“ಮಣ್ಣಲ್ಲಿ ಕೈಗಳು-ಮನಸ್ಸಲ್ಲಿ ಭಾರತ” ಧ್ಯೇಯ ವಾಕ್ಯದೊಂದಿಗೆ ದೇಶಾದ್ಯಂತ ಪರಿಸರ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದ್ದು. ಜುಲೈ 25ರ ತನಕ ಈ ಅಭಿಯಾನವನ್ನು ಚಿಲ್ಡ್ರನ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಸಿಐಓ) ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಂ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಐಓ ಮಕ್ಕಳು, ‘ ಜೂನ್ 25ರಿಂದ ಈಗಾಗಲೇ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮಂದಿರ, ಮಸೀದಿ, ಚರ್ಚು, ಪೊಲೀಸ್ ಠಾಣೆಗೆ ತೆರಳಿ ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅದೇ ರೀತಿ ಅಭಿಯಾನದ ಸಂದರ್ಭದಲ್ಲಿ ಮಕ್ಕಳಲ್ಲಿ ಕೂಡ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಟಿ ನಗರದ ವಿದ್ಯಾರ್ಥಿನಿ ಮುಸ್ಕಾನ್ ಫಾತಿಮಾ, ” ಸಿಐಓ ಮಕ್ಕಳ ಶಿಕ್ಷಣಕ್ಕಾಗಿ, ನೈತಿಕ ಬೆಳವಣಿಗೆಗಾಗಿ, ಅವರ ಸಾಮರ್ಥ್ಯಗಳ ವೃದ್ಧಿಗಾಗಿ ಮತ್ತು ಕೌಶಲ್ಯದ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿದೆ. ಪರಿಸರ ಮಾಲಿನ್ಯ ಎಲ್ಲ ಕಡೆ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ” ಎಂದು ತಿಳಿಸಿದರು.

“ಮಣ್ಣಲ್ಲಿ ಕೈಗಳು-ಮನಸ್ಸಲ್ಲಿ ಭಾರತ” ಧ್ಯೇಯ ವಾಕ್ಯದೊಂದಿಗೆ ದೇಶಾದ್ಯಂತ 10 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಈಗಾಗಲೇ ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಕ್ಕಳೇ ಮಾಡುತ್ತಿದ್ದಾರೆ. ಪೋಷಕರು ಮತ್ತು ಮಕ್ಕಳಿಗಾಗಿ ಬೆಂಗಳೂರಿನ ದೊಡ್ಡನಗುಡ್ಡೆಯಲ್ಲಿ ಇಕೋ ಫ್ರೆಂಡ್ಲಿ ಗಾರ್ಡನಿಂಗ್ ತರಬೇತಿ ಕಾರ್ಯಾಗಾರ ಕೂಡ ನಡೆಸಲು ಉದ್ದೇಶಿಸಲಾಗಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬಾಹ್ಯಾಕಾಶದಿಂದ ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ಶುಭಾಂಶು ಶುಕ್ಲಾ; ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಸ್ಪ್ಲಾಷ್‌ಡೌನ್
ಇನ್ನೋರ್ವ ವಿದ್ಯಾರ್ಥಿನಿ ನೂರ್ ರುಕಯ್ಯಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ರಕ್ಷಣೆಯ ಆಸಕ್ತಿ ಹೆಚ್ಚಿಸಲು ಚಿತ್ರಕಲೆ, ಪ್ರಬಂಧ, ಕವನ, ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಸೇರಿದಂತೆ ಹಲವು ಶಾಲೆಗಳಲ್ಲಿ ವಿವಿಧ ಸ್ಪರ್ಧೆಗಳನ್ನೂ ಕೂಡ ಹಮ್ಮಿಕೊಳ್ಳಲಾಗುವುದು. ಜೊತೆಗೆ, ಸಿಐಓ ಮಕ್ಕಳು ಮನೆಮೆನೆಗೆ ತೆರಳಿ ಗಿಡಗಳನ್ನು ಕೂಡ ನೆಡಲಿದ್ದಾರೆ. ಗಿಡ-ಮರಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ‘ಹಸಿರು ಸೆಲ್ಫಿ’ ಕಾರ್ಯಕ್ರಮ ಕೂಡ ನಡೆಸಲಿದ್ದೇವೆ. ಅಭಿಯಾನದ ಭಾಗವಾಗಿ ಬೆಂಗಳೂರು ನಗರದಲ್ಲೂ ಕೂಡ ಹಲವು ಶಾಲೆ, ಎನ್‌ಜಿಓ, ಮದ್ರಸಾ ಮುಖ್ಯಸ್ಥರ ಅನುಮತಿ ಪಡೆದು ಆಕ್ಸಿಜನ್ ಹೆಚ್ಚಿಸುವ ಗಿಡ-ಮರಗಳನ್ನು ನೆಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿನಿ ಹಾಮಿದ್ ಝೈನಬಾ ಉರ್ದು ಭಾಷೆಯಲ್ಲಿ ವಿವರಿಸಿದರೆ, ವಿದ್ಯಾರ್ಥಿ ಮೊಹಮ್ಮದ್ ರೈಹಾನ್ ಇಂಗ್ಲಿಷ್‌ನಲ್ಲಿ ವಿವರಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿಗಳಾದ ಮೊಹಮ್ಮದ್ ಅಬ್ದುಲ್ಲಾ, ಇಮ್ರಾನ್ ಹಾಗೂ ಸಮ್ರೀನ್ ಉಪಸ್ಥಿತರಿದ್ದರು. ಚಿಲ್ಡ್ರನ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಸಿಐಓ) ಬೆಂಗಳೂರು ನಗರ ಸಂಘಟಕಿ ಅವಾತಿಫ್ ಶೈಖ್ ಸ್ವಾಗತಿಸಿದರು.

