ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂಬ ಪಾಲಕರ ಆಶಯ ಹಾಗೂ ಉನ್ನತ ಶಿಕ್ಷಣ ಪಡೆದು ಉತ್ತಮ ಸ್ಥಾನಕ್ಕೇರಬೇಕೆಂಬ ವಿದ್ಯಾರ್ಥಿಗಳ ಕನಸಿಗೆ ಸಾರಿಗೆ ವ್ಯವಸ್ಥೆ ತಣ್ಣೀರೆರಚುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾದರೂ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸುವ ಮುಖಾಂತರ ಹಾಸನದ ಅರಸೀಕೆರೆ ತಾಲೂಕಿನ ನೀಲಗಿರಿಕಾವಲು ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಹಾಸನ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ಅರಸೀಕೆರೆ ತಾಲೂಕು ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ನೀಲಗಿರಿಕಾವಲು ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು, ರೋಗಿಗಳು ಕಿಲೋ ಮೀಟರ್‌ಗಟ್ಟಲೆ ನಡೆದು ಸಾಗಿ ಬಸ್ ಹತ್ತಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಉತ್ತಮ ರಸ್ತೆ ಹಾಗೂ ಸಾಕಷ್ಟು ಪ್ರಯಾಣಿಕರಿದ್ದರೂ ಬಸ್‌ನ ವ್ಯವಸ್ಥೆ ಮಾತ್ರ ಇಲ್ಲದಿರುವುದನ್ನು ನೋಡಿದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ.
“ಇತ್ತೀಚೆಗೆ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಯೋಜನೆ ಜಾರಿಗೆ ತಂದಿದೆ. ಆದರೆ, ಈ ಭಾಗದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಈ ಶಕ್ತಿ ಯೋಜನೆ ಉಪಯೋಗವಾಗುತ್ತಿಲ್ಲ. ಶಕ್ತಿ ಯೋಜನೆ ನಮಗೆ ಬೇಡ. ನಾವು ಬಸ್ಸಿನಲ್ಲಿ ಹಣ ನೀಡಿ ಟಿಕೆಟ್ ಪಡೆದು ಸಂಚರಿಸುತ್ತೇವೆ. ನಮ್ಮ ಗ್ರಾಮಕ್ಕೊಂದು ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಸಾಕು. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಿ” ಎನ್ನುತ್ತಾರೆ ನೀಲಗಿರಿಕಾವಲು ಗ್ರಾಮದ ಮಹಿಳೆಯರು.

“ನಿತ್ಯ ವಿದ್ಯಾಭ್ಯಾಸಕ್ಕೆಂದು ತೆರಳುವ ನೂರಾರು ವಿದ್ಯಾರ್ಥಿಗಳು, ಕೆಲಸ ಕಾರ್ಯಕ್ಕೆಂದು ತೆರಳುವ ರೈತರು, ಚಿಕಿತ್ಸೆಗೆ ತೆರಳುವ ರೋಗಿಗಳು, ವೃದ್ಧರು ಸೇರಿದಂತೆ ಈ ಭಾಗದ ವಿವಿಧ ಗ್ರಾಮಗಳ ಸಾರ್ವಜನಿಕರು ನಗರ ಪ್ರದೇಶಕ್ಕೆ ಹೋಗಿ-ಬರಲು ಹರಸಾಹಸಪಡುವಂತಾಗಿದೆ” ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಜೀವ ಭಯದಲ್ಲೇ ಓಡಾಡುವ ಊರಿನ ಜನರು: ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿತ್ಯವೂ ಪಟ್ಟಣಕ್ಕೆ ತೆರಳಲು ಸುಮಾರು ಏಳು ಕಿ.