ಹಿರಿಯ ರಾಜಕಾರಣಿ, ಸಹಕಾರಿ ಧುರೀಣ ಕೆ ಎನ್ ರಾಜಣ್ಣ ಅವರನ್ನು ಮಂತ್ರಿ ಸ್ಥಾನದಿಂದ ಕೈ ಬಿಟ್ಟಿರುವುದನ್ನು ಖಂಡಿಸಿ ಹಾಗೂ ಮರಳಿ ಮಂತ್ರಿ ಮಾಡಬೇಕೆಂದು ಆಗ್ರಹಿಸಿ ಹಾಸನ ನಗರದಲ್ಲಿಂದು ವಾಲ್ಮೀಕಿ ನಾಯಕರ ಸಂಘ, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಳೆಯ ನಡುವೆಯೂ ಹೇಮಾವತಿ ಪ್ರತಿಮೆ ಬಳಿಯಿಂದ ಎನ್ ಆರ್ ವೃತ್ತದ ಮೂಲಕ ತಮಟೆ ಬಾರಿಸುತ್ತ, ರಾಜಣ್ಣ ಅವರ ಪರ ಘೋಷಣೆ ಮೊಳಗಿಸುತ್ತ ಮೆರವಣಿಗೆ ಹೊರಟ ನೂರಾರು ಮಂದಿ ಡಿಸಿ ಕಚೇರಿ ತಲುಪಿದರು.
ಇದೆ ವೇಳೆ ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಹಾಗೂ ದಲಿತ ಜನಪರ ಸಂಘಟನೆಗಳ ಒಕ್ಕೂಟ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಹಾಗೂ ರಾಜಣ್ಣ ಅವರ ಅಭಿಮಾನಿಗಳು ಸೇರಿ ಕೆ ಎನ್ ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಪುನರ್ ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
“ರಾಜಣ್ಣ ಅವರು ದೊಡ್ಡ ಪ್ರಮಾದ ಮಾಡಿಲ್ಲ, ಹಾಗಾಗಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಿರಂತರವಾಗಿ ಮುಂದುವರೆಯಲಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರಿನ ಸರಸ್ವತಿ ಎಂಬುವರು ಮಾತನಾಡಿ, “ರಾಹುಲ್‌ಗಾಂಧಿ ಅವರಿಗೆ ಕನ್ನಡ ಬರುವುದಿಲ್ಲ. ಆದರೆ ಅವರಿಗೆ ಒತ್ತಡ ಹೇರಿ ರಾಜಣ್ಣ ಅವರ ಮೇಲೆ ಏಕಾಏಕಿ ಕ್ರಮ ಆಗಿದೆ. ತುಮಕೂರಿನಲ್ಲಿ ಕಾಂಗ್ರೆಸ್ ಏಳೆಂಟು ಸ್ಥಾನ ಗೆಲ್ಲಲು ರಾಜಣ್ಣ ಅವರೇ ಕಾರಣ. ಹೋರಾಟ ಸ್ವಭಾವದ ಅವರು ಸದಾ ಬಡವರ ಪರ ಕೆಲಸ ಮಾಡಿದ್ದಾರೆ. ಅಂಥವರು ವಾಲ್ಮೀಕಿ ಸಮಾಜದಲ್ಲಿ ಹುಟ್ಟಿದ್ದೇ ತಪ್ಪಾಯಿತೇ? ಎಂಬ ನೋವು ನಮ್ಮನ್ನು ಕಾಡುತ್ತಿದೆ. ರಮೇಶ್ ಜಾರಕಿಹೊಳಿಗೆ ಹನಿಟ್ರ್ಯಾಪ್ ಮಾಡಿದರು. ನಾಗೇಂದ್ರ ಅವರ ಮೇಲೆ ಅರೋಪ ಹೊರಿಸಿದರು. ಈಗ ರಾಜಣ್ಣ ಅವರ ಮೇಲೆ ಕ್ರಮ ಆಗಿದೆ. ಕಾಂಗ್ರೆಸ್ ಕೈ ಹಿಡಿಯುವುದೇ ಹೆಚ್ಚು ಅಹಿಂದ ಮತಗಳು, ರಾಜಣ್ಣ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸದೇ ಇದ್ದರೆ, ಮರಳಿ ಮಂತ್ರಿಸ್ಥಾನ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಹಿರಿಯ ದಲಿತ ಮುಖಂಡ ಹೆಚ್ ಕೆ ಸಂದೇಶ್ ಮಾತನಾಡಿ, “ಮಾತಿನ ಭರದಲ್ಲಿ ಆಡಿದ ಮಾತನ್ನೇ ಕಾರಣವಾಗಿಸಿ ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಸರಿಯಲ್ಲ. ರಾಜಣ್ಣ ಅವರು ಸಹಕಾರ ಕ್ಷೇತ್ರದ ದೊರೆ. ಅವರು ಮೀಸಲು ಕ್ಷೇತ್ರದಿಂದ ಗೆದ್ದಿಲ್ಲ, ಅಕ್ರಮ ಮಾಡಿ ವಜಾ ಆಗಿದ್ದರೆ ನಮ್ಮ ತಕರಾರು ಇಲ್ಲ. ಒಂದು ನೋಟಿಸ್ ಕೂಡ ನೀಡದೆ ಸಚಿವ ಸ್ಥಾನ ಕಿತ್ತುಕೊಂಡಿರುವುದು ನಮಗೆಲ್ಲ ಆತಂಕ ತಂದಿದೆ. ನೇರ, ನಿಷ್ಠೂರ ನಡೆಯ ನಾಯಕನಿಗೆ ಹೀಗೆ ಮಾಡಿರುವುದು ಸರಿಯಲ್ಲ. ಸಿಎಂ, ಡಿಸಿಎಂ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯದ ಶಾಸಕರು, ಸಚಿವರು ಹೈಕಮಾಂಡ್ ಮೇಲೆ ಒತ್ತಡ ಹೇರಿ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೋಮಶೇಖರ್ ಮಾತನಾಡಿ, “ಸಮಾಜದ ಬಗ್ಗೆ ಕಾಳಜಿ ಇರುವ ನೇರ ಮತ್ತು ನಿಷ್ಠುರವಾದಿ ರಾಜಕಾರಣಿ ರಾಜಣ್ಣ ಅವರನ್ನು ಕೈಬಿಟ್ಟಿರುವುದು ಕಾಂಗ್ರೆಸ್ ಸರ್ಕಾರದ ದಲಿತ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಈ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಶೀಘ್ರವೇ ರಾಜಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
“ಕಾಂಗ್ರೆಸ್ ನಾಯಕರು ಮತಗಳ್ಳತನದ ಬಗ್ಗೆ ದೇಶಾದ್ಯಂತ ಮಾತನಾಡುತ್ತಿದ್ದಾರೆ. ಇದರಿಂದ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಮೋಸ ಆಗಿದೆ ಎಂದು ದನಿ ಎತ್ತುತ್ತಿದ್ದಾರೆ. ಆದರೆ ಅದೇ ಕಾಂಗ್ರೆಸ್‌ನವರು ಸಣ್ಣ ಸಣ್ಣ ಜಾತಿ ನಾಯಕರ ಮೇಲೆ ಹೀಗೆ ದಾಳಿ, ಗದಾಪ್ರಹಾರ ಮಾಡಿದರೆ ಪ್ರಜಾಪ್ರಭುತ್ವದ ಆಶಯ ಎಲ್ಲಿ ಹುಳಿಯಲಿದೆ, ಗುಬ್ಬಿ ಮೇಲೇ ಬ್ರಹ್ಮಾಸ್ತ್ರ ಸರಿಯಲ್ಲ. ಕಾಂಗ್ರೆಸ್ ಮುಂದೆಯೂ ನಿರಾಯಾಸದಿಂದ ಗೆಲ್ಲುತ್ತೇವೆ ಎಂಬ ಭ್ರಮ ಬೇಡ. ಭ್ರಷ್ಟಾಚಾರ, ಅಕ್ರಮ ಮಾಡದ ರಾಜಣ್ಣ ಅವರನ್ನು ಮತ್ತೆ ಮಂತ್ರಿ ಮಾಡದೇ ಇದ್ದರೆ ಮುಂದೆ ನಮ್ಮ ತಾಕತ್ತು ತೋರಿಸುತ್ತೇವೆ” ಎಂದು ದಲಿತ ಮುಖಂಡ ಕೃಷ್ಣದಾಸ್ ಎಚ್ಚರಿಸಿದರು.
