ವಿಕಲಚೇತನರಿಗೆ ಕೊಡುವ ಬಸ್ ಪಾಸ್ ಗಳಿಗೆ ಸರಕಾರ ಶುಲ್ಕ ನಿಗದಿ ಮಾಡಿದ್ದು, ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಜ.2ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ವಿಕಲಚೇತನರ ಒಕ್ಕೂಟದಿಂದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ವಿಕಲಚೇತನರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ನಾಯಕ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಾದ್ಯಂತ 15 ಲಕ್ಷ ವಿಕಲಚೇತನರಿದ್ದು, ನೂತನ ಬಸ್ ಪಾಸ್ ಮತ್ತು ನವೀಕರಣಕ್ಕೆ ಸರಕಾರ 660 ರೂ. ಶುಲ್ಕ ನಿಗದಿ ಮಾಡಿರುವುದು ಖಂಡನೀಯ ಎಂದರು.
ರಾಜ್ಯದ ಜನರಿಗೆ ಶಕ್ತಿ ಯೋಜನೆ ಜಾರಿಗೊಳಿಸಿರುವ ಸರಕಾರ ವಿಕಲಚೇತನರ ಕಷ್ಟವನ್ನು ಕಡೆಗಣಿಸಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿರುವ ಸರಕಾರಕ್ಕೆ ವಿಕಲಚೇತನರು ಕಾಣಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ಸರಕಾರದ ನಡೆಯನ್ನು ಖಂಡಿಸಿ ಜನವರಿ 2ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಲಾಗುವುದು. ಧರಣಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ವಿಕಲಚೇತನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕೆ ಜಿ ಸುಬ್ರಮಣ್ಯಂ, ವೆಂಕಟಶಿವಪ್ಪ, ಮಮತಾ, ಸೌಭಾಗ್ಯಮ್ಮ, ನರಸಿಂಹ ಮೂರ್ತಿ, ಚಂದ್ರಶೇಖರ್, ಕೃಷ್ಣಪ್ಪ, ಮಂಜುನಾಥ್, ಮುರಳೀಧರ್ ಇತರರಿದ್ದರು.