ಮೀ ದೂರ ನಡೆದು ಮಳೆ, ಬಿಸಿಲೆನ್ನದೆ ಹಲವು ಸಮಸ್ಯೆಯ ನಡುವೆಯೇ ಜೀವ ಭಯದಲ್ಲಿ ನಡೆದುಕೊಂಡು ಹೋಗಿ ಬಸ್ ಹತ್ತಿ ಬೇರೆ ಬೇರೆ ಊರುಗಳಿಗೆ ಹೋಗಿ-ಬರುವಂತಾಗಿದೆ. ದುಪ್ಪಟ್ಟು ಹಣ ನೀಡಿ ಆಟೋ ಅಥವಾ ಗೂಡ್ಸ್ ವಾಹನಗಳಲ್ಲಿ ಓಡಾಡುವಂಥ ಪರಿಸ್ಥಿತಿ ಎದುರಾಗಿದೆ. ಒಮ್ಮೊಮ್ಮೆ ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳುವ ಗಾಡಿಗಳಲ್ಲಿ ತೆರಳಬೇಕಾದ ಅನಿವಾರ್ಯತೆ ಇದೆ. ನಿತ್ಯ ಖಾಸಗಿ ವಾಹನದಲ್ಲಿ ಪ್ರಯಾಣಿಸಲು ಹಣಕೊಡಲು ಸಾಧ್ಯವಾಗದ ವಿದ್ಯಾರ್ಥಿಗಳು ಕಿಮೀ ದೂರ ನಡೆದು ಹೋಗುವುದರಿಂದ ಸರಿಯಾದ ಸಮಯಕ್ಕೆ ಶಾಲಾ, ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲವೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಶಾಲೆ ತೊರೆಯುತ್ತಿರುವ ವಿದ್ಯಾರ್ಥಿನಿಯರು: ನೀಲಗಿರಿಕಾವಲು ಗ್ರಾಮದಿಂದ ಪಟ್ಟಣಕ್ಕೆ ತರೆಳಲು 7 ಕಿಮೀ ಕಾಲ್ನಡಿಗೆಯಲ್ಲೇ ಸಾಗಬೇಕು. ಇಲ್ಲಿ ನಿರ್ಜನ ಪ್ರದೇಶದಿಂದ ಕೂಡಿದೆ. ಇಲ್ಲಿ ಹೆಚ್ಚು ವಾಹನಗಳು ಓಡಾಡದ ಕಾರಣ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಆತಂಕದಲ್ಲೇ ನಡೆದುಕೊಂಡು ಹೋಗುವಂತಾಗಿದೆ. ಹೀಗಾಗಿ ಹೆಣ್ಣುಮಕ್ಕಳು ಅರ್ಧಕ್ಕೆ ವಿದ್ಯಾಭ್ಯಾಸ ಬಿಟ್ಟು, ಶಾಲಾ-ಕಾಲೇಜುಗಳಿಂದ ಹೊರಗುಳಿಯುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದಾಗಿ ಹೆಣ್ಣುಮಕ್ಕಳು ಮನೆಯಲ್ಲೂ ಸುಮ್ಮನೆ ಕುಳಿತಿರುವ ಬದಲು ಇತರರೊಂದಿಗೆ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯಲು ತೆರಳುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಸಂಬಧಿಸಿದ ಅಧಿಕಾರಿಗಳು ಈ ಸಮಸ್ಯೆ ನಿವಾರಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮುಂದಾಗಬೇಕು ಎಂಬುದು ಈ ಭಾಗದ ನಾಗರಿಕರ ಆಗ್ರಹವಾಗಿದೆ.
ದಲಿತ ಸಂಘರ್ಷ ಸಮಿತಿ ಹಾಸನ ಜಿಲ್ಲಾಧ್ಯಕ್ಷ ಚೇತನ್ ಶಾಂತಿಗ್ರಾಮ ಮಾತನಾಡಿ, “ನೀಲಗಿರಿಕಾವಲು ಗ್ರಾಮಕ್ಕೆ ಬಸ್ ಬಾರದ ಕಾರಣ ಹೆಣ್ಣುಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಲು ಸಮಸ್ಯೆಯಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿ, ಸ್ಥಳೀಯ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಗ್ರಾಮಕ್ಕೆ ಬಸ್‌ನ ವ್ಯವಸ್ಥೆ ಕಲ್ಪಿಸುವ ಮೂಲಕ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಕನಸು ನನಸು ಮಾಡಲು ಅಧಿಕಾರಿಗಳು ಮುಂದಾಗಬೇಕಿದೆ” ಎಂದು ಆಗ್ರಹಿಸಿದರು.

