ಹಾಸನ | ಕೋಮು ಹಿಂಸಾಚಾರ ತಡೆಗಟ್ಟಿ, ಶಾಂತಿ ಕಾಪಾಡಲು ಡಿಸಿಗೆ ಮನವಿ

Date:

Advertisements

ಕರಾವಳಿಯಲ್ಲಿ ಹೆಚ್ಚುತ್ತಿರುವ ಕೋಮು ಹಿಂಸಾಚಾರ ತಡೆಗಟ್ಟಲು, ದ್ವೇಷ ಹರಡುವ ದುಷ್ಟ ಶಕ್ತಿಗಳ ಕಡಿವಾಣಕ್ಕೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಾಗೂ ನಾಡಿನಲ್ಲಿ ಶಾಂತಿ-ಸಾಮರಸ್ಯ ಕಾಪಾಡುವಂತೆ ಹಾಸನ ಜಿಲ್ಲೆಯ ಜನರ ಪರವಾಗಿ ಸೌಹಾರ್ದ ಕರ್ನಾಟಕ ಹಾಗೂ ದಲಿತ ಜನಪರ‌ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿ ಕೆ ಎಸ್ ಲತಾಕುಮಾರಿ ಅವರಿಗೆ ಮನವಿ ಮಾಡಲಾಯಿತು.

ಈ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ದ್ವೇಷದ ಕೊಲೆ-ಪ್ರತಿಕೊಲೆಗಳು ಮತ್ತೊಮ್ಮೆ ಭುಗಿಲೆದ್ದಿದೆ. ಒಂದು ತಿಂಗಳ ಅವಧಿಯಲ್ಲಿ ಇಂತಹ ನಾಲ್ಕು ಕೊಲೆಗಳು ನಡೆದಿರುವುದು ನಾಡನ್ನು ದಿಗ್ಭ್ರಮೆಗೊಳಿಸಿದೆ. ಆಟೋ ಚಾಲಕ ಮುಹಮ್ಮದ್ ಶರೀಫ್, ಮಾಬ್ ಲಿಂಚಿಂಗ್‌ಗೆ ಬಲಿಯಾದ ಅಶ್ರಫ್ ವಯನಾಡು, ರೌಡಿ ಶೀಟರ್ ಹಾಗೂ ಸಂಘಪರಿವಾರದ ಕಾರ್ಯಕರ್ತ ಸುಹಾಸ್ ಶೆಟ್ಟಿ, ಕೊಳತ್ತಮಜಲು ಅಬ್ದುಲ್ ರೆಹಮಾನ್… ಹೀಗೆ ಸಾಲುಸಾಲು ಕೊಲೆಗಳು ಕರಾವಳಿಯನ್ನು ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಭೀತಿ ಉಂಟು ಮಾಡಿದೆ” ಎಂದರು.

