“ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಯಾವ ಹೇಳಿಕೆ ನೀಡಿದ್ದಾರೆಂಬುದು ಗಮನಕ್ಕೆ ಬಂದಿಲ್ಲ. ಯಾವುದೇ ರೀತಿಯ ಎಫ್‌ಐಆರ್ ದಾಖಲಾಗಿಲ್ಲ” ಎಂದು ಹಾಸನ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಅಕ್ರಮ ಗೋ ಹತ್ಯೆ ಖಂಡಿಸಿ ಭಜರಂಗದಳ ನಡೆಸಿದ ಪ್ರತಿಭಟನೆಯಲ್ಲಿ ರಾಜ್ಯ ಸಹ ಸಂಚಾಲಕ ರಘು ಎಂಬಾತ ಪ್ರಚೋದನಕಾರಿ ಭಾಷಣ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಸಂಘಟನೆಯ ಮುಖಂಡ ರಘು ಪ್ರತಿಭಟನೆ ವೇಳೆ, “ನೀನು ತರಕಾರಿ ಮಾರಾಟ ಮಾಡಲು ಮನೆಯ ಮುಂದೆ ಬಂದರೆ ಗುಂಡು ಹಾರಿಸಬೇಕಾಗುತ್ತದೆ” ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.
“ತರಕಾರಿ, ಮೀನು ಮಾರಾಟ ಮಾಡಲು ಹಿಂದೂಗಳ ಮನೆಯ ಬಳಿ ಬರುವಂತಹ ವ್ಯಾಪಾರಿಗಳು ಎಚ್ಚರಿಕೆಯಿಂದಿರಿ. ಇಲ್ಲಾಂದ್ರೆ ನಮ್ಮಲ್ಲಿರುವ ಕೋವಿಯೊಳಗಿನ ಗುಂಡು ಹೊರಗಡೆ ಬರುತ್ತೆ. ನಾವೂ ಕೂಡ ಗುಂಡು ಹಾರಿಸಬೇಕಾಗುತ್ತದೆ” ಎಂದು ಬೆದರಿಕೆ ಹಾಕಿದ್ದಾರೆ.
“ಸಚಿವ ಪ್ರಿಯಾಂಕ ಖರ್ಗೆ ಇತ್ತೀಚಿಗೆ ಮಾತನಾಡುತ್ತಾ ಆ ದಳ, ಈ ದಳ ಎಂದು ಹೇಳಿದ್ದಾರೆ. ನೇರವಾಗಿ ಭಜರಂಗದಳವೆಂದು ಹೇಳಲಿ ಆಗ ನಾವು ನಮ್ಮ ಭಜರಂಗದಳದ ತಾಕತ್ತು ತೋರಿಸುತ್ತೇವೆ” ಎಂದು ಸವಾಲು ಹಾಕಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಾಸನ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹಾಗೂ ಸಕಲೇಶಪುರ ಪೊಲೀಸ್ ಅಧಿಕಾರಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಯಾವ ಹೇಳಿಕೆ ನೀಡಿದ್ದಾರೆಂಬುದು ಗಮನಕ್ಕೆ ಬಂದಿಲ್ಲ. ಯಾವುದೇ ರೀತಿಯ ಎಫ್‌ಐಆರ್ ದಾಖಲಾಗಿಲ್ಲ” ಎಂದು ತಿಳಿಸಿದರು.