ಡೆಂಘೀ ಜ್ವರದ ಅರಿವು ಮೂಡಿಸಲು ಹೋದಾಗ ಅಂಗನವಾಡಿ ಸಹಾಯಕಿಗೆ ಜಾತಿ ನಿಂದನೆ ಆಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನದಲ್ಲಿ ನಡೆದಿದೆ.
ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಎಲ್ಲೆಡೆ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅಂಗನವಾಡಿ ಕಾರ್ಯಕರ್ತೆಯರು, ಸಹಾಕಿಯರು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಸಹಾಯಕಿ ತೇಜಾ ಎಂಬುವವರು ಡೆಂಘೀ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ಸವರ್ಣೀಯರ ಮನೆಯೊಳಗೆ ಹೋದರೆಂಬ ಕಾರಣಕ್ಕೆ ಜಾತಿ ನಿಂದನೆ ಮಾಡಿದ್ದು, ಅಸ್ಪೃಶ್ಯತೆ ಆಚರಣೆ ನಡೆದಿರುವುದು ಬೆಳಕಿಗೆ ಬಂದಿದೆ.
ಮಠಸಾಗರ ಗ್ರಾಮದ ಅಂಗನವಾಡಿ ಸಹಾಯಕಿ ತೇಜಾ ಎಂಬುವವರು ಎರಡು ವರ್ಷಗಳಿಂದ ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆದಿಕರ್ನಾಟಕ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ಸವರ್ಣೀಯರ ಮನೆಯೊಳಗೆ ಹೋದ ಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಜಾತಿ ನಿಂದನೆ ಮಾಡಿದ್ದಾರೆ.
ಆಸ್ಪೃಶ್ಯತೆ ಆಚರಣೆ ಕುರಿತು ಸಂತ್ರಸ್ತೆ ಸಕಲೇಶಪುರ ನಗರದ ಆರಕ್ಷಕರ ಠಾಣೆ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.
“ಜುಲೈ 4ರಂದು ಗುರುವಾರ 3-30ರ ಸುಮಾರಿಗೆ ನಮ್ಮ ಗ್ರಾಮದ ಎಲ್ಲ ಮನೆಗಳಿಗೆ ಡೆಂಘೀ ಬಗ್ಗೆ ಮಾಹಿತಿ ತಿಳಿಸಲು ಅಂಗನವಾಡಿ ಕಾರ್ಯಕರ್ತೆಯ ಜತೆಗೆ ಸಹಾಯಕಿಯಾದ ನಾನೂ ಕೂಡ ಕುಮಾರಸ್ವಾಮಿ ಎಂಬುವವರ ಮನೆಗೆ ಮನೆಗೆ ಹೋಗಿದ್ದೆವು. ನನ್ನನ್ನು ಹಾಗೂ ಅಂಗನವಾಡಿ ಕಾರ್ಯಕರ್ತೆಯನ್ನು ಮನೆಯ ಒಳಗೆ ಕರೆದು ಕಾಫಿ, ಟೀ ಕೊಟ್ಟು ಕಳಿಸಿದ್ದರು” ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
“ಜುಲೈ 9ರಂದು ಕಾರ್ಯಕರ್ತೆ ಮತ್ತು ಆಶಾಕಾರ್ಯಕರ್ತೆ ಡೆಂಘೀ ಜ್ವರದ ಮಾಹಿತಿ ನೀಡಲು ಅವರ ಮನೆಗೆ ಹೋದಾಗ ಅಂಗನವಾಡಿ ಕಾರ್ಯಕರ್ತೆ ಮಂಗಳ ಗೌರಮ್ಮ ಅವರ ಹತ್ತಿರ ʼನಿನ್ನ ಅಂಗನವಾಡಿ ಸಹಾಯಕಿ ಕೀಳು ಜಾತಿಯೆಂದು ತಿಳಿದಿದ್ದರೂ ನಮ್ಮ ಮನೆಯೊಳಗೆ ಹೇಗೆ ಕರೆದುಕೊಂಡು ಬಂದೆ. ನೀನು, ಅವಳು ಮಾಡಿದ ಅಡುಗೆಯನ್ನು ತಿಂದು ಹೇಗೆ ಒಗ್ಗಿಸಿಕೊಳ್ಳುತ್ತೀಯ, ಹೇಗೆ ಜೀರ್ಣಿಸಿಕೊಳ್ಳುತ್ತೀಯ?ʼ ಎಂದು ಅಂಗನವಾಡಿ ಕಾರ್ಯಕರ್ತೆಯನ್ನೂ ನಿಂದಿಸಿದ್ದಾರೆ. ನೀನು ಹೋಗಿ ಅಂಗನವಾಡಿ ಸಹಾಯಕಿಗೆ ಹೇಳಬೇಕೆಂದು ತಿಳಿಸಿದ್ದಾರೆ” ಎಂದರು.
“ಈ ವಿಚಾರವನ್ನು ಕಾರ್ಯಕರ್ತೆ ನನ್ನ ಗಮನಕ್ಕೆ ತಂದ ಬಳಿಕ ಜುಲೈ 10ರಂದು ಬೆಳಿಗ್ಗೆ 9ರ ಸುಮಾರಿಗೆ ಹೋಗಿ ಕೇಳಿದೆ. ʼಟೀಚರ್ ಹತ್ರ ಹೇಳಿ ಕಳುಹಿಸಿದ್ದೀರಲ್ಲಾ ಏನೆಂದು ಕೇಳಿದೆ. ಆಗ, ʼಹೌದು ನಾವು ಹೇಳಿದ್ದು ನಿಜ. ನೀನು ಹೊರಗಡೆಯೇ ನಿಲ್ಲಬೇಕು. ಹೊಲೆಯ ಜಾತಿಗೆ ಸೇರಿದ ಶೂದ್ರ ಮುಂಡೇವು. ನಿನ್ನ ಸ್ಥಾನ ಆಚೆಯೇ ಇರಬೇಕು. ನೀನು ನಮ್ಮನೆಯ ಒಳಗೆ ಏಕೆ ಬಂದೆʼಯೆಂದು ಕುಮಾರಸ್ವಾಮಿ, ಶೃತಿ ಹಾಗೂ ಭಾನುಮತಿ ಎಂಬುವವರು ನನ್ನನ್ನು ಥಳಿಸಲು ಮುಂದಾದರು” ಎಂದು ಅವಲತ್ತುಕೊಂಡಿದ್ದಾರೆ.
“ನಮ್ಮನ್ನು ಕುಮಾರಸ್ವಾಮಿಯವರು ಒಳಗೆ ಬನ್ನಿ ಎಂದು ಕರೆದ ಮೇಲೆಯೇ ನಾನು ಒಳಗೆ ಬಂದೆ. ನಾನಾಗಿ ಅಥವಾ ನನ್ನ ವೈಯಕ್ತಿಕ ವಿಚಾರಕ್ಕೆ ನಿಮ್ಮ ಮನೆಗೆ ಬಂದಿಲ್ಲ. ನಾನು ಕೆಲಸದ ವಿಚಾರವಾಗಿ ಬಂದು ನನ್ನ ಕರ್ತವ್ಯ ನಿಭಾಯಿಸಿದ್ದೇನೆಂದು ಹೇಳಿದರೂ ಕೂಡಾ, ʼಮನೆಯಿಂದ ಹೊರಗೆಯೇ ನಿಂತು ಹೇಳಬೇಕಾಗಿತ್ತು. ನಿಮ್ಮ ಜಾತಿಯವರು ನಮ್ಮ ಮನೆಗೆ ಬರಬಾರದು, ನೀನು ಬಂದಿದ್ದು ತಪ್ಪುʼ ಎಂದು ನನ್ನನ್ನೇ ದಬಾಯಿಸಿದ್ದಾರೆ” ಎಂದರು.