“ಇನ್ನು ಈ ಅವಧಿಯಲ್ಲಿ ಬಲಿಯಾದ ಮುಸ್ಲಿಂ ಸಮುದಾಯದ ಮೂರೂ ಜನರು ಅಮಯಾಕರು ಹಾಗೂ ಧರ್ಮದ ಗುರುತಿನ ಕಾರಣಕ್ಕಾಗಿಯೆ ಕೊಲೆಗೀಡಾದರು ಎನ್ನುವುದು ಕರಾವಳಿ ಜಿಲ್ಲೆಗಳಲ್ಲಿ ಕೋಮುವಾದ, ಮತೀಯ ದ್ವೇಷ, ಮುಸ್ಲಿಂ ದ್ವೇಷ ತೀರಾ ಉಲ್ಬಣವಾಸ್ಥೆ ತಲುಪಿರುವುದನ್ನು ಎತ್ತಿ ತೋರಿಸುತ್ತದೆ. ಇದು ಹೊಸ ಬೆಳವಣಿಗೆಯೇನಲ್ಲ. ಈ ಮೊದಲು ಅಶ್ರಫ್ ಕಲಾಯಿ, ಶರತ್ ಮಡಿವಾಳ, ಹಮೀದ್ ಆಕಾಶ ಭವನ ಎಂಬ ಮೂವರು ಇದೇ ರೀತಿ ಮತೀಯ ದ್ವೇಷ, ಪ್ರತೀಕಾರದ ಹೆಸರಿನಲ್ಲಿ ಕೊಲೆಗೀಡಾಗಿದ್ದರು. ಆ ತರುವಾಯ ಬಿಜೆಪಿ ಸರ್ಕಾರದ ಆಡಳಿತದಲ್ಲೂ ಬೆಳ್ಳಾರೆ ಮಸೂದ್, ಪ್ರವೀಣ್ ನೆಟ್ಟಾರು, ಸುರತ್ಕಲ್ ಫಾಝಿಲ್ ಕೊಲೆಗಳು ನಡೆದು ನಾಡು ತತ್ತರಗೊಂಡಿತ್ತು. ಕಳೆದ ಎರಡು ದಶಕಕ್ಕೂ ಹೆಚ್ಚು ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಸರಣಿ ಕೊಲೆಗಳು ಪ್ರತೀಕಾರದ ನೆಪದಲ್ಲಿ ನಡೆಯುತ್ತಲೇ ಬಂದಿದೆ. ಹತ್ತಾರು ಅಮಾಯಕ ಜನರು ಈ ರೀತಿಯ ಹತ್ಯೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಅದು ಮತ್ತಷ್ಟು ವೇಗ ಪಡೆದುಕೊಂಡಿರುವುದು ಇಡೀ ಕರಾವಳಿಯನ್ನು ಪ್ರಕ್ಷುಬ್ದ ಪ್ರದೇಶವನ್ನಾಗಿ ಪರಿವರ್ತಿಸಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಯುತ್ತಿರುವ ಈ ಕೊಲೆ, ಪ್ರತಿ ಕೊಲೆ ಹಾಗೂ ಅದರ ಸುತ್ತಲಿನ ಬೆಳವಣಿಗೆಗಳು ಅಲ್ಲಿನ ಜನ ಸಮುದಾಯಗಳನ್ನು ಧರ್ಮದ ಆಧಾರದಲ್ಲಿ ಪೂರ್ತಿಯಾಗಿ ವಿಭಜಿಸಿ ಹಾಕಿದೆ. ಇದು ಅತ್ಯಂತ ಗಂಭೀರ ಸ್ಥಿತಿಯಾಗಿದ್ದು, ಇದರ ಪರಿಣಾಮಗಳು ರಾಜ್ಯ ಇತರೆಡೆಗಳಲ್ಲೂ ನಿಧಾನವಾಗಿ ಗೋಚರಿಸತೊಡಗಿದೆ ಎಂಬುದುನ್ನು ಇಲ್ಲಿ ಗಮನಿಸಬೇಕಿದೆ” ಎಂದು ಕಳವಳ ವ್ಯಕ್ತಪಡಿಸಿದರು.

Advertisements

“ಅಪಾರ ಭರವಸೆ ಇಟ್ಟುಕೊಂಡು ಕರ್ನಾಟಕದ ಜನತೆ ಕಳೆದ ಚುನಾವಣೆಯಲ್ಲಿ ಬಹುಮತದಿಂದ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಕೋಮುವಾದವನ್ನು ಹಿಮ್ಮೆಟ್ಟಿಸುವ ಮುಖ್ಯ ಉದ್ದೇಶದೊಂದಿಗೆ ರಾಜ್ಯದ ಪ್ರಜ್ಞಾವಂತರು, ಪ್ರಗತಿಪರರು, ಜನಪರ ಚಳವಳಿಗಳು ಕಳೆದ ಚುನಾವಣೆಯಲ್ಲಿ ನಿಮ್ಮ ಪರವಾಗಿ ದೃಢವಾಗಿ ನಿಂತಿದ್ದರು. ಆದರೆ, ಕರಾವಳಿಯ ಈ ಬೆಳವಣಿಗೆಗಳು ರಾಜ್ಯ ಸರ್ಕಾರದ ಮೇಲಿನ ಭರವಸೆಗಳನ್ನು ಹುಸಿ ಮಾಡಿದ್ದು, ಸರ್ಕಾರದ ನಡೆಯಿಂದ ಜನಸಾಮಾನ್ಯರಲ್ಲಿ ನಿರಾಸೆ ಮೂಡಿಸಿದೆ” ಎಂದು ಅಸಮಾಧಾನಗೊಂಡರು.

ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಕರಾವಳಿ ಜಿಲ್ಲೆಗಳಲ್ಲಿ ಕೋಮುವಾದಿ ಶಕ್ತಿಗಳ ಆಟಾಟೋಪಗಳಿಗೆ ಕಡಿವಾಣ ಹಾಕುವ ಕುರಿತು ಗಮನ ಸೆಳೆದಿತ್ತು. ಹಾಗೆಯೇ ದಕ್ಷಿಣ ಕನ್ನಡದ ಪ್ರಜ್ಞಾವಂತ ವಿಭಾಗ ಅಲ್ಲಿನ ಬೆಳವಣಿಗೆಗಳ ಕುರಿತು ಸರ್ಕಾರದ ಗಮನ ಸೆಳೆಯುತ್ತಿತ್ತು. ಆದರೆ, ಸರ್ಕಾರದ ಅಸಹನೀಯ ನಿರ್ಲಕ್ಷ್ಯ ಇಂದು ಕೋಮುವಾದ ತನ್ನ ಅತಿಯನ್ನು ತಲುಪಿ ಸರಣಿ ಸಾವುಗಳು ಸಂಭವಿಸಿವೆ. ಕರಾವಳಿ ಭಾಗದಲ್ಲಿ ನಡೆದ ಕೆಲ ಕೋಮು ಗಲಭೆಗಳ ಹಾಗೂ ಸಾವುಗಳ ಹಿನ್ನೆಲೆಯಲ್ಲಿ ಹಾಸನದಲ್ಲಿ ಸೌಹಾರ್ದ ಕರ್ನಾಟಕ ವತಿಯಿಂದ ಜೂನ್ 20 ರಂದು ನಡೆದ ಚಿಂತಕರು ಹಾಗೂ ಜನಪರ ಹೋರಾಟಗಾರ ಸಮಾಲೋಚನಾ ಸಭೆ ನಡೆಸಿ ಕೋಮುವಾದಿ ಶಕ್ತಿಗಳಿಗೆ ಕಡಿವಾಣ ಹಾಕಲು, ಅಲ್ಲಿನ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಸ್ಪಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೀರ್ಮಾನಿಸಿದಂತೆ ಈ ಮೂಲಕ ಹಾಸನ ಜಿಲ್ಲೆಯ ಜನರ ಪರವಾಗಿ ರಾಜ್ಯ ಸರ್ಕಾರಕ್ಕೆ ಈ ಕೆಳಗಿನಂತೆ ಒತ್ತಾಯಿಸಿದೆ.

