ಮೈಸೂರಿನ ಭೋಗಾದಿ ಮುಖ್ಯ ರಸ್ತೆ ಬಳಿಯಿರುವ ಬನವಾಸಿ ತೋಟದಲ್ಲಿ ಭಾನುವಾರ ನಡೆದ ‘ಪ್ರೂನಿಂಗ್ ಮತ್ತು ಗ್ರಾಫ್ಟಿಂಗ್‘ ಕುರಿತ ಕಾರ್ಯಗಾರದಲ್ಲಿ ಬೆಳಗಾವಿ ಜಿಲ್ಲೆ, ನಿಪ್ಪಾಣಿ ತಾಲ್ಲೂಕಿನ ಕೃಷಿಕರು ಹಾಗೂ ಲೇಖಕರಾದ ಸುರೇಶ್ ದೇಸಾಯಿಯವರು ಮಾತನಾಡಿ ‘ಹಾರ್ಟಿ ಪಂಕ್ಚರ್’ ಹೊಸ ತಂತ್ರಜ್ಞಾನ ಗಿಡಮರಗಳ ಕೊರತೆ ನೀಗಿಸುತ್ತದೆ’ ಎಂದರು.
“ಯಾವುದೇ ಗಿಡ, ಮರವಾಗಲಿ ಆರೋಗ್ಯಕರ ಬೆಳವಣಿಗೆಗೆ ಖನಿಜ, ಲವಣಗಳು ಅತ್ಯಾವಶ್ಯಕ. ಇದರ ಕೊರತೆ ಉಂಟಾದಾಗ ಗಿಡ, ಮರಗಳು ಸೊರಗುತ್ತವೆ ರೋಗ ಬಾಧೆಗೆ ಸಿಲುಕುತ್ತವೆ. ಹಣ್ಣು, ತರಕಾರಿ, ಹೂವು, ಏಕದಳ, ದ್ವಿದಳ ಧಾನ್ಯಗಳ ಮೇಲೆ ಬಗೆ ಬಗೆಯ
ಕೀಟ ರೋಗಗಳು ಆಕ್ರಮಿಸುವುದರಿಂದ ತೀವ್ರ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಗಿಡ, ಮರ ಬೆಳವಣಿಗೆ ಕಾಣದೆ ಇಳುವರಿ ಕುಂಟಿತವಾಗುತ್ತೆ. ಹೀಗಾಗುವುದರಿಂದ, ಬೆಳೆದ ಬೆಳೆ ಕೈತಪ್ಪಿ ನಷ್ಟ ಅನುಭವಿಸುವಂತಾಗುತ್ತದೆ”.
ಇಂತಹ ಸಂದರ್ಭದಲ್ಲಿ ರೈತರಿಗೆ ಏನು ಮಾಡಬೇಕು?, ಯಾವ ಕ್ರಮ ಅನುಸರಿಸಬೇಕು ತಿಳಿಯುವುದಿಲ್ಲ. ಕೀಟ ನಾಶಕ ಸಿಂಪಡನೆ ಮಾಡುತ್ತಾರೆ. ಇದರಿಂದ ಗಿಡ, ಮರ ಚೇತರಿಸಿಕೊಳ್ಳಲು ಸಾಧ್ಯವಿಲ್ಲಾ. ಚೇತನಾ ಶಕ್ತಿ ಕುಂದಿರುವುದರಿಂದ ತನಗೆ ಅಗತ್ಯ ಪೋಷಕಾಂಶ ವೃದ್ಧಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸಮಯ ಮೀರುವುದರಿಂದ ಗಿಡ, ಮರ ಒಣಗುವುದು, ಇಲ್ಲ ಕಡಿಮೆ ಇಳುವರಿಗೆ ಸೀಮಿತ ಆಗುವುದರಿಂದ ರೈತನಿಗೆ ತಾನು