ಹೊಸ ವರ್ಷದ ಶುಭಾಶಯ ಕೋರುವ ಹಾನಿಕಾರಕ ಲಿಂಕ್ ಮತ್ತು ಎಪಿಕೆ ಫೈಲ್‌ಗಳ ಕುರಿತು ಎಚ್ಚರಿಕೆಯಿಂದ ಇರುವಂತೆ ಹಾಸನ ಜಿಲ್ಲಾ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಈ ಕುರಿತು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದು, “2025ನೇ ಹೊಸವರ್ಷದ ಸಂದರ್ಭವನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಸಾರ್ವಜನಿಕ ಮೊಬೈಲ್‌ಗಳಿಗೆ ಹಾನಿಕಾರಕ ಲಿಂಕ್ ಮತ್ತು ಎಪಿಕೆ ಫೈಲ್‌ಗಳನ್ನು ಕಳುಹಿಸಿ ಹ್ಯಾಕ್ ಮಾಡುವ ಸಾದ್ಯತೆ ಇರುತ್ತದೆ. ಬಳಿಕ ಹ್ಯಾಕ್ ಮಾಡಿದ ಮೊಬೈಲ್ ಮೂಲಕ ಸಾರ್ವಜನಿಕ ಜಾಲತಾಣಗಳನ್ನು ಬಳಸಿ ಹಾನಿಕಾರಕ ಲಿಂಕ್ ಹಾಗೂ ಎಪಿಕೆ ಫೈಲ್‌ಗಳನ್ನು ದೊಡ್ಡ ಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆ ಇರುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

“ಸಾರ್ವಜನಿಕರು ಈ ರೀತಿಯ ಲಿಂಕ್‌ಗಳು ಹಾಗೂ ಎಪಿಕೆ ಫೈಲ್‌ಗಳನ್ನು ಹೊಸ ವರ್ಷದ ಶುಭಾಷಯಗಳ ಲಿಂಕ್ ಜತೆಗೆ ಸ್ವೀಕರಿಸಿಕೊಂಡಲ್ಲಿ ಅವುಗಳನ್ನು ಕೂಡಲೇ ಡಿಲೀಟ್ ಮಾಡಿರಿ. ಯಾವುದೇ ಕಾರಣಕ್ಕೂ ಸದರಿ ಹಾನಿಕಾರಕ ಲಿಂಕ್ ಮತ್ತು ಎಪಿಕೆ ಫೈಲ್‌ಗಳನ್ನು ಯಾರೊಬ್ಬರಿಗೂ ಶೇರ್ ಮಾಡದಿರಿ. ಹಾನಿಕಾರಕ ಲಿಂಕ್ ಮತ್ತು ಎಪಿಕೆ ಫೈಲ್‌ಗಳನ್ನು ಯಾವುದಾದರೂ ವಾಟ್ಸ್ಯಾಪ್ ಗ್ರೂಪ್‌ಗಳಿಗೆ ನಿಮ್ಮ ಪರಿಚಿತ ವಾಟ್ಸ್ಯಾಪ್ ಸಂಖ್ಯೆಯಿಂದಲೇ ಪೋಸ್ಟ್ ಮಾಡಿದ್ದಲ್ಲಿ ಸದರಿ ಗುಂಪಿನ ಅಡ್ಮಿನ್‌ಗಳು ಅಂತಹ ಸಂದೇಶಗಳನ್ನು ಪರಿಶೀಲನೆ ಮಾಡಿ ಡಿಲೀಟ್ ಮಾಡುವಂತೆ ಈ ಮೂಲಕ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಕೋರ್ಟ್ ವಿಚಾರಣೆಗೆ ಆಗಮಿಸುತ್ತಿದ್ದವರ ಮೇಲೆ ಸಿನೀಮಿಯ ಶೈಲಿಯಲ್ಲಿ ದಾಳಿ
ಯಾವುದೇ ರೀತಿಯ ಸೈಬರ್ ಕ್ರೈಂ ಅಪರಾಧಕ್ಕೆ ಒಳಗಾದಲ್ಲಿ ಕೂಡಲೇ 1930ಗೆ ಕರೆ ಮಾಡಿ ಅಥವಾ www.cybercrime.gov.in ಈ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸುವಂತೆ ಸೂಚನೆ ನೀಡಿದ್ದಾರೆ.