ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯೂ ಬೇಲೂರು ತಾಲೂಕು ಪಂಚಾಯಿತಿ ಸಂಭಾಂಗಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ, ಶಿವಯೋಗಿ ಸಿದ್ಧರಾಮ ಜಯಂತಿ ಹಾಗೂ ಮಹಾಯೋಗಿ ವೇಮನ ಜಯಂತಿ, ಅಂಬಿಗರ ಚೌಡಯ್ಯ ಜಯಂತಿಯ ಪೂರ್ವಭಾವಿ ಸಭೆಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜ.10ರಂದು ಬೆಳಗ್ಗೆ 9:00ಗಂಟೆಗೆ ನಿಗದಿಯಾಗಿದ್ದ ಸಭೆ 10.30ಕ್ಕೆ ಪ್ರಾರಂಭಿಸಲಾಯಿತು. ಶಾಸಕ ಎಚ್.ಕೆ. ಸುರೇಶ್ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೇಲೂರು ತಾಲೂಕು ತಹಸೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿ ಮಮತಾ ಗಣರಾಜ್ಯೋತ್ಸವ ಮತ್ತು ಮಹನೀಯರ ಜಯಂತಿಯ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಂಡರು.
ಈ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಾಜೇಗೌಡ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಒರ್ವ ವ್ಯಕ್ತಿಗೆ ಗೌರವಿಸಬೇಕು ಎಂದು ಮನವಿ ಮಾಡಿಕೊಂಡರು.
ಬಳಿಕ ಮಾತನಾಡಿದ ಶಿಕ್ಷಕ ಪಾಲಾಕ್ಷರವರು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಶಾಲಾ, ಕಾಲೇಜು ಕ್ರೀಡಾಪಟುಗಳಿಗೆ ಗೌರವಿಸಬೇಕು ಎಂದು ಮನವಿ ಮಾಡಿಕೊಂಡರು.
ಪತ್ರಕರ್ತ ಮತ್ತು ಸಾಮಾಜಿಕ ಹೋರಾಟಗಾರ ನೂರ್ ಅಹಮದ್, ಈ ಹಿಂದೆ ಆಯೋಜಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳಿಗಿಂತ ಪ್ರಸ್ತುತ ಉತ್ತಮ ರೀತಿಯಲ್ಲಿ ಅರ್ಥ ಪೂರ್ಣವಾಗಿ ಇಂದಿನ ತಹಸೀಲ್ದಾರ್ ಮತ್ತು ಶಾಸಕರು ಆಯೋಜಿಸುತ್ತಿದ್ದಾರೆ. ಆದರೆ, ಶಾಸಕರು ಕೇವಲ ಭಾಷಣಗಳಲ್ಲಿ ಮಾತ್ರ ಪಾರದರ್ಶಕತೆ ಇದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ನ್ಯಾಯ ಕೊಡಿಸುವಲ್ಲಿ ನಾನು ಶ್ರಮಿಸುತ್ತಿದ್ದೇನೆ ಎನ್ನುತ್ತಾರೆ. ಆದರೆ, ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದ್ದಾರೆ.
ರಾಷ್ಟ್ರೀಯ ಹಬ್ಬ ಆಚರಣೆ ಸಮಿತಿ ವತಿಯಿಂದ ಕೊಡಮಾಡುವ ಪ್ರಶಸ್ತಿಗೆ ಶಾಸಕರ ಶಿಫಾರಸ್ಸು ಇದ್ದವರಿಗೆ ಮಾತ್ರ ಬೇಲೂರು ತಾಲೂಕಿನಲ್ಲಿ ಪ್ರಶಸ್ತಿ ಲಭ್ಯವಾಗುತ್ತಿದೆ. ನೈಜ ಫಲಾನುಭವಿಗಳಿಗೆ ಗೌರವ ಸಲ್ಲುತ್ತಿಲ್ಲ ಎಂದು ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ತಪ್ಪು ಆಗದಂತೆ ಎಚ್ಚರ ವಹಿಸ ಬೇಕೆಂದು ಸಲಹೆ ನೀಡಿದರು.
ಮಾತನಾಡಿದ ಶಾಸಕರು, ನಿಮಗೆ ಮಾಹಿತಿಯ ಕೊರತೆ ಇದೆ. 224ಕ್ಷೇತ್ರಗಳಲ್ಲಿ ಬೇಲೂರು ಕ್ಷೇತ್ರದಲ್ಲಿ ನಾನು ಪಾರದರ್ಶಕವಾಗಿ, ಜಾತ್ಯತೀತ ಹಾಗೂ ಪಕ್ಷತೀತವಾಗಿ ಕಾರ್ಯನಿರಸಿಕೊಂಡು ಬರುತ್ತಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಏರುಧ್ವನಿಯಲ್ಲೇ ಉತ್ತರಿಸಿದರು. ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೊಡ ಮಾಡುವ ಪ್ರಶಸ್ತಿಗೆ ಬೇಲೂರು ತಾಲೂಕಿನ ಸಾರ್ವಜನಿಕರು, ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಬಹುದು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರ ಪರವಾಗಿ ನಾಗರಿಕರು ಸಹ ಅರ್ಜಿಯ ಮೂಲಕ ಮಾಹಿತಿ ನೀಡಬಹುದು. ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಆಯ್ಕೆ ಸಮಿತಿಯು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪುರಸಭೆ ಅಧ್ಯಕ್ಷೆ ತೀರ್ಥ್ ಕುಮಾರಿ ಎಂ.ಆರ್. ವೆಂಕಟೇಶ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣ ಅಧಿಕಾರಿ ಸತೀಶ್, ಸರ್ಕಲ್ ಇನ್ಸ್ಪೆಕ್ಟರ್ ಜಯರಾಮ್, ಪುರಸಭೆ ಮುಖ್ಯ ಅಧಿಕಾರಿ ಸುಜಯ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಗೌಡ, ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ತಾಲೂಕ ಮಟ್ಟದ ಎಲ್ಲಾ ಅಧಿಕಾರಿವರ್ಗದವರು ಹಾಜರಿದ್ದರು.