“ಕುಮಾರಸ್ವಾಮಿ ಮತ್ತು ಶೃತಿ ಎನ್ನುವವರು, ʼನೀನು ಒಳಗಡೆ ಬರಬಾರದಿತ್ತು, ನೀನು ಬಂದು ನಮ್ಮ ಮನೆ ಭಾಗವಾಯಿತು. ನಿನ್ನ ಮರ್ಯಾದೆ ಮೆಟ್ಟಿಲಿನಿಂದ ಆಚೆಯೇ ಹೊರತು ಒಳಗಡೆ ಅಲ್ಲʼವೆಂದು ನಿಂದಿಸಿದರು. ಆಕಸ್ಮಾತ್ ಕಾರ್ಯಕರ್ತೆಯೇ ಪರಿಶಿಷ್ಟ ಜಾತಿಯವರಾಗಿದ್ದರೆ ಏನು ಮಾಡುತ್ತಿದ್ದಿರೆಂದು ಕೇಳಿದ್ದಕ್ಕೆ ಅವರು ಟೀಚರ್ ಆಗಿದ್ರೆ ಅವರೂ ಕೂಡ ಹೊರಗಡೆಯೇ ನಿಲ್ಲಬೇಕಿತ್ತು. ಒಳಗೆ ಬರಬಾರದು ಇನ್ನೂ ಬೇರೆ ಕಡೆಗಳಲ್ಲಿ ಮೆಟ್ಟಿಲ ಹತ್ರನೂ ಹೋಗಬೇಡʼವೆಂದು ಕುಮಾರಸ್ವಾಮಿ ಎಂಬಾತ ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಡೆಂಗ್ಯೂ ಜ್ವರ : ಎಲ್ಲ ಗ್ರಾಮಗಳಲ್ಲಿ ವಾರದೊಳಗೆ ಸ್ವಚ್ಛತೆ ನಡೆಸಿ
ಸಂತ್ರಸ್ತೆ ತೇಜಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕುಮಾರಸ್ವಾಮಿಯವರು ನನಗೆ, ʼನೀನು ಹೊಸದಾಗಿ ಕೆಲಸಕ್ಕೆ ಸೇರಿದ್ದೀಯಾ ಯೋಚನೆ ಮಾಡಿ ಮುಂದುವರಿ. ಕಾನೂನು ಪ್ರಕಾರ ಏನು ಮಾಡುತ್ತೀಯ ಮಾಡು ನೋಡೋಣʼವೆಂದು ಸವಾಲು ಹಾಕಿದ್ದಾರೆ. ಅಲ್ಲದೆ ಕುಮಾರಸ್ವಾಮಿ ಮತ್ತು ಅವರ ಹೆಂಡತಿ ಶೃತಿ ನನ್ನ ತಾಯಿಗೆ ಫೋನ್ ಮಾಡಿ ʼನಿನ್ನ ಮಗಳು ನನ್ನ ವಿರುದ್ಧ ಕಾನೂನು ಹೋರಾಟ ಮಾಡುತ್ತಾಳಂತೆ, ಹೀಗೆಯೇ ಅವಳು ಮುಂದುವರೆದರೆ ಅವಳು ನಮ್ಮ ಮನೆಯಲ್ಲಿ ಚಿನ್ನ, ಹೊಸ ಆಭರಣಗಳನ್ನು ಕದ್ದಿದ್ದಾಳೆಂದು ಪೊಲೀಸ್ ಠಾಣೆಗೆ ದೂರು ನೀಡುತ್ತೇವೆʼ ಎಂದೇಳಿ ನಮ್ಮ ಅಮ್ಮನಿಗೆ ಭಯ ಹುಟ್ಟಿಸಿದ್ದಾರೆ. ಜತೆಗೆ ನನ್ನ ಜಾತಿ ನಿಂದನೆ ಮಾಡಿರುವುದರಿಂದ ನನಗೆ ತುಂಬಾ ನೋವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.
Jaathi Nindane Madiruvavarige Takka Shiksheyagabeku.
Allivarevigu Horata Munduvaresi. Nimma Bembalakke Naviddeve, Jai Bhim