ಮೃತದೇಹ ಹೂಳಲು ಜಾಗ ಇಲ್ಲವೆಂಬ ಕಾರಣಕ್ಕೆ ಕುಟುಂಬವೊಂದು ಮನೆ ಮುಂದೆಯೇ ಶವ ಹೂಳಲು ಮುಂದಾದ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶಂಭುನಾಥಪುರದಲ್ಲಿ ನಡೆದಿದೆ.
ಗ್ರಾಮದ ಗಿಡ್ಡಯ್ಯ (54) ಎಂಬುವರು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಆದರೆ, ಅವರ ಅಂತ್ಯಕ್ರಿಯೆ ನಡೆಸಲು ದಲಿತ ಕುಟುಂಬಗಳಿಗೆ ಭೂಮಿಯೇ ಇಲ್ಲ. ಸ್ಮಶಾನ ಭೂಮಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಮರೀಚಿಕೆಯಾಗಿದೆ. ದಲಿತ ಕುಟುಂಬಗಳಿಗೆ ಈವರೆಗೂ ಸ್ಮಶಾನ ಭೂಮಿಯೇ ಮಂಜೂರಾಗಿಲ್ಲ.
ಸ್ಮಶಾನ ಭೂಮಿಗಾಗಿ ಹಲವು ವರ್ಷಗಳಿಂದ ದಲಿತ ಕುಟುಂಬಗಳು ಹೋರಾಟ ಮಾಡುತ್ತಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಸ್ಮಶಾನ ಭೂಮಿ ಮಂಜೂರು ಮಾಡಲು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿರುವುದರಿಂದ ಶವ ಸಂಸ್ಕಾರಕ್ಕೆ ಜಾಗವಿಲ್ಲದ ಕಾರಣ ಮನೆ ಮುಂದೆಯೇ ಅಂತ್ಯ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಸತಿ ಶಾಲೆ ಪ್ರಾಚಾರ್ಯರ ವಿರುದ್ಧ ಕಿರುಕುಳ ಆರೋಪ; ಕಠಿಣ ಕ್ರಮಕ್ಕೆ ಡಿವಿಪಿ ಆಗ್ರಹ
ಮನೆ ಮುಂದೆಯೇ ಅಂತ್ಯಸಂಸ್ಕಾರಕ್ಕೆ ಮುಂದಾದ ಸುದ್ದಿ ತಿಳಿದ ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದು, ಮನೆ ಮುಂದೆ ಅಂತ್ಯ ಸಂಸ್ಕಾರ ಮಾಡುವುದನ್ನು ತಡೆದರು. ಬಳಿಕ ಸರ್ಕಾರಿ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.