ಸಮಗ್ರ, ಸಮೃದ್ಧ ಮತ್ತು ಸೌಹಾರ್ದ ಕರ್ನಾಟಕಕ್ಕಾಗಿ ಡಿಸೆಂಬರ್ 29ರಿಂದ 31ರವರೆಗೆ ತುಮಕೂರು ನಗರದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಸಿಪಿಐಎಂ 24ನೇ ರಾಜ್ಯ ಸಮ್ಮೇಳನ ನಡೆಯಲಿದ್ದು, ಇದರ ಅಂಗವಾಗಿ ಸಿಪಿಐಎಂ ಹಾಸನ ಜಿಲ್ಲಾ ಕಚೇರಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್ ಆರ್ ನವೀನ್ ಕುಮಾರ್, “ಸೆಪ್ಟಂಬರ್ 29ರಂದು ನಡೆಯುವ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ಕುರಿತು ಚರ್ಚಿಸಲಾಗುವುದು. ರೈತರು, ಕಾರ್ಮಿಕರು, ದಲಿತರು, ಮಹಿಳೆಯರು ಒಟ್ಟಾರೆ ದುಡಿಯುವ ಜನಸಮುದಾಯ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದೆ. ಈ ನೀತಿಗಳ ಕುರಿತು ಚರ್ಚಿಸಿ ಪ್ರಬಲ ಪ್ರತಿರೋಧವನ್ನು ಒಡ್ಡಲು ಜನಸಮುದಾಯವನ್ನು ಸಂಘಟಿಸುವ ಕುರಿತು ಮತ್ತು ಬಂಡವಾಳಶಾಹಿ ನೀತಿಗಳನ್ನು ಜಾರಿಗೆ ತರುತ್ತಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನೀತಿಗಳಿಗೆ ಪರ್ಯಾಯವಾಗಿ ದುಡಿಯುವ ವರ್ಗದ ನೀತಿಗಳಿಗಾಗಿ ಪರ್ಯಾಯ ರಾಜಕೀಯ ಆಂದೋಲನ ರೂಪಿಸಲು ಈ ಸಮ್ಮೇಳನದಲ್ಲಿ ಗಂಭೀರವಾಗಿ ಚರ್ಚಿಸಲಾಗುವುದು” ಎಂದು ತಿಳಿಸಿದರು.
ಬಹಿರಂಗಸಭೆಯಲ್ಲಿ ಕೇರಳದ ಮಾಜಿ ಶಿಕ್ಷಣ ಸಚಿವರು ಮತ್ತು ಸಿಪಿಐಎಂ ಪಾಲಿಟ್ ಬ್ಯೂರೋ ಸದ್ಯರಾದ ಎಂ ಎ ಬೇಬಿ, ಬಿ ವಿ ರಾಘವಲು, ಮಾಜಿ ಸಂಸದ ಎ ವಿಜಯರಾಘವನ್, ರಾಜ್ಯ ಕಾರ್ಯದರ್ಶಿ ಯು ಬಸವರಾಜ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಜಿಲ್ಲಾ ಸಮ್ಮೇಳನಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮುನ್ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಾರೆ. ಹಾಸನ ಜಿಲ್ಲೆಯಿಂದಲೂ ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಪಕ್ಷದ ಸದಸ್ಯರು ಹಾಗೂ ಹಿತೈಷಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ?ಹಾಸನ | ಮಲೆನಾಡಿನ ಅರಣ್ಯ ಕಾಯ್ದೆ, ಭೂಮಿ-ವಸತಿ ಸಮಸ್ಯೆ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತುವೆ: ಸಂಸದ ಶ್ರೇಯಸ್ ಪಟೇಲ್
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರುಗಳಾದ ಧರ್ಮೇಶ್, ಜಿ ಪಿ ಸತ್ಯನಾರಾಯಣ, ಎಂ ಜಿ ಪೃಥ್ವಿ, ಅರವಿಂದ ಇದ್ದರು.
