ಅಲೆಮಾರಿ ಹಂದಿಜೋಗಿ ಕಾಲೋನಿಯಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಒಂದು ಎಕರೆ ಭೂಮಿ ಮಂಜೂರಾತಿಗಾಗಿ ಆಗ್ರಹಿಸಿ ಸಿಜಿಎಂ(ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರ) ಒಕ್ಕೂಟದಿಂದ ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರರ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, “ಕೆ ಗೋಪನಹಳ್ಳಿಯ ಅಲೆಮಾರಿ ಹಂದಿ ಜೋಗಿ ಕಾಲೋನಿಗೆ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಲು 1 ಎಕರೆ ಜಾಗವನ್ನು ಮಂಜೂರು ಮಾಡಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.
ಜಿಲ್ಲಾಧ್ಯಕ್ಷ ವಿಜಯಕುಮಾರ ಬಾಗಿವಾಳು ಮಾತನಾಡಿ, “ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಗೆ ಬರುವ ಕೆ ಗೋಪನಹಳ್ಳಿ(ಕೆರೆಗೋಡು ದಾಖಲೆ) ಗ್ರಾಮದಲ್ಲಿ ಅಲೆಮಾರಿ ಹಂದಿಜೋಗಿ ಜನಾಂಗದ ಸುಮಾರು 30 ಕುಟುಂಬಗಳು ವಾಸವಾಗಿದ್ದು, ಸದರಿ ಹಂದಿಜೋಗಿ ಕಾಲೋನಿಯ ದಲಿತ ಸಮುದಾಯದವರು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು, ಮನರಂಜನೆ, ಹಬ್ಬ ಹರಿದಿನ, ಮದುವೆ ಮುಂತಾದ ಕಾರ್ಯಕ್ರಮ ಮತ್ತು ಸಮಾರಂಭಗಳನ್ನು ಮಾಡಲು ಜಾಗವಿಲ್ಲದ ಕಾರಣ ರಸ್ತೆ, ಬೀದಿಗಳಲ್ಲಿ ಸಮಾರಂಭಗಳನ್ನು ಮಾಡುತ್ತಿರುವುದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ದಲಿತ ಕಾಲೋನಿಗೆ ಒಂದು ಭವನ ನಿರ್ಮಿಸಿಕೊಡಬೇಕು” ಎಂದು ಒತ್ತಾಯಿಸಿದರು.
“ಕೆರಗೋಡು ಗ್ರಾಮದ ಸರ್ವೆ ನಂಬರ್ 46ರಲ್ಲಿ 5 ಎಕರೆ 17 ಗುಂಟೆ ಸರ್ಕಾರಿ ಗೋಮಾಳ ಜಾಗವಿದ್ದು, ಅಲೆಮಾರಿ ಹಂದಿಜೋಗಿ ಕಾಲೋನಿಗೆ ಹೊಂದಿಕೊಂಡಿದೆ. ಈ ಜಾಗದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಭವನ ಮತ್ತು ಉದ್ಯಾನವನ ನಿರ್ಮಾಣ ಮಾಡಲು ಒಂದು ಎಕರೆ ಜಾಗವನ್ನು ಮಂಜೂರು ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಎಲ್ಲೆಂದರಲ್ಲಿ ಕಸ ಸುರಿಯುವ ನಾಗರಿಕರಿಗೆ ಇನ್ಮುಂದೆ ದಂಡ ವಿಧಿಸುವುದೇ ಪಾಲಿಕೆ?
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಹುಳವಾರೆ, ಜಿಲ್ಲಾ ಕಾರ್ಯಧ್ಯಕ್ಷ ಗೋವಿಂದರಾಜು ಎಂ ವಿ, ರಂಗಸ್ವಾಮಿ ಎಸ್ ಎಸ್, ಚಂದ್ರಶೇಖರ್ ಸಾಣೆನಹಳ್ಳಿ, ಕೇಶವಣ್ಣ ಮುಸಾವತ್ತೂರು, ಪ್ರಸನ್ನಕುಮಾರ, ಭೀಮಾ ಶ್ರೇಯಸ್, ಗ್ರಾಮಸ್ಥರಾದ ಮಂಜುನಾಥ್, ಹರೀಶ, ಗೋವಿಂದರಾಜು, ಜಯಣ್ಣ ಸೇರಿದಂತೆ ಇತರರು ಇದ್ದರು.