ಸ್ಥಳೀಯ ನಿವಾಸಿ ಪುಷ್ಪ ಮಾತನಾಡಿ, “ಮುಂದೆ ನನ್ನ ಮಗಳಿಗೆ ಉನ್ನತ ವಿದ್ಯಾಭ್ಯಾಸ ಕೊಡಬೇಕೆಂಬ ಆಸೆ ಇಟ್ಟುಕೊಂಡಿದ್ದೇನೆ. ಆದರೆ ಬಸ್‌ನ ಸಮಸ್ಯೆ ಇರುವುದರಿಂದ ಮಗಳನ್ನು ಕಾಲೇಜಿಗೆ ಕಳುಹಿಸಲು ಮನೆಯವರು ಹಿಂದೇಟು ಹಾಕುತ್ತಿದ್ದಾರೆ. ನೀಲಗಿರಿಕಾವಲು ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರೆ ನನ್ನ ಮಕ್ಕಳೂ ಸೇರಿದಂತೆ ಈ ಭಾಗದ ಸಾಕಷ್ಟು ಬಡ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಸ್ಥಳೀಯ ನಿವಾಸಿ ಕಾವ್ಯ ಮಾತನಾಡಿ, “ಚುನಾವಣೆ ಸಂದರ್ಭದಲ್ಲಿ ವೋಟ್ ಹಾಕುವುದಕ್ಕೆ ಮಾತ್ರವೇ ನಾವು ಬೇಕು. ಒಂದು ಸಲ ಮತಚಲಾವಣೆ ಮಾಡಿದ ಮೇಲೆ ನಾವು ಯಾರೋ, ಜನಪ್ರತಿನಿಧಿಗಳು ಯಾರೋ ಎಂಬಂತೆ ನಡೆದುಕೊಳ್ಳುತ್ತಾರೆ. ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆಂದು ಸುಳ್ಳು ಹೇಳಿ ವೋಟ್ ಹಾಕಿಸಿಕೊಳ್ಳುವ ರಾಜಕಾರಣಿಗಳು ಮಾಧ್ಯವದ ಮುಂದಷ್ಟೇ, ʼನಾವು ಜನಪರ, ಜನಪ್ರಿಯʼರೆಂದು ಬಿಂಬಿಸಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ಇರುವುದೇ ಬೇರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಕಳೆದೆ ಮೂವತ್ತು ವರ್ಷಗಳಿಂದ ನೀಲಗಿರಿಕಾವಲು ಗ್ರಾಮಕ್ಕೆ ಸಮರ್ಪಕ ರಸ್ತೆ, ಚರಂಡಿ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳಿಲ್ಲ. ಸೌಕರ್ಯ ಕಲ್ಪಿಸಿ ಕೊಡಿ ಎಂದು ಕೇಳಿದರೆ ನಮ್ಮ ಶಾಸಕ ಹುಲ್ಲಳ್ಳಿ ಸುರೇಶ್ ಅವರು ನಮ್ಮ ಊರಿಗೆ ಬರುವುದೇ ಇಲ್ಲ” ಎಂದು ಆರೋಪಿಸಿದರು.

“ಕಳೆದ 15 ದಿನಗಳ ಹಿಂದಷ್ಟೇ ಮಹಿಳೆಯ ಕೊಲೆಯಾಗಿದೆ. ಬಸ್ ಸಂಚಾರ ಇರುವ ಸ್ಥಳದಿಂದ ನಮ್ಮ ಊರಿಗೆ ಬರಬೇಕೆಂದರೆ 5 ಕಿಲೋಮೀಟರ್ ನಡೆದು ಹೋಗಬೇಕು. ಆ ಸಂದರ್ಭದಲ್ಲಿ ಇಂತಹ ಅಚಾತುರ್ಯಗಳು ಸಂಭವಿಸಿದರೆ ನಾವು ಏನು ಮಾಡಬೇಕು. ನಮ್ಮ ಊರಿನಿಂದ 50ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ನಿತ್ಯವೂ ಶಾಲೆ ಕಾಲೇಜುಗಳಿಗೆ ಓಡಾಡುತ್ತಾರೆ. ಅವರೆಲ್ಲರೂ ನಡೆದೇ ಹೋಗಬೇಕು. ಇಂತಹ ಪರಿಸ್ಥಿಯಲ್ಲಿ ಮಕ್ಕಳು ಶಾಲೆ ಕಾಲೇಜುಗಳಿಗೆ ಹೋಗುವುದಿಲ್ಲವೆಂದು ಭಯದಿಂದ ಹೇಳುತ್ತಿದ್ದಾರೆ. ಜನಪ್ರತಿನಿಧಿಗಳು, ಸರ್ಕಾರ ಹಾಗೂ ಅಧಿಕಾರಿಗಳು ಸಮರ್ಪಕವಾದ ಮೂಲಸೌಕರ್ಯ ಕಲ್ಪಿಸದೆ ನಮ್ಮ ಮಕ್ಕಳ ಜೀವನವನ್ನು ಹಾಳುಮಾಡುತ್ತಿದ್ದಾರೆ. ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದಿರುವ ಕಾರಣ ಬಸ್ ಸಂಚಾರವಿಲ್ಲ. ಕೂಡಲೇ ರಸ್ತೆ ಸರಿಪಡಿಸಿ, ಬಸ್ ಸಂಚಾರವನ್ನು ಆರಂಭಿಸಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಗಳ ಮತದಾನ ಬಹಿಷ್ಕಾರ ಎದುರಿಸಲು ಜನಪ್ರತಿನಿಧಿಗಳು ಸಜ್ಜಾಗಬೇಕು” ಎಂದು ಎಚ್ಚರಿಕೆ ನೀಡಿದರು.
