ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಹಿನ್ನೆಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ.
ಪ್ರತಿವರ್ಷ ಮಹಾಶಿವರಾತ್ರಿಗೆ ಮಲಮಹದೇಶ್ವರ ಬೆಟ್ಟದಲ್ಲಿ ಜಾತ್ರಾಮಹೋತ್ಸವ ಜರಗುತ್ತದೆ. ಈ ಜಾತ್ರೆಗೆ ಲಕ್ಷಾಂತರ ಮಂದಿ ತೆರಳುವುದರಿಂದ ಸಹಜವಾಗಿ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ, ಫೆಬ್ರವರಿ 25ರಿಂದ ಮಾರ್ಚ್ 1ರವರೆಗೆ ಐದು ದಿನಗಳ ಕಾಲ ಮಹದೇಶ್ವರಬೆಟ್ಟಕ್ಕೆ ದ್ವಿಚಕ್ರ, ಆಟೋ ರಿಕ್ಷಾ, ಗೂಡ್ಸ್ ವಾಹನ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಕಡಿದಾದ ತಿರುವು,ದಟ್ಟ ಅರಣ್ಯ ಪ್ರದೇಶವಿರುವ ಕಾರಣ ವಾಹನ ದಟ್ಟಣೆ ತಪ್ಪಿಸಲು, ಅಪಘಾತ ನಡೆಯದಂತೆ ಮುನ್ನೆಚ್ಚರಿಕೆಯಾಗಿ ದ್ವಿಚಕ್ರ, ತ್ರಿ ಚಕ್ರ ವಾಹನಗಳಿಗೆ ನಿರ್ಬಂಧ ಆದೇಶ ಹೊರಡಿಸಲಾಗಿದೆ.
ಕೌದಳ್ಳಿ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಕೇವಲ ಕಾರು ಹಾಗೂ ಬಸ್ನಲ್ಲಿ ಮಾತ್ರ ಮಹದೇಶ್ವರ ಬೆಟ್ಟಕ್ಕೆ ತೆರಳಲು ಅವಕಾಶ ನೀಡಲಾಗಿದೆ.
ಮಲೆಮಹದೇಶ್ವರ ಜಾತ್ರಾ ವಿಶೇಷ
ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದಲೇ(ಫೆಬ್ರುವರಿ 25) ಮಹಾಶಿವರಾತ್ರಿ ಜಾತ್ರೆ ಆರಂಭವಾಗಿದೆ. ಫೆಬ್ರವರಿ 26ರ ಮಹಾಶಿವರಾತ್ರಿಯಂದು ಮಲೆಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದ್ದು, ರಾತ್ರಿಯಿಡೀ ಜಾಗರಣೆ, ಉತ್ಸವ, ವಿಶೇಷ ಅಭಿಷೇಕ, ಪೂಜೆ-ಪುನಸ್ಕಾರಗಳು ನಡೆಯಲಿವೆ. 27ರಂದು ವಿಶೇಷ ಸೇವೆ ಉತ್ಸವಾಧಿಗಳು, 28ರಂದು ಅಮಾವಾಸ್ಯೆ ಪೂಜೆ ಮತ್ತು ಮಾರ್ಚ್ 1ರಂದು ಮಹಾ ರಥೋತ್ಸವ ಜರುಗಲಿದೆ.
ಕಾಲ್ನಡಿಗೆಯಲ್ಲಿ ಬರುತ್ತಿರುವ ಪಾದಯಾತ್ರಿಗಳು
ಕೋಲಾರ, ಬೆಂಗಳೂರು, ರಾಮನಗರ, ಚನ್ನಪಟ್ಟಣ, ಕನಕಪುರ, ಹಲಗೂರು, ಮಳವಳ್ಳಿ, ಮಂಡ್ಯ ಹೀಗೆ ಬೇರೆಬೇರೆ ಕಡೆಯಿಂದ ಕಾಡುಮೇಡು ಸುತ್ತಿ ಮಹದೇಶ್ವರ ಬೆಟ್ಟದತ್ತ ತೆರಳುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಹರಿಯುವ ಕಾವೇರಿ ನದಿ ದಾಟಿ ಬರಬೇಕಾಗಿದೆ. ನೀರಿನ ಸೆಳೆತ ಇರುವುದರಿಂದ ನದಿಯ ಎರಡೂ ದಡಗಳಿಗೆ ಹಗ್ಗ ಕಟ್ಟಿದ್ದು, ಪಾದಯಾತ್ರಿಗಳು ಹಗ್ಗ ಹಿಡಿದು ನದಿ ದಾಟಿ ಬೆಟ್ಟಕ್ಕೆ ತಲುಪುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಉದ್ಯೋಗ ಮಾಹಿತಿ | ಅಂಚೆ ಇಲಾಖೆ ಜಿಡಿಎಸ್ ಹುದ್ದೆಗೆ ನೇರ ನೇಮಕಾತಿ; ಅರ್ಜಿ ಸಲ್ಲಿಕೆಗೆ ಮಾರ್ಚ್ 3 ಕೊನೆ ದಿನ
ಕಾಲ್ನಡಿಗೆಯಲ್ಲಿ ಬರುವವರಿಗೆ ದಾರಿಯುದ್ದಕ್ಕೂ ರೈತರು ಊಟ, ತಿಂಡಿ ಅಷ್ಟೇ ಅಲ್ಲದೇ ಕುಡಿಯುವ ನೀರು, ಮಜ್ಜಿಗೆ, ಪಾನಕ, ತಂಪು ಪಾನೀಯಗಳನ್ನು ನೀಡಿ ಪಾದಯಾತ್ರಿಗಳ ಧಣಿವಾರಿಸುತ್ತಿದ್ದಾರೆ.