹೊಸೂರು ಹೋಬಳಿಯ ಹಂಪಸಂದ್ರ ಗ್ರಾಮದ ಸುಮಾರು 60 ವರ್ಷದ ಮಹಿಳೆ ತಿಮ್ಮಕ್ಕ.
ಇದೇ ಭಾನುವಾರ ಏ.27ರಂದು ಗೌರಿಬಿದನೂರಿನ ಹಂಪಸಂದ್ರ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಕಲ್ಲು ತೂರಾಟದ ಜತೆಗೆ ಗುಂಪು ಘರ್ಷಣೆಯೂ ನಡೆದಿತ್ತು. ಕಾರಣ, ಊರಿನ ಯುವಕರ ಪುಂಡಾಟಿಕೆ. ಕೆಲ ದಲಿತ ಯುವಕರ ಗುಂಪು ಅಂಬೇಡ್ಕರ್ ಭವನದ ಮುಂದಿನ ಶನೇಶ್ವರ ದೇವಸ್ಥಾನಕ್ಕೆ ದಾನವಾಗಿ ನೀಡಿರುವ ಖಾಲಿ ನಿವೇಶನದಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ಶನಿವಾರ ರಾತ್ರೋರಾತ್ರೋ ಪ್ರತಿಷ್ಠಾಪನೆ ಮಾಡಿದ್ದರು. ಬೆಳಗ್ಗೆ ಅಂಬೇಡ್ಕರ್ ಪುತ್ಥಳಿಯನ್ನು ನೋಡಿದ ವಾಲ್ಮೀಕಿ ಸಮುದಾಯದ ಯುವಕರು ವಾಲ್ಮೀಕಿ ನಾಮಫಲಕವನ್ನು ಅದೇ ಜಾಗಕ್ಕೆ ಪ್ರತಿಷ್ಠಾಪನೆ ಮಾಡಿದ್ದರು.

ಮೊದಲಿಗೆ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆಯಾಗಿದ್ದು, ನಂತರ ವಾಲ್ಮೀಕಿ ನಾಮಫಲಕ, ಊರಿಗೆ ನೀಲಿ ಬಾವುಟಗಳ ತೋರಣ, ದಲಿತ ಕೇರಿ ಬಿಟ್ಟು ಊರೊಳಗೆ ಆರತಿ ಹೊತ್ತು ಬಂದ ಮಹಿಳೆಯರು. ಇದಿಷ್ಟು ಎರಡೂ ಸಮುದಾಯಗಳ ನಡುವಿನ ಜಗಳಕ್ಕೆ ಕಾರಣವಾಯಿತು.
ಭಾನುವಾರ ಆರತಿ ಹೊತ್ತು ಊರೊಳಗೆ ಬಂದ ಮಹಿಳೆಯರ ಮೇಲೆ ವಾಲ್ಮೀಕಿ ಸಮುದಾಯದ ಮಹಿಳೆಯರು, ಪುರುಷರು ಕಲ್ಲು ತೂರಾಟ ನಡೆಸಿದರು. ಪರಸ್ಪರ ಕಲ್ಲುತೂರಾಟ ನಡೆಯಿತು. ಯುವಕರ ಪುಂಡಾಟಿಕೆಗೆ ಜಾತಿ ಬಣ್ಣ ಹಚ್ಚಿದರು. ಜಾತಿ ಜಾತಿಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಎಲ್ಲರೂ ಒಂದೇ ಎಂಬ ಭಾವನೆಯಲ್ಲಿದ್ದ ಗ್ರಾಮದಲ್ಲಿ ಜಾತಿ ಜ್ವಾಲೆಯ ಬಿಸಿ ರಂಗೇರಿತು.
ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಮಹೇಶ್ ಪತ್ರಿ ಅವರು, ಎರಡು ಸಮುದಾಯಗಳ ಮುಖಂಡರನ್ನು ಓಲೈಸುವ ಪ್ರಯತ್ನ ಮಾಡಿದರು. ಅಂಬೇಡ್ಕರ್ ಪುತ್ಥಳಿಗೆ ಅಡ್ಡವಾಗಿದ್ದ ವಾಲ್ಮೀಕಿ ನಾಮಫಲಕವನ್ನು ಪಕ್ಕಕ್ಕೆ ಸರಿಸಿ ಎರಡಕ್ಕೂ ಹಾರ ಹಾಕಿ, ಶಾಂತಿ ಸ್ಥಾಪಿಸುವ ಪ್ರಯತ್ನ ನಡೆಸಿದರಾದರೂ, ವಿಫಲವಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಮೂರು ದಿನಗಳ ಕಾಲ 144 ಸೆಕ್ಷನ್ ಜಾರಿಗೊಳಿಸಿ ಆದೇಶಿಸಲಾಯಿತು. ಊರಿನ ತುಂಬೆಲ್ಲಾ ಪೊಲೀಸ್ ತುಕಡಿಗಳನ್ನು ನೇಮಿಸಲಾಯಿತು.

ಇದು ಇಲ್ಲಿವರೆಗಿನ ವಾಸ್ತವ ಘಟನೆ. ದಲಿತರು ರಾತ್ರೋರಾತ್ರಿ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಿದ್ದು ತಪ್ಪು. ಜತೆಗೆ ಆರತಿ ಹೊತ್ತು ಊರೊಳಗೆ ಬಂದ ದಲಿತ ಮಹಿಳೆಯರ ಮೇಲೆ ವಾಲ್ಮೀಕಿ ಸಮುದಾಯ ಕಲ್ಲು ತೂರಿದ್ದು ಸಹ ತಪ್ಪೇ. ಬೆಳಗ್ಗೆ ಎಲ್ಲರೂ ಮಾತನಾಡಿ ಸ್ಥಾಪನೆ ಮಾಡಿದ್ದರೆ ಜಗಳ ಆಗುತ್ತಿರಲಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.
ಒಟ್ಟಾರೆಯಾಗಿ, ಅಂಬೇಡ್ಕರ್ ಸಕಲ ಸಮುದಾಯಕ್ಕೆ ಬೇಕಾದವರು ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಸಂವಿದಾನಿಕ ಹಕ್ಕಿನೊಂದಿಗೆ ದೇವಾಲಯಗಳಿಗೆ ದಲಿತರು ಪ್ರವೇಶ ಮಾಡುತ್ತಿರುವ ಕಾಲಘಟ್ಟದಲ್ಲಿ ಕೆಲ ಯುವಕರ ಗುಂಪುಗಾರಿಕೆ, ಪರಸ್ಪರ ದ್ವೇಷದ ಕಾರಣ ಜಾತಿಗಳ ನಡುವೆ ದ್ವೇಷ ಬಿತ್ತಬಾರದು. ಊರಿನ ನೆಮ್ಮದಿ ಕಸಿಯಬಾರದು. ಇದನ್ನರಿತು ಯುವಜನರು ಪರಸ್ಪರ ಸಹಬಾಳ್ವೆಯಿಂದ ಬದುಕಬೇಕು ಎಂಬುದೇ ಊರಿನ ದೊಡ್ಡವರ ಆಶಯ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.