ಮಾಡಿದ ಖರ್ಚು, ಆದಾಯ ಕಾಣಲು ಸಾಧ್ಯವಾಗದ ಪರಿಸ್ಥಿತಿ. ಇದಕ್ಕಾಗಿಯೇ ಚೀನಾ ದೇಶದ ಪ್ರವಾಸ ಕೈಗೊಂಡು ಹಲವು ಪ್ರಕಾರಗಳಲ್ಲಿ, ರೈತರೊಡನೆ ಚರ್ಚಿಸಿ, ನೇರವಾಗಿ ಇದಕ್ಕೆ ಪರಿಹಾರ ಏನೆಂಬುದನ್ನು ಕಂಡುಕೊಂಡು ಹೊಸದಾಗಿ ಅಕ್ಯು ಪಂಕ್ಚರ್ ಆಧಾರಿತವಾಗಿ ಹೊಸದಾಗಿ ‘ಹಾರ್ಟಿ ಪಂಕ್ಚರ್’ ತಂತ್ರಜ್ಞಾನವನ್ನು ಕಂಡು ಹಿಡಿದು ಗಿಡ, ಮರ ಬಾಧೆ ಸಮಸ್ಯೆಗೆ ನಿವಾರಣಾ ಉಪಾಯ ಕಂಡುಕೊಳ್ಳಲಾಗಿದೆ.
ಹಾರ್ಟಿ ಪಂಕ್ಚರ್ ವಿಧಾನ ಬಹಳ ಸುಲಭವಾದದ್ದು. ಹಾಗೆಯೇ, ಕೈಗೆಟಕುವ ಖರ್ಚಿನಲ್ಲಿ ತಾವೇ ಸ್ವತಃ ಮಾಹಿತಿ ಪಡೆದುಕೊಂಡು ಅದರಂತೆ ಅನುಸರಿಸಿ ಇಳುವರಿ ಪಡೆಯಲು, ಗಿಡ, ಮರ ಉಳಿಸಿಕೊಳ್ಳಲು ಸಾಧ್ಯವಿದೆ. ಈಗಾಗಲೇ, ಸಾಕಷ್ಟು ರೈತರು ಈ ವಿಧಾನ ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಹಲವೆಡೆ ಇದರ ಮಾದರಿ ಮಾಡುವುದರ ಮೂಲಕ ಹಾರ್ಟಿ ಪಂಕ್ಚರ್ ಮಾಡುವ ಮುನ್ನ ಇದ್ದ ಗಿಡ ಮರಗಳು, ಹಾರ್ಟಿ ಪಂಕ್ಚರ್ ವಿಧಾನ ಬಳಸಿದ ನಂತರ ಇರುವ ಗಿಡ, ಮರಗಳ ಸ್ಥಿತಿಗತಿಗಳನ್ನು ಅವಲೋಕಿಸಲಾಗಿದೆ.

ಹಾರ್ಟಿ ಪಂಕ್ಚರ್ ತಂತ್ರಜ್ಞಾನನವನ್ನು ಬಳಸುವುದರಿಂದ ರೈತರಿಗೆ ಸಿಗುವ ಅನುಕೂಲಗಳು ಎಂದರೇ “ರೋಗಮುಕ್ತ ಹಣ್ಣು, ಉತ್ಪಾದನೆ, ಹಣ್ಣಿನ ಗಾತ್ರದಲ್ಲಿ ಹೆಚ್ಚಳ, ಹಣ್ಣಿನ ಸಂಖ್ಯೆ ಕ್ರಮೇಣ ಹೆಚ್ಚುವುದು, ಹಣ್ಣು ನೀಡದ ಗಿಡ, ಮರಕ್ಕೆ ಉತ್ಪಾದನಾ ಸಾಮರ್ಥ್ಯ ವೃದ್ಧಿಯಾಗುವುದು, ಸುಲಭವಾದ ಮತ್ತು ಅತಿ ಕಡಿಮೆ ಖರ್ಚಿನ ಪದ್ಧತಿಯಾಗಿದೆ” ಎಂದು ಮಾಹಿತಿ ನೀಡಿದರು.
