ಅಂಗನವಾಡಿ ಕಾರ್ಯಕರ್ತೆಯರನ್ನು ನಿರ್ಲಕ್ಷ್ಯ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ, ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತೆಯರು ಹಾಸನದ ಸಿಡಿಪಿಒ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರು.
“ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಿ “ಕರಾಳ ದಿನ” ಆಚರಿಸುತ್ತಿದ್ದೇವೆ. ದೇಶ ಎದುರಿಸುತ್ತಿರುವ ಗಂಭೀರ ಸವಾಲುಗಳ ಬಗ್ಗೆ ನಿಮ್ಮ ಮಂತ್ರಿಮಂಡಲದ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಈ ಪ್ರತಿಭಟನೆ ಮಾಡುತ್ತಿದ್ದೇವೆ. ದೇಶದ ಜನತೆ ಭಾರೀ ಪ್ರಮಾಣದ ಅಪೌಷ್ಟಿಕತೆ ಎದುರಿಸುತ್ತಿದ್ದಾರೆ. ದೇಶದ 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಜೀವನ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದೇಶದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಮಾಡಿ, ಜಾರಿಗೊಳಿಸಬೇಕು. ಇಎಸ್‌ಐ, ಪಿಎಫ್, ಪಿಂಚಣಿ, ಎಕ್ಸ್‌ಗ್ರೇಷಿಯಾ ಸೇರಿದಂತೆ ಇತರೆ ಸಾಮಾಜಿಕ ಭದ್ರತೆಗಳನ್ನು ಒದಗಿಸಬೇಕು” ಎಂದು ಒತ್ತಾಯಿಸಿದರು.
“45 ಮತ್ತು 46ನೇ ಇಂಡಿಯನ್ ಲೇಬರ್ ಕಾನ್ಫರೆನ್ಸ್‌ಗಳ ಶಿಫಾರಸು ಜಾರಿ ಮಾಡಲೇಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಕೊಡುವ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೂಡಲೇ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.
“ಸುಪ್ರಿಂ ಕೋರ್ಟ್ ಮತ್ತು ಸಂಸದೀಯ ಮಂಡಳಿಗಳ ಶಿಫಾರಸುಗಳ ಪ್ರಕಾರ ದೇಶದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮೂಲ ವೇತನ ನಿಗದಿ, ವೇತನ ಹೆಚ್ಚಳ ನಿಗದಿ ಸೇರಿದಂತೆ ಇತರೆ ಭತ್ಯೆಗಳ ಪರಿಶೀಲನೆ ಮತ್ತು ನಿಗದಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಸಮಿತಿ ರಚಿಸಬೇಕು” ಎಂದು ಒತ್ತಾಯಿಸಿದರು.
“ನಮಗೆ ಏಕ ರೂಪದ ಸೇವಾ ನಿಯಮಗಳನ್ನು ಕೂಡಲೇ ರೂಪಿಸಬೇಕು. ಸಂಘಟನೆ ಮಾಡಿದ ಮತ್ತು ಮುಷ್ಕರಗಳಲ್ಲಿ ಭಾಗವಹಿಸಿದ ಕಾರಣಕ್ಕಾಗಿ ದೆಹಲಿಯಲ್ಲಿ ಕಾನೂನು ಬಾಹಿರವಾಗಿ ಕೆಲಸದಿಂದ ವಜಾ ಮಾಡಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕೂಡಲೇ ಮರುನೇಮಕ ಮಾಡಬೇಕು. ಅಲ್ಲದೇ, ನಾವು ಸಂಘಟಿತರಾಗುವ, ಪ್ರತಿಭಟಿಸುವ ಹಕ್ಕನ್ನು ಖಾತರಿ ಮಾಡಬೇಕು” ಎಂದು ಮನವಿ ಮಾಡಿದರು.
“ನಾವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ಕೊಡಬೇಕು. ಹಂತಹಂತವಾಗಿ ಅವುಗಳಿಗೆ ಬದಲಾಗಿ ಟ್ಯಾಬ್ಲೆಟ್‌ಗಳನ್ನು ಕೊಡಬೇಕು. ಅವುಗಳಿಗೆ ನೆಟ್ವರ್ಕ್, ಡಾಟ್ ಪ್ಯಾಕ್‌ಗಳನ್ನು ಖಾತರಿ ಮಾಡಬೇಕು. ಆ ಮೊಬೈಲ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಪ್ರಾದೇಶಿಕ ಭಾಷೆಗಳ ಪ್ರೋಗ್ರಾಮ್‌ಗಳನ್ನು ಅಳವಡಿಸಬೇಕು. ಹಾಗಾದಾಗ ಮಾತ್ರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಕಂದಾಯ ಇಲಾಖೆ ಅಧಿಕಾರಿಗಳಿಂದಲೇ ಭೂಗಳ್ಳರಿಗೆ ಬೆಂಬಲ; ಆರೋಪ
“ಇಲಾಖಾ ಕೆಲಸ ಮಾಡುವವರನ್ನು ಯಾವುದೇ ಕಾರಣಕ್ಕೂ ಬಲಿಪಶುಗಳನ್ನಾಗಿ ಮಾಡಬಾರದು, ಕಿರುಕುಳ ನೀಡಬಾರದು. ‘ಪೋಷಣ್ ಅಭಿಯಾನ’ಕ್ಕೆ ಆಧಾರ್ ಅಥವಾ ಫೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಅದೇಶವನ್ನು ಹಿಂಪಡೆಯಬೇಕು. ಆ ಸಂಬಂಧ ಸುಪ್ರಿಂ ಕೋರ್ಟ್‌ನ ಮಾರ್ಗದರ್ಶನ ಪಾಲಿಸಬೇಕು” ಎಂದು ಆಗ್ರಹಿಸಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ತಮ್ಮ ಜೀವ ಮತ್ತು ಜೀವನಗಳನ್ನು ಪಣಕ್ಕಿಟ್ಟು, ಅಪೌಷ್ಟಿಕತೆ ವಿರುದ್ಧ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿದ ಲಕ್ಷಾಂತರ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ದೀರ್ಘಕಾಲದ ಬೇಡಿಕೆಗಳಾಗಿದ್ದು, ಇವುಗಳನ್ನು ಕೂಡಲೇ ಈಡೇರಿಸಬೇಕು” ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷೆ ಟಿ ಎಚ್ ಜಯಂತಿ, ತಾಲೂಕು ಅಧ್ಯಕ್ಷೆ ಎಂ ಬಿ ಪುಷ್ಪ, ಪ್ರಧಾನ ಕಾರ್ಯದರ್ಶಿ ಲಲಿತಾ, ಖಜಾಂಚಿ ಮೀನಾಕ್ಷಿ ಸೇರಿದಂತೆ ಬಹುತೇಕರು ಇದ್ದರು.