“ಕೆ ಎನ್ ರಾಜಣ್ಣ ಸರ್ವ ಸಮಾಜದ ನಾಯಕರು, ಯಾವುದೋ ಒಂದು ವರ್ಗಕ್ಕೆ ಸೀಮಿತವಾದ ವ್ಯಕ್ತಿಯಲ್ಲ ಬದಲಿಗೆ ಎಲ್ಲ ಸಮುದಾಯ ಶಕ್ತಿ, ತನ್ನ ವರ್ಚಸ್ಸು ಏನೆಂಬುದನ್ನು ಪ್ರತಿ ಹಂತದಲ್ಲೂ ಸಾಬೀತು ಮಾಡಿ ಕೊಂಡು ಬರುತ್ತಿರುವ ಜನಾನುರಾಗಿ ರಾಜಕಾರಣಿ,ಸಮಾಜದ ಸ್ವಾಸ್ಥ್ಯದ ಬಗ್ಗೆ ಕಾಳಜಿ ಇರುವ ಸಹಕಾರ ಕ್ಷೇತ್ರದ ಮುಂದಾಳು, ಇಂತಹ ನಾಯಕರನ್ನು ಸಂಪುಟದಿಂದ ಏಕಾಏಕಿ ಕೈ ಬಿಟ್ಟಿರುವ ಸರಿಯಲ್ಲ ಈ ಬಗ್ಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಗಮನ ಹರಿಸಿ ಮರಳಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ನ್ಯಾಯ ದೊರಕಿಸಿಕೊಡಬೇಕು” ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ರಾಷ್ಟ್ರೀಯ ಹೆದ್ದಾರಿಯಲ್ಲಿ 18 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ – ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ
ಪ್ರತಿಭಟನೆಯಲ್ಲಿ ಬೇಲೂರು ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಮಧುನಾಯಕ, ಹಾಸನದ ರಂಗನಾಯಕ, ಚನ್ನರಾಯಪಟ್ಟಣದ ವಿನಯ್ ದೀಪು, ಅರಸೀಕೆರೆ ತಾಲೂಕು ಅಧ್ಯಕ್ಷ ಹನುಮಪ್ಪ ಗೊಲ್ಲರಹಳ್ಳಿ, ಆಲೂರು ಅಧ್ಯಕ್ಷ ದೇವರಾಜು, ಅರಕಲಗೂಡು ಅಧ್ಯಕ್ಷ ಬಸವನಾಯಕ, ವಾಲ್ಮೀಕಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪನಾಯಕ, ಕಾಂಗ್ರೆಸ್ ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಗಣೇಶ್ ನಾಯಕ್, ವಾಲ್ಮೀಕಿ ಸಮಾಜದ ಮುಖಂಡರಾದ ಶಿವಕುಮಾರ್, ಶಂಕರನಾಯಕ, ಶಿವಮೂರ್ತಿ, ರಾಜನಾಯಕ, ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್, ಡಿಎಸ್‌ಎಸ್ ಸಂಚಾಲಕ ಸೋಮಶೇಖರ್, ರೇಖಾ ಜಯಣ್ಣ, ದಿನೇಶ್, ವಿಠಲ್, ರಾಜು ಗೊರೂರು, ಜಗದೀಶ್, ಪ್ರದೀಪ್, ರಂಗನಾಥ್, ಮಹೇಶ್, ಸಿದ್ದಮಲ್ಲನಾಯಕ, ದೇವರಾಜು, ನೀಡುಗರಹಳ್ಳಿ ಸಿದ್ದಪ್ಪ, ರಾಜೇಶ್, ಈರೇಶ್ ಹಿರೇಹಳ್ಳಿ, ರಾಜಶೇಖರ್ ಹುಲಿಕಲ್, ತಿರುಪತಿ ಗಿರೀಶ್ ಸೇರಿಸಿದಂತೆ ಇತರರು ಇದ್ದರು.