ಜೀತ ಕಾರ್ಮಿಕ ಪದ್ಧತಿ ಆಚರಣೆ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಅಮಾನವೀಯ ಆಚರಣೆಯನ್ನು ಸಂಪೂರ್ಣಗಿ ತೊಡೆದು ಹಾಕಬೇಕು. 6ರಿಂದ 14ವಯಸ್ಸಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವ ಮೂಲಕ ಬಾಲಕಾರ್ಮಿಕ ಪದ್ದತಿ ಹಾಗೂ ಜೀತ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಬೇಕು ಎಂದು ಹೊನ್ನಾವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್ ಪ್ರಭಾ ತಿಳಿಸಿದರು.
ಹಾಸನ ತಾಲೂಕಿನ ದುದ್ದ ಹೋಬಳಿಯ ಹೊನ್ನಾವರ ಗ್ರಾಮ ಪಂಚಾಯಿತಿಯ ಅರಿವು ಕೇಂದ್ರದಲ್ಲಿ ಫೆಬ್ರವರಿ 9ರಂದು ಹಮ್ಮಿಕೊಂಡಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“14 ವರ್ಷಕ್ಕಿಂತ ಒಳಪಟ್ಟ ಮಕ್ಕಳನ್ನು ಕೆಲಸಕ್ಕೆ ಅಟ್ಟುವುದು ಶಿಕ್ಷಾರ್ಹ ಅಪರಾಧ. ಮಕ್ಕಳಿಂದ ದುಡಿಸಿಕೊಳ್ಳುವ ಮಾಲೀಕರು ಹಾಗೂ ದುಡಿಯಲು ಕಳುಹಿಸುವ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. 6ರಿಂದ 14ವಯಸ್ಸಿನ ಮಕ್ಕಳಿಗೆ ಕಡ್ಡಾಯ ಹಾಗೂ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಿರುವುದರಿಂದ ಪ್ರತಿಯೊಂದು ಮಗುವೂ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿಯಬೇಕು. ಯಾವುದೇ ಕಾರಣಕ್ಕೂ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು” ಎಂದ ಅವರು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದರು.
ಇದೇ ವೇಳೆ ಜೀತ ಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು ಹಿರೀಕಡಲೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಕಿರುನಾಟಕ ಪ್ರದರ್ಶನ ನಡೆಯಿತು.
ಜೀತ ಕಾರ್ಮಿಕ ಪದ್ದತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಹೊನ್ನಾವರ ಗ್ರಾಮ ಪಂಚಾಯಿತಿಯ ಅರಿವು ಕೇಂದ್ರದಲ್ಲಿ ನಡೆದ ಕಿರು ನಾಟಕ ಪ್ರದರ್ಶನ pic.twitter.com/LGIHFC7vj1
— eedina.com ಈ ದಿನ.ಕಾಮ್ (@eedinanews) February 10, 2025
ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಅರಿವು ಕೇಂದ್ರದ ಮೇಲ್ವಿಚಾರಕರು ಅರಿವು ಕೇಂದ್ರಗಳಲ್ಲಿ ಮಕ್ಕಳಿಗೆ ಜೀತ ಕಾರ್ಮಿಕ ಪದ್ದತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಚಟುವಟಿಕೆಗಳನ್ನು ಆಯೋಜಿಸಬೇಕು ಎಂದು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಹೊನ್ನಾವರ ಗ್ರಾಮ ಪಂಚಾಯಿತಿಯ ಅರಿವು ಕೇಂದ್ರದಲ್ಲಿ ಫೆಬ್ರವರಿ 9ರಂದು ಜೀತ ಕಾರ್ಮಿಕ ಪದ್ದತಿ ನಿರ್ಮೂಲನಾ ದಿನಾಚರಣೆ ನಡೆಯಿತು.
ಪಂಚಾಯಿತಿ ಅಧ್ಯಕ್ಷ ಪಿ ಕೆ ಸುರೇಶ್, ಸದಸ್ಯರುಗಳಾದ ರಂಗಸ್ವಾಮಿ, ಶೇಷಾದ್ರಿ, ಮಾಜಿ ಅಧ್ಯಕ್ಷ ಶಿವುಸ್ವಾಮಿ, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಂಥಾಲಯ ಅರಿವು ಕೇಂದ್ರದ ಮೇಲ್ವಿಚಾರಕ ಪಾಂಡುರಂಗ ಎಚ್ ಜಿ ಇದ್ದರು.