ಗ್ರಾಫ್ಟಿಂಗ್ ವಿಚಾರದಲ್ಲಿ ಕುಮಾರ್ ಮಾತನಾಡಿ “ಹೆಚ್ಚಿನ ಇಳುವರಿಗೆ ಕಸಿ ಕಟ್ಟುವ ಆಯ್ಕೆ ವಿಧಾನ ಬಹು ಮುಖ್ಯವಾದದ್ದು. ಅದರಲ್ಲೂ, ಕಸಿ ಕಟ್ಟಲು ಆಯ್ಕೆ ಮಾಡುವ ರೆಂಬೆ, ಅದನ್ನು ಕಸಿ ಕಟ್ಟುವ ಮಾದರಿ. ಹಾಗೆಯೇ, ಕುಡಿ ಕಡಿಯುವ ತನಕ ಗಾಳಿ, ನೀರು ತಾಕದ ಹಾಗೆ ನಿರ್ವಹಣೆ ಮಾಡುವುದು ಅತಿ ಮುಖ್ಯವಾದದ್ದು. ಯಾವುದೇ ಗಿಡ ಆಗಿರಲಿ ಅದಕ್ಕೆ ಉತ್ತಮವಾದ ಹಣ್ಣಿನ ಕಡ್ಡಿ ಕಸಿ ಕಟ್ಟಿದರೆ ಇಳುವರಿ ಜೊತೆಗೆ, ಸಿಹಿ, ಬಣ್ಣ, ಅದರದ್ದೇ ರುಚಿಯನ್ನು ಕಾಣಬಹುದು” ಎಂದು ವಿವರಿಸಿದರು.

ಕೃಷಿಕ ಹಾಗೂ ಲೇಖಕರಾದ ಟಿ. ಜಿ. ಎಸ್. ಅವಿನಾಶ್ ಮಾತನಾಡಿ “ಒಂದು ಎಕರೆ ಭೂಮಿಯಲ್ಲಿ ಸರಿ ಸುಮಾರು 22 ಸಾವಿರ ಕೆಜಿ ಆಹಾರ ಪದಾರ್ಥ ಬೆಳೆಯಬಹುದು. ಅದುವೇ 32 ಮಾದರಿಯ ಬೆಳೆಗಳನ್ನು ಬೆಳೆಯುವ ಮೂಲಕ. ಇದಕ್ಕೆ ಆದ ವಿಧಾನಗಳಿವೆ. ಎಲ್ಲಾ ತರಹದ ಹಣ್ಣು, ತರಕಾರಿ, ಸೊಪ್ಪು, ದ್ವಿದಳ ಧಾನ್ಯ, ಏಕದಳ ಧಾನ್ಯ, ಬಾಳೆ, ತೆಂಗು ಬೆಳೆಯುವುದರಿಂದ ತನ್ನ ಮನೆಯ ನಿರ್ವಹಣೆಯಿಂದ ಹಿಡಿದು ಸಮಯೋಚಿತವಾಗಿ ಬರುವ ಬೆಳೆಯಿಂದ ತಿಂಗಳಿಗೆ ಕನಿಷ್ಠ ಅಂದರು ₹15 ಸಾವಿರ ರೂಪಾಯಿ ಗಳಿಸಲು ಸಾಧ್ಯವಿದೆ”.