  • ಕರವಾಳಿ ಜನರ ಪರವಾಗಿ ಹಾಸನ ಜಿಲ್ಲೆಯ ಜನರ ಮನವಿ –
  1. ಕರಾವಳಿ ಜಿಲ್ಲೆಗಳಲ್ಲಿ ಕೋಮುವಾದದ ವಿಷಜ್ವಾಲೆ ತೀವ್ರವಾಗುತ್ತಿರುವುದರಿಂದ ತಕ್ಷಣವೇ ಇದನ್ನು ಮತೀಯವಾದ ಉಲ್ಭಣಗೊಂಡಿರುವ “ರೆಡ್ ಝೋನ್” ಎಂದು ಘೋಷಿಸಬೇಕು. ಇಲ್ಲಿ ಕೋಮು ಸೌಹಾರ್ದತೆ, ಪರಸ್ಪರ ಜನರಲ್ಲಿ ಸಾಮರಸ್ಯ‌ ಮೂಡಿಸಲು ರಾಜ್ಯ ಸರ್ಕಾರವು ತಕ್ಷಣಕ್ಕೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ, ಯುದ್ಧೋಪಾದಿಯಲ್ಲಿ ಅದನ್ನು ಜಾರಿಗೊಳಿಸಬೇಕು.
  2. ಕುಡುಪು ಗುಂಪು ಹತ್ಯೆ ಪ್ರಕರಣವನ್ನು ವಿಶೇಷ ತನಿಖಾ ತಂಡದ ಮೂಲಕ ಹೊಸ ಎಫ್ಐಆರ್ ದಾಖಲಿಸಿ ಮರು ತನಿಖೆ ನಡೆಸಬೇಕು‌. ಕುಡುಪು ಮಾಬ್ ಲಿಂಚಿಂಗ್ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ, ದ್ವೇಷ ಭಾಷಣಗಳು, ಮತೀಯ ದ್ವೇಷದ ಕೊಲೆ, ಪ್ರತಿಕೊಲೆಗಳನ್ನು ತಡೆಯಲು ಯಾವ ಯತ್ನವನ್ನೂ ಮಾಡದ ಆರೋಪ ಹೊತ್ತಿರುವ ಅಂದಿನ ಪೊಲೀಸ್ ಕಮೀಷನರ್ ಅನುಮಪ್ ಅಗರ್ವಾಲ್ ಅವರನ್ನು ತನಿಖೆಗೆ ಒಳಪಡಿಸಬೇಕು. ಈ ಗುಂಪು ಹತ್ಯೆ, ಕೊಳತ್ತಮಜಲು ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದಲ್ಲಿ ತಕ್ಷಣವೆ ಸಮರ್ಥ ವಿಶೇಷ ಅಭಿಯೋಜಕರನ್ನು ನೇಮಿಸಬೇಕು.
  3. ಈ ಅವಧಿಯಲ್ಲಿ ಮತೀಯ ದ್ವೇಷದಿಂದ ಹತ್ಯೆಗೀಡಾದ ಅಮಾಯಕರ ಕುಟುಂಬಗಳಿಗೆ ಪರಿಹಾರ ಧನ ಒದಗಿಸಿ ಪುನರ್ವಸತಿ ಕಲ್ಪಿಸಿಕೊಡಬೇಕು.
  4. ಕರಾವಳಿ ಜಿಲ್ಲೆಗಳಲ್ಲಿ ದ್ವೇಷ ಭಾಷಣ, ಪ್ರತೀಕಾರದ ಕರೆಗಳನ್ನು ನೀಡುವ ವ್ಯಕ್ತಿಗಳ ಮೇಲೆ ಸರ್ಕಾರ ಯಾವುದೇ ಮುಲಾಜಿಲ್ಲದೆ ನಿರ್ಧಾಕ್ಷಿಣ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು, ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಸುಲಭದಲ್ಲಿ ಜಾಮೀನು, ತಡೆಯಾಜ್ಞೆಗಳು ದೊರಕದಂತೆ ನೋಡಲು ಪ್ರತ್ಯೇಕವಾಗಿ ವಿಶೇಷ ಅಭಿಯೋಕರನ್ನು ನೇಮಿಬೇಕು.
  5. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಕೋಮುವಾದ ಪ್ರೇರಿತ ಕೊಲೆ, ಪ್ರತಿಕೊಲೆಗಳನ್ನು ‘ವಿಶೇಷ ತನಿಖಾ ತಂಡ’ದ (ಎಸ್.ಐ.ಟಿ) ಮೂಲಕ ಮರು ತನಿಖೆಗೆ ಒಳಪಡಿಸಬೇಕು.
  6. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಶಕದಿಂದ ಸರಣಿ ಹತ್ಯೆಗಳು ತಡೆಯಿಲ್ಲದೆ ನಡೆಯುತ್ತಾ ಬಂದಿದೆ. ರಾಜಕೀಯ ಬೆಂಬಲಗಳಿಲ್ಲದೆ ಇದು ಅಸಾಧ್ಯದ ಸಂಗತಿ. ಈ ಕುರಿತಾದ ಸಂಚು, ಉದ್ದೇಶಗಳನ್ನು ಬಯಲಿಗೆ ತರುವುದು, ಸತ್ಯ ಸಂಗತಿಗಳನ್ನು ಬಯಲಿಗೆ ತರುವುದು ಅತಿ ಅಗತ್ಯ‌‌. ಅದಕ್ಕಾಗಿ ಮೂರು ದಶಕದ ಅವಧಿಯಲ್ಲಿ ನಡೆದಿರುವ ಇಂತಹ ಕೊಲೆ, ಹಿಂಸೆಗಳನ್ನು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಲು ಆದೇಶ ಹೊರಡಿಸಬೇಕು.
  7. ಈ ಕೋಮುವಾದದ ವಿಷಜ್ವಾಲೆ ದ.ಕ. ದಿಂದ ಪ್ರೇರಣೆ ಪಡೆದು ಇತರ ಜಿಲ್ಲೆಗಳಿಗೂ ಹಬ್ಬುವ ಸೂಚನೆಗಳು ತೀವ್ರವಾಗಿ ಕಾಣುತ್ತಿರುವುದರಿಂದ ತಕ್ಷಣವೇ ಇದನ್ನು ತಡೆಗಟ್ಟಲು ಪ್ರಯತ್ನಿಸಬೇಕು. ಕರ್ನಾಟಕದಲ್ಲಿ ಕೋಮು ದ್ವೇಷ ಹರಡದಂತೆ ಕಟ್ಟು ನಿಟ್ಟಿನ ಕಾನೂನು ರೂಪಿಸಿ ಜಾರಿಗೊಳಿಸಿ ತಡೆಗಟ್ಟಲು ಕಠಿಣ ಕ್ರಮ ವಹಿಸಬೇಕು.

