ಹಾಸನದ ಶಕ್ತಿ ದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಮೊದಲ ದಿನದಿಂದಲೂ ಗೊಂದಲದ ಗೂಡಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಶಾಸಕರ ಯಾವುದೇ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮದೇ ಅಧಿಕಾರವನ್ನು ನಡೆಸುತ್ತಿದ್ದಾರೆಂದು ಆರೋಪಿಸಿ ಶಾಸಕ ಸ್ವರೂಪ್ ಪ್ರಕಾಶ್ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.
ಇದೀಗ ಕಳಸ ಪ್ರತಿಷ್ಠಾಪನೆಗೆ ಕರೆಯದೆ ಇದ್ದಿದ್ದಕ್ಕೆ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಜಿಲ್ಲಾಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, “ನನ್ನನ್ನು ಎರಡು ಲಕ್ಷ ಮಂದಿ ಆಯ್ಕೆ ಮಾಡಿದ್ದಾರೆ, ಅವರಿಗೆ ನಾನು ಉತ್ತರ ಕೊಡಬೇಕು. ಎಷ್ಟೋ ಮಂದಿ ಡಿಸಿಗಳು ಬಂದಿದ್ದಾರೆ, ಹೋಗಿದ್ದಾರೆ. ಈ ರೀತಿ ಯಾರೂ ನಡೆದುಕೊಂಡಿರಲಿಲ್ಲ” ಎಂದು ಹಾಸನಾಂಬೆ ದೇವಾಲಯದ ಎದುರು ಪ್ರತಿಭಟಿಸಿದರು.
“ದೇವಾಲಯದ ನೂತನ ಕಳಸ ಪ್ರತಿಷ್ಠಾಪನೆಗೂ ನನ್ನನ್ನು ಆಹ್ವಾನಿಸಿಲ್ಲ. ದೇವಾಲಯದಲ್ಲಿ ಜಿಲ್ಲಾಧಿಕಾರಿ ಪತಿಯೊಂದಿಗೆ ಹೋಮ ಹವನ ಮಾಡಿದ್ದು, ತಮ್ಮ ಸಂಬಂಧಿಕರನ್ನು ಕರೆದು ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮ ಮಾಡುವುದು ಎಷ್ಟು ಸರಿ” ಎಂದು ಪ್ರಶ್ನಿಸಿದರು
“ಹೆಲಿಟೂರಿಸಂ ಉದ್ಘಾಟನೆ, ಪ್ಯಾರಾ ಸೈಲಿಂಗ್ ಹಾಗೂ ಇತರೆ ಕಾರ್ಯಕ್ರಮಗಳಿಗೂ ನನ್ನನ್ನು ಕರೆದಿಲ್ಲ. ಬರಗಾಲದಂತ ಪರಿಸ್ಥಿತಿಯಲ್ಲಿ ಹೆಲಿಟೂರಿಸಂಗೆ ಒಬ್ಬರಿಗೆ ₹4,300 ದರ ನಿಗದಿ ಮಾಡಿದ್ದಾರೆ. ಇಷ್ಟೊಂದು ಹಣ ಏಕೆ ನಿಗದಿ ಮಾಡಿದ್ದೀರೆಂದು ಪ್ರಶ್ನಿಸಿದರೆ, ಜಿಲ್ಲಾಧಿಕಾರಿ ಹಾರಿಕೆಯ ಉತ್ತರ ನೀಡುತ್ತಾರೆ” ಎಂದು ಆರೋಪಿಸಿದರು.
“ಗಂಡ ಹೆಂಡತಿ ಮಾತ್ರ ಹೋಮ ಹವನ ಮಾಡಿಸಿದ್ದೀರಿ. ಬೇರೆಯವರು ಲೆಕ್ಕಕ್ಕೆ ಇಲ್ಲವಾ. ನಾನೇನು ದನ ಕಾಯಲು ಇದ್ದೀನಾ. ನಿಮಗೊಂದು ನ್ಯಾಯ, ಬೇರೆಯವರಿಗೆ ಒಂದು ನ್ಯಾಯಾನಾ” ಎಂದು ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಜಾತಿ ಗಣತಿಗೆ ವಿರೋಧ ವ್ಯಕ್ತ ಪಡಿಸಿರುವುದು ಖಂಡನೀಯ: ಸಿದ್ದು ಬಿ.ಎಸ್ ಸೂರನಹಳ್ಳಿ
ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಯನ್ನು ಸ್ವರೂಪ್ ಪ್ರಕಾಶ್ ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದು, “ಬರಗಾಲದಂತಹ ಸಂದರ್ಭದಲ್ಲಿ ಕಚೇರಿಯಲ್ಲಿ ಇದ್ದು, ಜನರ ಸಮಸ್ಯೆ ಆಲಿಸಬೇಕಾದ ನೀವು ಕುಟುಂಬದ ಸದಸ್ಯರೊಂದಿಗೆ ಹೋಮ–ಹವನ ಕಾರ್ಯಕ್ರಮ ಮಾಡಿರುವುದು ಖಂಡನಾರ್ಹ” ಎಂದರು.