ಬಗರ್‌ಹುಕಂ ಯೋಜನೆಯಡಿ ಸಲ್ಲಿಸಿರುವ ಎಲ್ಲ ಕಡತಗಳನ್ನು ಶೀಘ್ರವೇ ವಿಲೇವಾರಿ ಮಾಡುವ ಮೂಲಕ ರೈತಾಪಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸೋಮವಾರ ನಡೆಸಿದ ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಮಾತನಾಡಿದರು.
“ಸಕಲೇಶಪುರ ತಾಲೂಕಿನಲ್ಲಿ ಫಾರಂ 53 ಹಾಗೂ 57ರಲ್ಲಿ ಮೂರು ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಈ ಎಲ್ಲ ಅರ್ಜಿಗಳ ವಿಲೇವಾರಿಗೆ ಸಾಕಷ್ಟು ಅಡ್ಡಿಗಳಿದ್ದು, ಸೆಕ್ಷನ್ 4, ಗೋಮಾಳ, ಡೀಮ್ಡ್ ಹಾಗೂ ಮಾಜಿ ಯೋಧರಿಗೆ ಮೀಸಲಿಟ್ಟಿರುವ ಜಮೀನು ಹೊರತುಪಡಿಸಿ, ಅರಣ್ಯ ಇಲಾಖೆಯ ನಿರಾಪೇಕ್ಷಣೆ ಪಡೆದ ನಂತರ ಕಡತಗಳನ್ನು ಮಂಜೂರು ಮಾಡಲಾಗುವುದು” ಎಂದು ತಿಳಿಸಿದರು.
“ಸಭೆಯಲ್ಲಿ 34 ಕಡತಗಳಿಗೆ ಮಂಜೂರಾತಿ ನೀಡಲಾಗಿದೆ. ಮೊದಲ ಹಂತದಲ್ಲಿ ಯಾವುದೇ ಗೊಂದಲಗಳಿಲ್ಲದ ಕಡತಗಳನ್ನು ವಿಲೇವಾರಿ ಮಾಡಿ ನಂತರದ ಹಂತದಲ್ಲಿ ಇತರ ಕಡತಗಳನ್ನು ವಿಲೇವಾರಿ ಮಾಡಲಾಗುವುದು. ಒಟ್ಟಾರೆಯಾಗಿ ಬಡವರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ” ಎಂದು ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದರು.
ಇದನ್ನೂ ಓದಿದ್ದೀರಾ?ಹಾಸನ l 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿ ಮಾಡಬೇಕು: ರೈತ ಧರ್ಮರಾಜ್
ಈ ವೇಳೆ ಸಭೆಯಲ್ಲಿ ಬಗರ್ ಹುಕುಂ ಸಮಿತಿ ಸದಸ್ಯರಾದ ಉಚ್ಚಂಗಿ ಉದಯ, ಹಳೆಕೆರೆ ಚಂದ್ರು, ಗೀತಾ, ತಹಶೀಲ್ದಾರ್ ಮೇಘನಾ ಸೇರಿದಂತೆ ಇತರರು ಇದ್ದರು.