ಇದನ್ನೂ ಓದಿ: ಹಾಸನ | ಬಾಬಾಸಾಹೇಬರನ್ನು ಆಚರಣೆ ಮಾಡುವುದಲ್ಲ, ಅನುಸರಿಸಬೇಕು: ಡಾ. ಬಿಪಿನ್ ನಾಗರಾಜ್

ಈ ವೇಳೆ ಲೇಖಕಿ ರೂಪಾ ಹಾಸನ, ಹಿರಿಯ ಪತ್ರಕರ್ತ ಆರ್ ಪಿ ವೆಂಕಟೇಶ್ ಮೂರ್ತಿ, ಹಿರಿಯ ದಲಿತ ಮುಖಂಡ ಎಚ್ ಕೆ ಸಂದೇಶ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್ ಆರ್ ನವೀನ್ ಕುಮಾರ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ
ಪೃಥ್ವಿ ಎಂ ಜಿ, ದಸಂಸ ಮುಖಂಡ ರಾಜಶೇಖರ್ ಹುಲಿಕಲ್, ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಟಿ ಆರ್ ವಿಜಯ್ ಕುಮಾರ್, ಹರೀಶ್ ಕಟ್ಟೆಬೆಳಗುಲಿ, ತೌಫಿಕ್ ಅಹಮದ್, ಅನ್ಸರ್, ಮುಬಷಿರ್ ಅಹಮದ್, ಹಾಗೂ SFI ಕಾರ್ಯದರ್ಶಿ ರಮೇಶ್ ಸೇರಿದಂತೆ ಜನ ಪರ ದಲಿತ ಹಾಗೂ ಇತರೆ ಸಂಘಟನೆಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X