ʼಶೋಷಿತ ಸಮುದಾಯವೆಂಬ ಕಾರಣಕ್ಕೆ ಗ್ರಾಮದ ನಿರ್ಲಕ್ಷ್ಯವಾಗುತ್ತಿದೆಯೇ?ʼ

ನೀಲಗಿರಿಕಾವಲು ಪದವಿ ವಿದ್ಯಾರ್ಥಿನಿ ಲಕ್ಷ್ಮೀ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಾಲೆ ಕಾಲೇಜಿಗೆ ಹೋಗಬೇಕೆಂದರೆ ನೀಲಗಿರಿಕಾವಲು ಗ್ರಾಮದಿಂದ ನಾಲ್ಕೈದು ಕಿಲೋಮೀಟರ್ ನಡೆದುಕೊಂಡು ಹೋಗಬೇಕು. ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಳು ಮುಳ್ಳುಬೇಲಿ ಗಿಡಗಂಟೆಗಳಿಂದ ತುಂಬಿವೆ, ಇತ್ತೀಚಿಗಷ್ಟೇ ಓರ್ವ ಮಹಿಳೆಯ ಕೊಲೆಯಾಗಿದೆ. ಇನ್ನು ಇಂತಹ ರಸ್ತೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಓಡಾಡುವುದು ಕಷ್ಟಸಾಧ್ಯವಾಗಿದೆ. ಸುಡುಗಾಡು ಸಿದ್ಧ ಸಮುದಾಯ, ಭೋವಿ ಮತ್ತು ಲಂಬಾಣಿ ಸಮುದಾಯದವರಿರುವ ಈ ಗ್ರಾಮ ಎಲ್ಲ ರೀತಿಯಲ್ಲಿಯೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಶೋಷಿತ ಸಮುದಾಯದವರಾದ ನಾವು, ಓದಬೇಕು, ಉತ್ತಮ ವಿದ್ಯಾಭ್ಯಾಸ ಪಡೆಯಬೇಕು, ಸಮಾಜದಲ್ಲಿ ಮುಂದೆಬರಬೇಕೆಂಬ ಮನೋಭಾವವಿದ್ದರೂ ಕೂಡ ಇಲ್ಲಿನ ಕೆಟ್ಟ ವ್ಯವಸ್ಥೆ ನಮ್ಮನ್ನು ಮನೆಯಲ್ಲಿಯೇ ಕೂರುವಂತೆ ಮಾಡುತ್ತಿದೆ. ನಾನು ಪದವಿ ವಿದ್ಯಾರ್ಥಿಯಾಗಿದ್ದು, ಕಾಲೇಜಿಗೆ ಹೋಗುವ ಮನಸ್ಸಿದ್ದರೂ ಕೂಡ ಇಲ್ಲಿನ ಪರಿಸ್ಥಿತಿಗಳಿಂದ ಮನೆಯಿಂದ ಹೊರಹೋಗಲು ಭಯವಾಗುತ್ತಿದೆ. ಇನ್ನೊಂದು ಕಡೆ ಸಮರ್ಪಕ ರಸ್ತೆಯಿಲ್ಲದೆ ಗುಂಡಿಗಳಲ್ಲೆಲ್ಲ ನಡೆದು ಹೋಗಬೇಕಾದ ದುಂಸ್ಥಿತಿ ಎದುರಿಸುತ್ತಿದ್ದೇವೆ. ಏನಾದರೂ ಆಗಲಿ ನಡೆದುಕೊಂಡು ಓಡಾಡೋಣವೆಂದರೆ ದುಷ್ಟರ ಕೂಪಕ್ಕೆ ಬಲಿಯಾಗಬೇಕಾದ ಭಯವಿದೆ. ಏನು ಮಾಡಬೇಕೆಂಬುದು ತಿಳಿಯದೇ ಸುಮ್ಮನಾಗಿದ್ದೇವೆ” ಎಂದು ನೋವಿನ ಮಾತುಗಳನ್ನಾಡಿದರು.
ಇದನ್ನೂ ಓದಿ: ಹಾಸನ | ಅಡುಗೆ ಮಾಡಿಲ್ಲವೆಂದು ಸಿಟ್ಟಾಗಿ ತಾಯಿಯನ್ನೇ ಕೊಂದ ಮಗ
ಬಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ ಈ ದಿನ.ಕಾಮ್ ಜತೆಗೆ ಮಾತನಾಡಿ, “ಬಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಗ್ರಾಮಗಳನ್ನು ನಿರ್ಲಕ್ಷ್ಯ ಮಾಡಿಲ್ಲ. ಆಗಾಗ ರಸ್ತೆ ಬದಿಯ ಗಿಡಗಂಟಿಗಳನ್ನು ತೆಗೆಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಹೆಚ್ಚೆಚ್ಚು ಅನುದಾನ ಬಾರದಿರುವ ಕಾರಣ ಹೊಸ ಹೊಸ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಆದ್ಯತೆ ಮೇರೆಗೆ ನೀಲಗಿರಿಕಾವಲು ಗ್ರಾಮಕ್ಕೆ ಅಗತ್ಯವಿರುವ ಕೆಲಸಗಳನ್ನು ಮಾಡಿಕೊಡುತ್ತೇವೆ” ಎಂದರು.