“ಉಪ್ಪೊಂದನ್ನು ಹೊರತು ಪಡಿಸಿ ಇನ್ಯಾವುದನ್ನು ಹೊರಗಿನಿಂದ ತರದ ಹಾಗೆ ನಮ್ಮ ಭೂಮಿಯಲ್ಲೇ ನಾವುಗಳು ಬೆಳೆದು ಮನೆ ನಿರ್ವಹಣೆಗೆ ಬಳಸಿ, ಮಾರಾಟ ಮಾಡುವುದರ ಮೂಲಕ ರೈತ ಆರ್ಥಿಕವಾಗಿ ಸುಸ್ಥಿತಿ ಕಾಣಬಹುದು. ಸ್ಥಳೀಯವಾಗಿ ಮಾರುಕಟ್ಟೆ ತಾನೇ ಸೃಷ್ಟಿಸಿಕೊಳ್ಳುವುದು, ತಾನು ಬೆಳೆದ ಬೆಳೆಯನ್ನ ಅಕ್ಕಪಕ್ಕದ ಜನರು ಖರೀದಿ ಮಾಡಿಕೊಳ್ಳುವಂತೆ ವ್ಯವಸ್ಥೆ ಕಲ್ಪಿಸುವುದು ಬಹು ಮುಖ್ಯ. ರಾಸಾಯನಿಕ ಮುಕ್ತ ಕೃಷಿ ಮಾಡಿದರೆ ಜನರು ಖಂಡಿತವಾಗಿಯೂ ಬೆಳೆದ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುತ್ತಾರೆ. ಇಂತಹ ಕಡೆಗೆ ಹೆಚ್ಚು ಒತ್ತು ನೀಡಬೇಕು”.

ರೈತ ನಷ್ಟ ಅನುಭವಿಸಲು ಕಾರಣ ಎಲ್ಲರೂ ಬೆಳೆದರೆ ತಾನು ಸಹ ಅದನ್ನೇ ಬೆಳೆಯಬೇಕು ಎನ್ನುವುದು. ಒಟ್ಟೊಟ್ಟಿಗೆ ಒಂದೇ ಬೆಳೆ ಬೆಳೆಯುವುದರಿಂದ ನಿರೀಕ್ಷಿತಾ ಆದಾಯ ಪಡೆಯುವುದು ಕಷ್ಟ. ಜೊತೆಗೆ ಆಗಿಂದಾಗ್ಗೆ ಆದಾಯ ಬರುವುದಿಲ್ಲ. ಒಂದು ವೇಳೆ ಬೆಳೆ ಬೆಲೆ ಕುಸಿತ ಕಂಡರೆ ಆರ್ಥಿಕವಾಗಿ ಹೊಡೆತ ಬೀಳುತ್ತದೆ. ಸಾಲಗಾರನಾಗಿ ಸಂಕಷ್ಟದ ಜೀವನ ನಡೆಸುವಂತಾಗುತ್ತದೆ. ಇದೆಲ್ಲದರ ಕಡೆ ಗಮನ ಹರಿಸಿ ಪರ್ಯಾಯವಾಗಿ ರಾಸಾಯನಿಕ ಮುಕ್ತವಾಗಿ, ಬಹು ಬೆಳೆಗಳನ್ನು ತಮ್ಮಲ್ಲಿರುವ ಭೂಮಿಯಲ್ಲಿ ಬೆಳೆಯುವಂತಾಗಬೇಕು ಎಂದು ಹೇಳಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ
ಕಾರ್ಯಗಾರದಲ್ಲಿ ಹಿರಿಯ ಸಾಹಿತಿ ಕೆ. ವೆಂಕಟರಾಜು, ಅಹಿಂದ ಜವರಪ್ಪ, ನಿರಂತರ ಶ್ರೀನಿವಾಸ್, ಈದಿನ.ಕಾಮ್ ವರದಿಗಾರ ಮೋಹನ್ ಮೈಸೂರು ಸೇರಿದಂತೆ ಬಾಗಲಕೋಟೆ, ಚಿತ್ರದುರ್ಗ, ಮಂಡ್ಯ, ಚಾಮರಾಜನಗರ, ಕೊಳ್ಳೇಗಾಲ, ಹಿರಿಯೂರು, ಬೆಂಗಳೂರಿನ ರೈತರು ಇದ್ದರು.